ಬಿಸಿಸಿಐಗೆ ಬೇಷರತ್ ಕ್ಷಮೆಕೋರಿದ ದಿನೇಶ್ ಕಾರ್ತಿಕ್

Update: 2019-09-08 18:50 GMT

ಹೊಸದಿಲ್ಲಿ, ಸೆ.8: ಶಾರೂಕ್‌ಖಾನ್ ಸಹ ಮಾಲಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯವನ್ನು ವೀಕ್ಷಿಸಿ ಬಿಸಿಸಿಐನ ಕೇಂದ್ರೀಯ ಷರತ್ತನ್ನು ಉಲ್ಲಂಘಿಸಿದ್ದ ಭಾರತದ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ‘‘ಬೇಷರತ್ ಕ್ಷಮೆಯಾಚಿಸಿದ್ದಾರೆ’’.

ಐಪಿಎಲ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್‌ನ ನಾಯಕನಾಗಿರುವ ಕಾರ್ತಿಕ್ ಟ್ರಿನಿಬಾಗೊ ಜರ್ಸಿಯನ್ನು ಧರಿಸಿಕೊಂಡು ಡ್ರೆಸ್ಸಿಂಗ್‌ರೂಮ್‌ನಲ್ಲಿ ಕುಳಿತುಕೊಂಡು ಪಂದ್ಯವನ್ನು ವೀಕ್ಷಿಸಿದ್ದರು. ಇದರಿಂದ ಕೆರಳಿದ ಬಿಸಿಸಿಐ, ಕಾರ್ತಿಕ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ನಿಮ್ಮ ಕೇಂದ್ರೀಯ ಗುತ್ತಿಗೆಯನ್ನು ಏಕೆ ರದ್ದುಪಡಿಸಬಾರದು ಎಂದು ಕೇಳಿತ್ತು.

 ಕೆಕೆಆರ್ ಕೋಚ್ ಬ್ರೆಂಡನ್ ಮೆಕಲಮ್ ಕೋರಿಕೆಯ ಮೇರೆಗೆ ನಾನು ಪೋರ್ಟ್ ಆಫ್ ಸ್ಪೇನ್‌ಗೆ ತೆರಳಿದ್ದೆ. ಮೆಕಲಮ್ ಮನವಿಯ ಮೇರೆಗೆ ಟಿಕೆಆರ್ ತಂಡದ ಜರ್ಸಿಯನ್ನು ಧರಿಸಿದ್ದೆ. ವೆಸ್ಟ್‌ಇಂಡೀಸ್‌ಗೆ ತೆರಳುವ ಮೊದಲು ಬಿಸಿಸಿಐಯಿಂದ ಮೊದಲೇ ಅನುಮತಿ ಪಡೆಯದೇ ಇರುವುದಕ್ಕೆ ಬೇಷರತ್ತ್ ಕ್ಷಮೆಯಾಚಿಸುತ್ತೇನೆ. ಸಿಪಿಎಲ್‌ನ ಉಳಿದ ಪಂದ್ಯಗಳನ್ನು ಟಿಕೆಆರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ನೋಡುವುದಿಲ್ಲ ಎಂದು 34ರ ಹರೆಯದ ತಮಿಳುನಾಡಿನ ವಿಕೆಟ್‌ಕೀಪರ್ ಕಾರ್ತಿಕ್ ಹೇಳಿದ್ದಾರೆ.

ಕಾರ್ತಿಕ್ ಕ್ಷಮೆಯಾಚಿಸಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಈ ವಿಚಾರವನ್ನು ಇಲ್ಲಿಗೆ ಮುಗಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News