ಬ್ರಾತ್‌ವೇಟ್ ವಿರುದ್ಧ ಶಂಕಾಸ್ಪದ ಶೈಲಿಯ ಬೌಲಿಂಗ್ ಆರೋಪ

Update: 2019-09-08 18:52 GMT

 ದುಬೈ, ಸೆ.8: ಕಳೆದ ಸೋಮವಾರ ಕೊನೆಗೊಂಡ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ವೇಳೆ ಶಂಕಾಸ್ಪದ ಶೈಲಿಯ ಬೌಲಿಂಗ್ ಮಾಡಿದ್ದಾರೆ ಎಂದು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರೆಗ್ ಬ್ರಾತ್ ವೇಟ್ ವಿರುದ್ಧ ಐಸಿಸಿಗೆ ಪಂದ್ಯದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಪಂದ್ಯದ ಅಧಿಕಾರಿಗಳು ಈ ಕುರಿತ ವರದಿಯನ್ನು ವೆಸ್ಟ್‌ಇಂಡೀಸ್ ಮ್ಯಾನೇಜ್‌ಮೆಂಟ್‌ಗೆ ಹಸ್ತಾಂತರಿಸಿದ್ದಾರೆ. ಭಾರತ ವಿರುದ್ಧ ಪಂದ್ಯದ ವೇಳೆ 26ರ ಹರೆಯದ ಬ್ರಾತ್‌ವೇಟ್ ಬೌಲಿಂಗ್ ಶೈಲಿಯ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ. ಸ್ಪೆಷಲಿಸ್ಟ್ ಓಪನರ್ ಬ್ರಾತ್‌ವೇಟ್ ಆಗಾಗ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ.

ಈ ಹಿಂದೆ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಪಂದ್ಯದ ವೇಳೆ ಬ್ರಾತ್‌ವೇಟ್ ವಿರುದ್ಧ ಶಂಕಾಸ್ಪದ ಬೌಲಿಂಗ್ ಶೈಲಿಯ ಬಗ್ಗೆ ದೂರು ದಾಖಲಾಗಿತ್ತು. ಸ್ವತಂತ್ರ ವೌಲ್ಯಮಾಪನದ ಬಳಿಕ ಬ್ರಾತ್‌ವೇಟ್ ದೋಷಮುಕ್ತರಾಗಿದ್ದರು.

 ಇದೀಗ ಮತ್ತೊಮ್ಮೆ ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ಎದುರಿಸುತ್ತಿರುವ ಬ್ರಾತ್‌ವೇಟ್‌ಗೆ ಸೆ.14 ರಂದು ಬೌಲಿಂಗ್ ಪರೀಕ್ಷೆಗೆ ಹಾಜರಾಗಲು ಐಸಿಸಿ ಸೂಚಿಸಿದೆ. ಪರೀಕ್ಷೆಯ ಫಲಿತಾಂಶ ಬರುವ ತನಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಅವರಿಗೆ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News