​ರಫೆಲ್ ನಡಾಲ್‌ಗೆ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ

Update: 2019-09-09 10:47 GMT

ನ್ಯೂಯಾರ್ಕ್: ಡನೀಲ್ ಮೆಡ್ವೆಡೇವ್ ಅವರ ಪ್ರಬಲ ಸವಾಲನ್ನು ಬದಿಗೊತ್ತಿದ ರಫೆಲ್ ನಡಾಲ್ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 19ನೇ ಗ್ರ್ಯಾಂಡ್‌ಸ್ಲಾಂ ಗೆದ್ದ ಗೌರವಕ್ಕೆ ಪಾತ್ರರಾದರು.

ಸುಧೀರ್ಘ ಹೋರಾಟದಲ್ಲಿ 7-5, 6-3, 5-7, 4-6, 6-4 ಸೆಟ್ ಗಳಿಂದ ಮೆಡ್ವೆಡೇವ್ ಅವರನ್ನು ಮಣಿಸಿದ ಅನುಭವಿ ಆಟಗಾರ ನಾಲ್ಕನೇ ಬಾರಿಗೆ ಯುಎಸ್ ಟ್ರೋಫಿಗೆ ಮುತ್ತಿಕ್ಕಿದರು.

ಆರಂಭದ ಎರಡೂ ಸೆಟ್ ಗೆದ್ದ ಎರಡನೇ ಶ್ರೇಯಾಂಕದ ನಡಾಲ್‌ಗೆ ಬಳಿಕ ಆತಂಕದ ಕ್ಷಣಗಳು ಎದುರಾದವು. ಮೂರನೇ ಸೆಟ್‌ನಲ್ಲೂ ಒಂದು ಬ್ರೇಕ್‌ಪಾಯಿಂಟ್ ದೊರಕಿದರೂ, ಆಟದ ಶೈಲಿ ಬದಲಾಯಿಸಿಕೊಂಡ ಮೆಡ್ವೆಡೇವ್, ಮುಂದಿನ ಎರಡು ಸೆಟ್ ಗೆದ್ದರು. ಆದರೂ ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡು ಯುಎಸ್ ಓಪನ್ ಗೆಲ್ಲುವ ಅಪೂರ್ವ ಅವಕಾಶದಿಂದ ಮೆಡ್ವೆಡೇವ್ ವಂಚಿತರಾದರು. ಮೆಡ್ವೆಡೇವ್ ಪ್ರಶಸ್ತಿ ಗೆದ್ದಿದ್ದರೆ, 1949ರ ಬಳಿಕ ಯುಎಸ್ ಓಪನ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುತ್ತಿದ್ದರು.

ನಿರ್ಣಾಯಕ ಸೆಟ್‌ನಲ್ಲಿ ನಡಾಲ್ 5-2 ಮುನ್ನಡೆ ಗಳಿಸಿದ್ದರು. ಆದರೆ ಬ್ರೇಕ್‌ಪಾಯಿಂಟ್‌ನಲ್ಲಿ ಎರಡು ಡಬಲ್‌ಫಾಸ್ಟ್ ಎಸಗಿದರು. 5-3 ಮುನ್ನಡೆಯಲ್ಲಿದ್ದು ಎರಡು ಮ್ಯಾಚ್‌ಪಾಯಿಂಟ್ ಹೊಂದಿದ್ದ ನಡಾಲ್, ಅಂತಿಮವಾಗಿ 5-4 ಮುನ್ನಡೆಯಲ್ಲಿದ್ದಾಗ ಸರ್ವ್ ಉಳಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದರು.

ನಾಲ್ಕು ಯುಎಸ್ ಓಪನ್, 12 ಫ್ರೆಂಚ್ ಓಪನ್, ಎರಡು ವಿಂಬಲ್ಡನ್ ಹಾಗೂ ಒಂದು ಆಸ್ಟ್ರೇಲಿಯನ್ ಓಪನ್ ಕಿರೀಟ ಹೊಂದಿರುವ ನಡಾಲ್, ಗರಿಷ್ಠ ಗ್ರ್ಯಾಂಡ್‌ಸ್ಲಾಂ ಜಯಿಸಿರುವ ಆಟಗಾರರ ಪೈಕಿ ರೋಜರ್ ಫೆಡರರ್ ಬಳಿಕ ನಂತರದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News