ಹಣ ಕೊಟ್ಟರೆ ಕಳ್ಳರಿಗೆ ಸಿಗುತ್ತೆ ಆನ್ ಲೈನ್ ನಲ್ಲೇ ನಿಮ್ಮ ಎಟಿಎಂ ದೋಚಲು ಟೂಲ್ ಗಳು!

Update: 2019-09-09 14:57 GMT

ಅಂತರ್ಜಾಲ ಈಗ ಎಲ್ಲರ ಕೈಗೂ ಎಟಕುತ್ತಿದೆ. ಅಗ್ಗದ ಡಾಟಾ ದರಗಳಿಂದಾಗಿ ನಮ್ಮ ಕೈಯಲ್ಲಿನ ಸ್ಮಾರ್ಟ್ ಫೋನ್‌ಗಳು ಕಂಪ್ಯೂಟರ್‌ಗಳಾಗಿ ಬದಲಾಗಿವೆ. ಅಂದ ಹಾಗೆ ಹೆಚ್ಚಿನವರಿಗೆ ಗೊತ್ತಿರುವುದು ವರ್ಲ್ಡ್ ವೈಡ್ ವೆಬ್ (www) ಮಾತ್ರ. ಆದರೆ ಅಂತರ್ಜಾಲದಲ್ಲಿ ಇನ್ನೊಂದು ಜಗತ್ತೂ ಇದೆ. ಡಾರ್ಕ್ ವೆಬ್ ಅಥವಾ ಡೀಪ್ ವೆಬ್ ಎಂದು ಕರೆಯಲಾಗುವ ಈ ಜಾಲವು ವರ್ಲ್ಡ್ ವೈಡ್ ವೆಬ್‌ನ ಭಾಗವಾಗಿದೆ ಮತ್ತು ವಿಶೇಷ ಸಾಫ್ಟ್‌ವೇರ್‌ಗಳ ಮೂಲಕ ಮಾತ್ರ ಇದನ್ನು ಪ್ರವೇಶಿಸಲು ಸಾಧ್ಯ.

ಡಾರ್ಕ್ ವೆಬ್‌ನಲ್ಲಿ ಬಳಕೆದಾರರು ಮತ್ತು ವೆಬ್‌ಸೈಟ್ ಆಪರೇಟರ್‌ಗಳು ಅನಾಮಿಕರಾಗಿರುತ್ತಾರೆ ಮತ್ತು ಅವರ ಜಾಡನ್ನು ಪತ್ತೆ ಹಚ್ಚುವುದೂ ಸಾಧ್ಯವಿಲ್ಲ. ಹೀಗಾಗಿಯೇ ಡಾರ್ಕ್ ವೆಬ್  ಕ್ರಿಮಿನಲ್‌ಗಳಿಗೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಸ್ವರ್ಗಸದೃಶವಾಗಿದೆ. ಡಾರ್ಕ್ ವೆಬ್ ಪ್ರವೇಶಿಸುವುದು ಅಪರಾಧವಲ್ಲ,ಆದರೆ ಅದರಲ್ಲಿಯ ಹೆಚ್ಚಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು ಕಾನೂನುಬಾಹಿರವಾಗಿದೆ.

 ಈ ಡಾರ್ಕ್‌ವೆಬ್‌ನಲ್ಲಿ ಅತ್ಯಾಧುನಿಕ ಟೂಲ್‌ಗಳು ಮತ್ತು ಡಿವೈಸ್‌ಗಳು ಮಾರಾಟಕ್ಕೆ ಲಭ್ಯವಿದ್ದು, ಈಗ ಬ್ಯಾಂಕುಗಳ ಎಟಿಎಂ ಯಂತ್ರವನ್ನು ಕೇವಲ 15 ನಿಮಿಷಗಳಲ್ಲಿ ಹ್ಯಾಕ್ ಮಾಡಬಹುದಾಗಿದೆ. ಇದಕ್ಕೆ ವೃತ್ತಿಪರ ಕ್ರಿಮಿನಲ್‌ಗಳೇ  ಬೇಕೆಂದಿಲ್ಲ, ಚಿಲ್ಲರೆ ಕ್ರಿಮಿನಲ್‌ಗಳೂ ಈ ಕಾರ್ಯವನ್ನು ಮಾಡಬಹುದು. ಈ ಹಿಂದೆ ಡಾರ್ಕ್ ವೆಬ್‌ನಲ್ಲಿ ಇಂತಹ ಟೂಲ್‌ಗಳನ್ನು ಖರೀದಿಸುವ ವ್ಯಕ್ತಿಗೆ ಅದರ ಬಗ್ಗೆ ಪ್ರಾಥಮಿಕ ಜ್ಞಾನವಿರುವುದು ಅಗತ್ಯವಾಗಿತ್ತು. ಆದರೆ ಈಗ ಡಾರ್ಕ್ ವೆಬ್‌ನಲ್ಲಿ ಮಾರಾಟಗಾರರು ಎಟಿಎಂ ಯಂತ್ರಗಳಿಗೆ ಕನ್ನ ಹಾಕಲು ಮಾಲ್‌ವೇರ್ ಕಾರ್ಡ್,ಯುಎಸ್‌ಬಿ ಎಟಿಎಂ ಮಾಲ್‌ವೇರ್‌ನಂತಹ ಹಲವಾರು ಇತ್ತೀಚಿನ ಸಿದ್ಧ ಟೂಲ್‌ಗಳನ್ನು ಮಾರಾಟ ಮಾಡುತ್ತಿದ್ದು,ಇದರಿಂದಾಗಿ ಎಟಿಎಂ ಕಳ್ಳರ ಕೆಲಸವೂ ಈಗ ಸುಲಭವಾಗಿಬಿಟ್ಟಿದೆ.

ಈ ಮೊದಲು ಡಾರ್ಕ್‌ವೆಬ್‌ನಲ್ಲಿ ಸಿಗುತ್ತಿದ್ದ ಟೂಲ್‌ಗಳು ಕೊಂಚ ಸಂಕೀರ್ಣವಾಗಿರುತ್ತಿದ್ದವು,ಆದರೆ ಈಗ ಈ ಸಾಧನಗಳಿಂದ ಯಾರೇ ಆದರೂ ಎಟಿಎಂ ಯಂತ್ರಗಳ ಮೇಲೆ ನಿಯಂತ್ರಣ ಸಾಧಿಸಬಹುದು ಎನ್ನುತ್ತಾರೆ ಕ್ಲೌಡ್‌ಸೆಕ್‌ನಲ್ಲಿ ಸೆಕ್ಯೂರಿಟಿ ರೀಸರ್ಚರ್ ಆಗಿರುವ ರಾಕೇಶ ಕೃಷ್ಣನ್. ಕೃಷ್ಣನ್ ಎಟಿಎಂ ಯಂತ್ರಗಳಿಗೆ ಕನ್ನ ಹಾಕಲು ಅತ್ಯಾಧುನಿಕ ಟೂಲ್‌ಗಳ ಬಗ್ಗೆ ತಿಳಿದುಕೊಳ್ಳಲು ಖರೀದಿದಾರನ ಸೋಗಿನಲ್ಲಿ ಡಾರ್ಕ್‌ವೆಬ್‌ನಲ್ಲಿಯ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದರು.

 ಒಂದು ಸೈಟ್ ಕೃಷ್ಣನ್‌ಗೆ ಪಿನ್ ಡಿಸ್ಕ್ರಿಪ್ಟರ್,ಟ್ರಿಗರ್ ಕಾರ್ಡ್ ಮತ್ತು ಇನ್ ಸ್ಟ್ರಕ್ಷನ್ ಗೈಡ್‌ನೊಂದಿಗೆ ಎಟಿಎಂ ಮಾಲ್‌ವೇರ್ ಕಾರ್ಡ್‌ನ ಪ್ಯಾಕೇಜ್ ಮಾರಾಟದ ಕೊಡುಗೆಯನ್ನು ಮುಂದಿರಿಸಿತ್ತು. ಈ ಎಟಿಎಂ ಮಾಲ್‌ವೇರ್ ಕಾರ್ಡ್‌ನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದರೆ ಅದು ರಹಸ್ಯವಾಗಿ ಎಲ್ಲ ಕಾರ್ಡ್‌ಗಳ ವಿವರಗಳನ್ನು ಸಂಗ್ರಹಿಸುತ್ತದೆ. ಟ್ರಿಗರ್ ಕಾರ್ಡ್‌ನ್ನು ಬಳಸಿ ಹಣವನ್ನು ತೆಗೆಯಬಹುದಾಗಿದೆ. ಮಾಲ್‌ವೇರ್ ಹೋಸ್ಟೆಡ್ ಯುಎಸ್‌ಬಿ ಡ್ರೈವ್ ಅನ್ನು ಬಳಸಿ ಎಟಿಎಂ ಯಂತ್ರವನ್ನು ವೈರಸ್ ಗೊಳಪಡಿಸುವುದು ಹಣವನ್ನು ದೋಚಲು ಈಗ ಪ್ರಚಲಿತವಿರುವ ಇನ್ನೊಂದು ವಿಧಾನವಾಗಿದೆ. ಅಲ್ಲದೆ ಈ ನಿರ್ದಿಷ್ಟ ಮಾರಾಟ ಸೈಟ್ ಇಎಂವಿ ಸ್ಕಿಪರ್,ಜಿಎಸ್‌ಎಂ ರಿಸೀವರ್,ಎಟಿಎಂ ಸ್ಕಿಮರ್,ಪಾಯಿಂಟ್ ಆಫ್ ಸೇಲ್,ಗ್ಯಾಸ್ ಪಂಪ್ ಮತ್ತು ಡೀಪ್ ಇನ್ಸರ್ಟ್‌ನಂತಹ ಎಟಿಎಂ ಹ್ಯಾಕಿಂಗ್ ಸಾಧನಗಳ ಕೊಡುಗೆಯನ್ನು ಕೃಷ್ಣನ್ ಮುಂದಿಟ್ಟಿತ್ತು.

ಈ ಮಾಲ್‌ವೇರ್‌ಗಳು ಮುಖ್ಯವಾಗಿ ವಿಂಡೋಸ್ ಎಕ್ಸ್‌ಪಿ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಸಿಸ್ಟಮ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತವೆ. ಅಲ್ಲದೆ ವಿವಿಧ ಸ್ಥಳಗಳಲ್ಲಿರುವ ಎಟಿಎಂಗಳನ್ನು ಹ್ಯಾಕ್‌ ಮಾಡಲು ಹೆಚ್ಚಿನ ಟೂಲ್‌ಗಳನ್ನು ಪರಿಷ್ಕರಿಸುವ ಅಗತ್ಯವೂ ಇಲ್ಲ. ವಿಶ್ಯಾದ್ಯಂತ ಎಟಿಎಂ ಯಂತ್ರಗಳನ್ನು ಒಂದೇ ರೀತಿಯ ಸಾಫ್ಟವೇರ್‌ಗಳನ್ನು ಬಳಸಿ ಒಂದೇ ಬಗೆಯಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಈ ಮಾಲ್‌ವೇರ್‌ಗಳು ಸುಲಭವಾಗಿ ಮಾರಾಟವಾಗುತ್ತವೆ ಎನ್ನುತ್ತಾರೆ ಕೃಷ್ಣನ್.

ಹೆಚ್ಚು ದುಬಾರಿಯಲ್ಲದ ಇಂತಹ ಹೆಚ್ಚಿನ ಟೂಲ್‌ಗಳು ಡಾರ್ಕ್ ವೆಬ್‌ನಲ್ಲಿ ಮಾತ್ರವಲ್ಲ,ಗ್ಲೋಬಲ್ ಇ-ಕಾಮರ್ಸ್ ಸೈಟ್‌ಗಳಲ್ಲಿಯೂ ಲಭ್ಯವಿವೆ. ಆದರೆ ಇವುಗಳನ್ನು ಇನ್ನೂ ಭಾರತದಲ್ಲಿ ತಯಾರಿಸಲಾಗುತ್ತಿಲ್ಲ. ಹ್ಯಾಕರ್‌ಗಳು ಅಗ್ಗದ ಟೂಲ್‌ಗಳನ್ನು ಬಯಸುತ್ತಾರೆ,ಹೀಗಾಗಿ ಅವರು ಚೀನಿ ಇ-ಕಾಮರ್ಸ್ ಮಾರಾಟ ತಾಣಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಹೀಗಾಗಿ ಎಟಿಎಂ ಯಂತ್ರಗಳನ್ನು ಹ್ಯಾಕ್ ಮಾಡುವುದು ಈಗ ಸುಲಭವಾಗಿಬಿಟ್ಟಿದೆ ಎನ್ನುತ್ತಾರೆ ಸೈಬರ್ ಸೆಕ್ಯುರಿಟಿ ತಜ್ಞ ಗೌತಮ ಕುಮಾವತ್.

 ಈ ಅತ್ಯಾಧುನಿಕ ಟೂಲ್‌ಗಳಿಂದಾಗಿ ಹ್ಯಾಕ್ ಮಾಡುವ ಖದೀಮರು ಈಗ ಯಂತ್ರದ ಭೌತಿಕ ಸ್ಪರ್ಶದಲ್ಲಿರಬೇಕಾದ ಅಗತ್ಯವಿಲ್ಲ. ಉದಾಹರಣೆಗೆ ಇತ್ತಿಚಿಗೆ ಬೆಳಕಿಗೆ ಬಂದಿರುವ ಆ್ಯಕ್ಟಿವ್ ಎಟಿಎಂ ಜಾಕ್‌ಪಾಟಿಂಗ್ ವಿಧಾನದಲ್ಲಿ ಮಾಲ್‌ವೇರ್ ಪ್ಲೋಟಸ್-ಡಿ ನ್ನು ಬಳಸಲಾಗುತ್ತಿದೆ ಮತ್ತು ಇದು ಕೆಲವೇ ಕ್ಷಣಗಳಲ್ಲಿ ಯಂತ್ರದಲ್ಲಿರುವ ಎಲ್ಲ ಹಣವನ್ನು ದೋಚಲು ನೆರವಾಗುತ್ತದೆ.

ಡಾರ್ಕ್ ವೆಬ್‌ನಲ್ಲಿಯ ಹಲವಾರು ಮಾರಾಟ ತಾಣಗಳು ಪಿಒಎಸ್ ಟರ್ಮಿನಲ್,ಅಪ್‌ಗ್ರೇಡೆಡ್ ಆ್ಯಂಟೆನಾ, ವಿಶೇಷವಾಗಿ ನಿರ್ಮಿತ ಎಟಿಎಂ ಸ್ಕಿಮರ್‌ಗಳು ಮತ್ತು ಆರ್‌ಎಫ್‌ಐಡಿ/ರೈಟರ್‌ನಂತಹ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಅತ್ಯಾಧುನಿಕ ಹ್ಯಾಕಿಂಗ್ ಟೂಲ್‌ಗಳಿಂದ ಅಪ್ ಡೇಟ್ ಆಗಿವೆ ಎನ್ನುತ್ತಾರೆ ಕೃಷ್ಣನ್.

ಈ ಸಾಧನಗಳು 1,400 ಡಾಲರ್ (ಸುಮಾರು ಒಂದು ಲಕ್ಷ ರೂ.)ಗಳ ಆರಂಭಿಕ ಬೆಲೆಯಿಂದ ಲಭ್ಯವಿವೆ. ಡಾರ್ಕ್ ವೆಬ್ ಎಟಿಎಂ ಹ್ಯಾಕಿಂಗ್ ಟ್ಯುಟೋರಿಯಲ್‌ಗಳನ್ನೂ ಮಾರಾಟ ಮಾಡುತ್ತಿದ್ದು, ಇದನ್ನು ಕೇವಲ 100 ಡಾಲರ್ (ಸುಮಾರು 7,000 ರೂ)ಗಳಿಗೆ ಪಡೆಯಬಹುದಾಗಿದೆ. ಕಾರ್ಡ್ ಕ್ಲೋನಿಂಗ್ ಭಾರತದಲ್ಲಿ ಪೊಲೀಸರಿಗೆ ಸವಾಲು ಒಡ್ಡುತ್ತಿರುವ ಇನ್ನೊಂದು ಸೈಬರ್ ಅಪರಾಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News