ಮನುಷ್ಯನನ್ನು ಜೀವಚ್ಛವವಾಗಿಸುವ ಪಾರ್ಶ್ವವಾಯು ಬಗ್ಗೆ ನಿಮಗೆಷ್ಟು ಗೊತ್ತಿದೆ ?

Update: 2019-09-07 16:32 GMT

ನಮ್ಮ ಶರೀರದ ಯಾವುದೇ ಭಾಗದಲ್ಲಿಯ ಸ್ನಾಯು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ಅಂತಹ ಸ್ಥಿತಿಯನ್ನು ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಮಿದುಳು ಮತ್ತು ಸ್ನಾಯುಗಳ ನಡುವೆ ಸಂದೇಶಗಳು ರವಾನೆಯಾಗುವ ರೀತಿಯಲ್ಲಿ ಏನಾದರೂ ಗಂಭೀರ ಲೋಪವುಂಟಾದಾಗ ಪಾರ್ಶ್ವವಾಯು ಸಂಭವಿಸುತ್ತದೆ.

ಪಾರ್ಶ್ವವಾಯು ಸಾಮಾನ್ಯವಾಗಿ ಭಾಗಶಃ ಮತ್ತು ಸಂಪೂರ್ಣ ಹೀಗೆ ಎರಡು ವಿಧಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದು ನಮ್ಮ ಶರೀರದ ಒಂದು ಅಥವಾ ಎರಡೂ ಪಾರ್ಶ್ವಗಳನ್ನು ಬಾಧಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಶರೀರದ ಒಂದು ಜಾಗವು ಮಾತ್ರ ಪಾರ್ಶ್ವವಾಯುವಿಗೆ ಗುರಿಯಾಗುತ್ತದೆ, ಕೆಲವು ಪ್ರಕರಣಗಳಲ್ಲಿ ಶರೀರದ ಹೆಚ್ಚಿನ ಭಾಗಗಳನ್ನು ಆವರಿಸಿರುತ್ತದೆ. ಕಾಲುಗಳಂತಹ ಶರೀರದ ಕೆಳಭಾಗಕ್ಕೆ ಪಾರ್ಶ್ವವಾಯು ಉಂಟಾದರೆ ಅದನ್ನು ಪ್ಯಾರಾಪ್ಲೀಜಿಯಾ ಎಂದು ಕರೆಯಲಾಗುತ್ತದೆ. ಕಾಲುಗಳು ಮತ್ತು ತೋಳುಗಳು ರೋಗಪೀಡಿತಗೊಂಡರೆ ಅದನ್ನು ಕ್ವಾಡ್ರಿಪ್ಲೀಜಿಯಾ ಎನ್ನಲಾಗುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ಮಿದುಳಿಗೆ ಆಘಾತ ಅಥವಾ ಮಿದುಳು ಬಳ್ಳಿಗೆ ಪೆಟ್ಟಿನಂತಹ ಗಾಯಗಳು ಅಥವಾ ಮುರಿದ ಕುತ್ತಿಗೆ ಪಾರ್ಶ್ವವಾಯುವಿಗೆ ಕಾರಣಗಳಾಗಿವೆ. ಅಮಿಟ್ರಾಫಿಕ್ ಲ್ಯಾಟರಲ್ ಸ್ಲೆರೊಸಿಸ್‌ನಂತಹ ನರಸಂಬಂಧಿ ರೋಗಗಳು, ಗಿಲೈನ್-ಬ್ಯಾರ್ ಸಿಂಡ್ರೋಮ್‌ ನಂತಹ ಸ್ವರಕ್ಷಿತ ರೋಗಗಳು, ಮುಖದ ಸ್ನಾಯುಗಳನ್ನು ಬಾಧಿಸುವ ಬೆಲ್ಸ್ ಪಾಲ್ಸಿ ಇವೂ ಪಾರ್ಶ್ವವಾಯುವಿಗೆ ಕಾರಣಗಳಲ್ಲಿ ಸೇರಿವೆ.

ಸಾಮಾನ್ಯವಾಗಿ ನರಮಂಡಲದಲ್ಲಿ,ನಿರ್ದಿಷ್ಟವಾಗಿ ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಹಾನಿಯುಂಟಾದಾಗ ಪಾರ್ಶ್ವವಾಯು ಉಂಟಾಗುತ್ತದೆ. ಆಘಾತ, ಪೋಲಿಯೊಮೈಲಿಟಿಸ್ ಅಥವಾ ಶೈಶವ ಪಾರ್ಶ್ವವಾಯು, ನರಕ್ಕೆ ಏಟು ಬಿದ್ದ ಗಾಯ, ಸೆರೆಬ್ರಲ್ ಪಾಲ್ಸಿ, ಪೆರಿಫೆರಲ್ ನ್ಯೂರೋಪತಿ, ಪಾರ್ಕಿನ್ಸನ್ಸ್ ಕಾಯಿಲೆ ಇತ್ಯಾದಿಗಳೂ ಈ ರೋಗಕ್ಕೆ ಪ್ರಮುಖ ಕಾರಣಗಳಾಗಿವೆ.

ಹೆಚ್ಚಿನ ಪ್ರಕರಣಗಳಲ್ಲಿ ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಯಾವುದೇ ಅಪಘಾತದ ಪೆಟ್ಟು ಅಥವಾ ವೈದ್ಯಕೀಯ ಸ್ಥಿತಿಯಿಂದಾಗಿ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ.

ಮಧುಮೇಹಿಗಳು, ಧೂಮ್ರಪಾನಿಗಳು, ಕುಟುಂಬದ ಇತಿಹಾಸದಲ್ಲಿ ಪಾರ್ಶ್ವವಾಯು ಪೀಡಿತರಿದ್ದವರು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ಸಾಕಷ್ಟು ದೈಹಿಕ ಚಟುವಟಕೆಗಳಲ್ಲಿ ತೊಡಗಿಕೊಳ್ಳದವರು, ಬೊಜ್ಜುದೇಹಿಗಳು, ಬೆಲ್ಸ್ ಪಾಲ್ಸಿಯ ಕೌಟುಂಬಿಕ ಇತಿಹಾಸವಿದ್ದವರು,ಅಧಿಕ ಕೊಲೆಸ್ಟ್ರಾಲ್ ಮಟ್ಟ ಹೊಂದಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಶರೀರದ ಯಾವುದೇ ಭಾಗದ ಅಥವಾ ಇಡೀ ಶರೀರದ ಚಲನೆ ಸಾಧ್ಯವಾಗದಿರುವುದು ಪಾರ್ಶ್ವವಾಯುವಿನ ಮುಖ್ಯಲಕ್ಷಣವಾಗಿದೆ. ಅದು ದಿಢೀರ್‌ನೆ ಅಥವಾ ಕಾಲಕ್ರಮೇಣ ಕಾಣಿಸಿಕೊಳ್ಳಬಹುದು. ಕೆಲವು ಪ್ರಕರಣಗಳಲ್ಲಿ ರೋಗವು ಕಾಣಿಸಿಕೊಳ್ಳುತ್ತದೆ ಮತ್ತು ಬಳಿಕ ಮಾಯವಾಗುತ್ತದೆ.

ಪಾರ್ಶ್ವವಾಯು ಮುಖ ಮತ್ತು ಕೈಗಳು ಸೇರಿದಂತೆ ಶರೀರದ ಯಾವುದೇ ಭಾಗಕ್ಕೂ ಉಂಟಾಗುತ್ತದೆ. ಒಂದು ತೋಳು ಅಥವಾ ಕಾಲು ಪೀಡಿತಗೊಂಡಾಗ ಅದು ಮೊನೊಪ್ಲೀಜಿಯಾ,ಶರೀರದ ಒಂದು ಪಾರ್ಶ್ವವು ರೋಗಕ್ಕೆ ಗುರಿಯಾದರೆ ಅದು ಹೆಮಿಪ್ಲೀಜಿಯಾ,ಎರಡೂ ಕಾಲುಗಳು ಬಾಧಿಸಲ್ಪಟ್ಟರೆ ಪ್ಯಾರಾಪ್ಲೀಜಿಯಾ ಮತ್ತು ಎರಡೂ ತೋಳುಗಳು ಮತ್ತು ಕಾಲುಗಳು ರೋಗಪೀಡಿತವಾದರೆ ಅದು ಕ್ವಾಡ್ರಿಪ್ಲೀಜಿಯಾ ಅಥವಾ ಟೆಟ್ರಾಪ್ಲೀಜಿಯಾ ಎಂದು ಕರೆಯಲ್ಪಡುತ್ತವೆ.

ಪಾರ್ಶ್ವವಾಯು ಶರೀರದ ಒಟ್ಟು ಕಾರ್ಯ ನಿರ್ವಹಣೆ ಸಾಮರ್ಥ್ಯಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ. ರೋಗಿಗಳು ರುಚಿಯ ಸಂವೇದನೆ,ಶರೀರದ ಸಮತೋಲನವನ್ನು ಕಳೆದುಕೊಳ್ಳಬಹುದು. ಬೆನ್ನುಹುರಿ ತನ್ನನ್ನು ತಾನು ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲ,ಹೀಗಾಗಿ ಒಂದು ಸಲ ಉಂಟಾದ ಹಾನಿಯು ಶಾಶ್ವತವಾಗಿರುತ್ತದೆ. ನೋವು ನಿವಾರಕಗಳು ಇತ್ಯಾದಿಗಳ ಬಳಕೆಯಿಂದ ಸೆಳೆತ ಮತು ನೋವಿನಿಂದ ತಾತ್ಕಾಲಿಕ ಮುಕ್ತಿ ಪಡೆಯಬಹುದು. ಆದರೆ ಪಾರ್ಶ್ವವಾಯು ಪೀಡಿತ ವ್ಯಕ್ತಿಗೆ ನಾಲ್ಕು ಗಂಟೆಗಳೊಳಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭಿಸಿದರೆ ಆತ ಗುಣಮುಖ ನಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News