ಸತತ ಆರನೇ ಬಾರಿ ಗ್ರೇಟ್ ನಾರ್ತ್ ರನ್ ಜಯಿಸಿದ ಫರ್ಹಾ

Update: 2019-09-08 18:57 GMT

ಲಂಡನ್, ಸೆ.8: ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ ಗುರಿ ತಲುಪಿದ ಬ್ರಿಟನ್‌ನ ಮೊ ಫರ್ಹಾ ಸತತ ಆರನೇ ಬಾರಿ ಗ್ರೇಟ್ ನಾರ್ತ್ ರನ್‌ನಲ್ಲಿ ಜಯಶಾಲಿಯಾದರು.

ಇಥಿಯೋಪಿಯದ ತಮಿರಾಟ್ ಟೋಲಾರನ್ನು ಹಿಂದಿಕ್ಕಿದ ಒಲಿಂಪಿಕ್ಸ್ ಚಾಂಪಿಯನ್ ಫರ್ಹಾ 59 ನಿಮಿಷ, ಆರು ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಓಟವು ಅಕ್ಟೋಬರ್‌ನಲ್ಲಿ ನಡೆಯುವ ಚಿಕಾಗೊ ಮ್ಯಾರಥಾನ್‌ಗೆ ಉತ್ತಮ ತಯಾರಿಯಾಗಿದೆ ಎಂದು 5,000 ಹಾಗೂ 10,000 ಮೀ. ಓಟದ ಒಲಿಂಪಿಕ್ಸ್ ಚಾಂಪಿಯನ್ ಫರ್ಹಾ ಹೇಳಿದ್ದಾರೆ.

 ‘‘ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ನನ್ನ ಮುಂದಿರುವ ಪ್ರಮುಖ ಗುರಿ. ಅಥ್ಲೀಟ್ ಆಗಿ ನಮ್ಮ ದೇಶವನ್ನು ಪ್ರತಿನಿಧಿಸಲು ಬಯಸುವುದು ಸಹಜ. ಒಲಿಂಪಿಕ್ಸ್‌ಗೆ ಇನ್ನು ಒಂದು ವರ್ಷ ಬಾಕಿ ಇದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ವಿಶ್ವಾಸ ನನಗಿದೆ’’ ಎಂದು 36ರ ಹರೆಯದ ಫರ್ಹಾ ಬಿಬಿಸಿ ಸ್ಪೋರ್ಟ್ಸ್‌ಗೆ ತಿಳಿಸಿದರು.

ಐದು ತಿಂಗಳ ಹಿಂದೆ ಲಂಡನ್ ಮ್ಯಾರಥಾನ್ ಜಯಿಸಿದ್ದ ಕೀನ್ಯದ ಬ್ರಿಗಿಡ್ ಕೊಸೆಗೆ 1:04.28 ಸೆಕೆಂಡ್‌ನಲ್ಲಿ ಗುರಿ ತಲುಪಿ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News