1997-98ರ ನಂತರ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ಪ್ರಯಾಣಿಕ ವಾಹನಗಳ ಮಾರಾಟ

Update: 2019-09-09 07:54 GMT

ಹೊಸದಿಲ್ಲಿ, ಸೆ.9: ಆಗಸ್ಟ್ 2019ರಲ್ಲಿ ದೇಶದಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಪ್ರಮಾಣ 1997-98ರ ನಂತರ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆಗಸ್ಟ್ 2018ಗೆ ಹೋಲಿಸಿದಾಗ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ಯಾಸೆಂಜರ್ ವಾಹನ ಮಾರಾಟ ಪ್ರಮಾಣ ಶೇ 31.57ರಷ್ಟು ಕುಸಿದಿದೆ.

ಈ ವರ್ಷದ ಆಗಸ್ಟ್  ತಿಂಗಳಲ್ಲಿ 1,96,524 ಪ್ಯಾಸೆಂಜರ್ ವಾಹನಗಳು  ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2,87,198 ವಾಹನಗಳು ಮಾರಾಟವಾಗಿದ್ದವು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 1,96,847 ಕಾರುಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ 1,15,957 ಕಾರುಗಳು  ಮಾರಾಟವಾಗಿ ಶೇ 41.09ರಷ್ಟು ಇಳಿಕೆ ದಾಖಲಾಗಿದೆ. ಯುಟಿಲಿಟಿ ವಾಹನಗಳ ಮಾರಾಟ ಈ ಅವಧಿಯಲ್ಲಿ ಕೇವಲ ಶೇ 2.2ರಷ್ಟು ಇಳಿಕೆಯಾಗಿದ್ದರೆ, ವ್ಯಾನುಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಶೇ 47.36ರರಷ್ಟು ಕುಸಿದಿದೆ. ಆಗಸ್ಟ್ 2018ರಲ್ಲಿ 17,266 ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 9,089 ವ್ಯಾನುಗಳು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಮಾರಾಟ ಶೇ.22.24ರಷ್ಟು ಕುಸಿದಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ 15,14,196 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 19,47,304 ವಾಹನಗಳು ಮಾರಾಟವಾಗಿದ್ದವು.

ಮಧ್ಯಮ ಮತ್ತು ಘನ ವಾಣಿಜ್ಯ ವಾಹನಗಳ ಮಾರಾಟ ಇದೇ ಅವಧಿಯಲ್ಲಿ 34,073 ವಾಹನಗಳಿಂದ 15,573 ವಾಹನಗಳಿಗೆ ಇಳಿಕೆಯಾಗಿ ಶೇ.54.3ರಷ್ಟು ಕುಸಿತ ದಾಖಲಾಗಿದೆ. ಲಘು  ವಾಣಿಜ್ಯ ವಾಹನಗಳ ಮಾರಾಟ ಕೂಡ ಶೇ 28.21ರಷ್ಟು ಕುಸಿದಿದೆ.

ಒಟ್ಟಾರೆಯಾಗಿ ಭಾರತದಲ್ಲಿ ಆಗಸ್ಟ್ 2019ರಲ್ಲಿ 97,32,040 ವಾಹನಗಳು ಮಾರಾಟವಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1,15,70,401 ವಾಹನಗಳು ಮಾರಾಟವಾಗಿದ್ದು ಒಟ್ಟಾರೆ ಇಳಿಕೆ ಪ್ರಮಾಣ ಶೇ 15.89 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News