ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲು ಲಂಕಾದ ಹಿರಿಯ ಆಟಗಾರರ ಹಿಂದೇಟು

Update: 2019-09-08 18:42 GMT

ಕರಾಚಿ, ಸೆ.8: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಾಯಕ ಡಿಮುತ್ ಕರುಣರತ್ನೆ, ಲಸಿತ್ ಮಾಲಿಂಗ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ ಸಹಿತ ಶ್ರೀಲಂಕಾದ ಹಲವು ಹಿರಿಯ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ)ತಲೆನೋವು ತಂದಿದೆ.

 ಶ್ರೀಲಂಕಾದ ಹಿರಿಯ ಆಟಗಾರರ ಲಭ್ಯತೆಯ ಬಗ್ಗೆ ಪಿಸಿಬಿ ಈ ತನಕ ಅಧಿಕೃತ ಹೇಳಿಕೆ ನೀಡಿಲ್ಲ. ಪಿಸಿಬಿ ಶ್ರೀಲಂಕಾದ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಹಾಗೂ ಕ್ರೀಡಾ ಸಚಿವ ಹರಿನ್ ಫೆರ್ನಾಂಡೊ ಜೊತೆ ಸಂಪರ್ಕದಲ್ಲಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.

‘‘ತಾಂತ್ರಿಕವಾಗಿ ಇದು ಶ್ರೀಲಂಕಾ ಮಂಡಳಿಯ ಆಂತರಿಕ ವಿಷಯವಾಗಿದೆ. ಹೀಗಾಗಿ ನಾವು ಆ ಕುರಿತು ಹೇಳಿಕೆ ನೀಡುವುದಿಲ್ಲ. ಸೆಪ್ಟಂಬರ್ 25ರಂದು ಪ್ರವಾಸ ಆರಂಭವಾಗಲಿದೆ. ಕರಾಚಿ ಹಾಗೂ ಲಾಹೋರ್‌ನಲ್ಲಿ ಪಂದ್ಯ ಆಯೋಜಿಸಲು ನಾವು ಎಲ್ಲ ತಯಾರಿ ನಡೆಸಿದ್ದೇವೆ’’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಟೆಸ್ಟ್ ಹಾಗೂ ಏಕದಿನ ನಾಯಕ ಕರುಣರತ್ನೆ, ಟಿ-20 ನಾಯಕ ಮಾಲಿಂಗ ಹಾಗೂ ಹಿರಿಯ ಆಟಗಾರ ಮ್ಯಾಥ್ಯೂಸ್ ಭದ್ರತಾ ಭೀತಿಯ ಕಾರಣದಿಂದ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ಪಿಸಿಬಿ 2009ರ ಬಳಿಕ ಇದೇ ಮೊದಲ ಬಾರಿ ಏಕದಿನ ಹಾಗೂ ಟಿ-20 ಸರಣಿಗಳ ಸಹಿತ ದ್ವಿಪಕ್ಷೀಯ ಸರಣಿಯ ಆತಿಥ್ಯವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News