ನೇತ್ರದಾನದಿಂದ ಅಂಧತ್ವ ನಿವಾರಣೆ ಸಾಧ್ಯ: ನ್ಯಾಯಮೂರ್ತಿ ಡಿ.ಎಚ್.ವೇಲಾ

Update: 2019-09-08 17:43 GMT

ಬೆಂಗಳೂರು, ಸೆ. 8: ‘ನಮ್ಮ ದೇಶದಲ್ಲಿ ಪ್ರತಿವರ್ಷ 1.50 ಲಕ್ಷಕ್ಕೂ ಹೆಚ್ಚು ಜನರು ಅಪಘಾತಗಳಲ್ಲಿ ಮರಣ ಹೊಂದುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ನೇತ್ರದಾನ ಮಾಡಿದರೆ ದೇಶದಲ್ಲಿನ ಕಾರ್ನಿಯಾದ ಅಂಧತ್ವವನ್ನು ನಿವಾರಿಸಲು ಸಾಧ್ಯ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಎಚ್.ವೇಲಾ ತಿಳಿಸಿದ್ದಾರೆ.

ರವಿವಾರ ನಗರದ ನಾರಾಯಣ ನೇತ್ರಾಲಯದಿಂದ 34ನೆ ನೇತ್ರದಾನ ಪಾಕ್ಷಿಕ ‘ಲಕ್ಷ ಲಕ್ಷ್ಯ ಮಹೋತ್ಸವ’ದ ಅಂಗವಾಗಿ ಏರ್ಪಡಿಸಿದ್ದ ನೇತ್ರದಾನದ ಜಾಗೃತಿ ಬೈಕ್ ರ‍್ಯಾಲಿ, ವಿದ್ಯಾರ್ಥಿಗಳಿಗಾಗಿ ಪೋಸ್ಟರ್ ತಯಾರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೂ ತನ್ನ ಕಣ್ಣುಗಳನ್ನು ದಾನ ಮಾಡಿ ಎಂದ ಹರೀಶ್ ನಂಜಪ್ಪ ಅವರಿಂದು ತಮ್ಮ ಕಾರ್ಯದಿಂದ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮರಣದ ನಂತರ ಕನಿಷ್ಠ ಇಬ್ಬರಿಗೆ ದೃಷ್ಟಿ ನೀಡುವ ಮೂಲಕ ಮರಣದ ನಂತರವೂ ಜೀವಿಸುವುದನ್ನು ಮುಂದುವರೆಸಬಹುದು ಎಂದು ತಿಳಿಸಿದರು.

ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗಶೆಟ್ಟಿ, ಬೆಂಗಳೂರಿನಲ್ಲಿ ಪ್ರತಿದಿನ 300-400 ಸಾವು ಸಂಭವಿಸುತ್ತವೆ. ಇವುಗಳಲ್ಲಿ 8ಕ್ಕಿಂತ ಕಡಿಮೆ ಕಣ್ಣುಗಳನ್ನು ಮಾತ್ರವೇ ಸಂಗ್ರಹಿಸಲಾಗುತ್ತದೆ. ಈ ಅಪಾರ ಅಂತರವನ್ನು ಕಾಣುವುದು ಅತ್ಯಂತ ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ನಿಯಾದ ಅಂಧತ್ವವನ್ನು ನೇತ್ರದಾನದಿಂದ ಮಾತ್ರ ನಿವಾರಿಸಬಹುದು. ಏಕೆಂದರೆ ಮಾನವ ಜೀವಕೋಶಕ್ಕೆ ಬೇರೆ ಪರ್ಯಾಯವಿಲ್ಲ. ಮರಣದ ನಂತರ ನೇತ್ರದಾನ ಮಾಡುವುದಲ್ಲದೆ ಬಂಧು-ಮಿತ್ರರು ಹಾಗೂ ತಿಳಿದವರಿಗೆ ಈ ಮಹತ್ತರ ಉದ್ದೇಶಕ್ಕೆ ಮಾತಿ ನೀಡಿ ಅವರನ್ನು ನೋಂದಣಿ ಮಾಡಿಕೊಳ್ಳುವುದು ಮುಖ್ಯ. ನಾರಾಯಣ ನೇತ್ರಾಲಯದ ನೇತ್ರಬ್ಯಾಂಕ್ 24/7 ತೆರೆದಿರುತ್ತದೆ.

ಮರಣದ ನಂತರ ತಕ್ಷಣವೇ ನಮಗೆ ಮಾಹಿತಿ ನೀಡಲು ನಿಮ್ಮನ್ನು ಕೋರುತ್ತೇವೆ, ಕಣ್ಣುಗಳನ್ನು ಮರಣದ 6ಗಂಟೆಗಳ ಒಳಗಡೆ ಸಂಗ್ರಹಿಸಿಕೊಳ್ಳಬೇಕು. ಮೊಬೈಲ್- 97416 85555 ಮತ್ತು 96207 85050 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News