ಅಮಿತ್ ಸಹಿತ ನಾಲ್ವರು ಬಾಕ್ಸರ್‌ಗಳು ಪ್ರಿ- ಕ್ವಾರ್ಟರ್ಗೆ

Update: 2019-09-08 18:46 GMT

ಹೊಸದಿಲ್ಲಿ, ಸೆ.8: ಏಶ್ಯನ್ ಚಾಂಪಿಯನ್ ಅಮಿತ್ ಪಾಂಘಾಲ್(52ಕೆಜಿ)ಸೋಮವಾರ ಆರಂಭವಾಗಲಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಶ್ರೇಯಾಂಕ ಪಡೆದಿರುವುದಲ್ಲದೆ ಇತರ ಮೂವರು ಬಾಕ್ಸರ್‌ಗಳೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್‌ಗೆ ಬೈ ಪಡೆದಿದ್ದಾರೆ.

ಅಮಿತ್ ಜೊತೆ ಅಂತಿಮ-16ರ ಸುತ್ತು ತಲುಪಿದ ಇತರ ಬಾಕ್ಸರ್‌ಗಳೆಂದರೆ: ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಕವಿಂದರ್ ಸಿಂಗ್ ಬಿಶ್ತ್(57 ಕೆಜಿ, 5ನೇ ಶ್ರೇಯಾಂಕ) ಹಾಗೂ ಆಶೀಷ್ ಕುಮಾರ್(75ಕೆಜಿ, 7ನೇ ಶ್ರೇಯಾಂಕ), ಎರಡು ಬಾರಿಯ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್(91ಕೆಜಿ). ಸಂಜೀತ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. ಪಾಂಘಾಲ್ ಹಾಗೂ ಬಿಶ್ತ್ 2017ರಲ್ಲಿ ಹ್ಯಾಂಬರ್ಗ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಜೇಶ್ ಾದವ್(81ಕೆಜಿ)ಪೊಲೆಂಡ್‌ನ ಮಾಲೆವ್ು ಗೊಂಸ್ಕಿ ಅವರನ್ನು ಎದುರಿಸುವುದರೊಂದಿಗೆ ಭಾರತ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಕಳೆದ 20 ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈ ತನಕ 4 ಪದಕಗಳನ್ನು ಜಯಸಿದೆ. ವಿಜೇಂದರ್ ಸಿಂಗ್(2009), ವಿಕಾಸ್ ಕ್ರಿಶನ್(2011), ಶಿವ ಥಾಪ(2015) ಹಾಗೂ ಗೌರವ್ ಬಿಧುರಿ(2017)ಪದಕ ಜಯಿಸಿರುವ ಭಾರತದ ಬಾಕ್ಸರ್‌ಗಳಾಗಿದ್ದಾರೆ. ಈ ಬಾರಿ ಹರ್ಯಾಣದ 23ರ ಹರೆಯದ ಬಾಕ್ಸರ್ ಅಮಿತ್ ಪಾಂಘಾಲ್ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಅಮಿತ್ ಏಶ್ಯನ್ ಚಾಂಪಿಯನ್ ಆಗಿರುವುದಲ್ಲದೆ, ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

2017ರ ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಸನಿಹ ತಲುಪಿದ್ದ ಅಮಿತ್ ಕ್ವಾರ್ಟರ್ ಫೈನಲ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್ ಹಸನ್ ದುಸ್ಮಾಟೊವ್‌ಗೆ 2-3 ಅಂತರದಿಂದ ಸೋತಿದ್ದರು. ಸತೀಶ್ ಕುಮಾರ್(+91ಕೆಜಿ)ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಇನ್ನೋರ್ವ ಹಿರಿಯ ಬಾಕ್ಸರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News