ಹೀಲಿಯಂ-3 ಹೊರ ತೆಗೆಯಲು ಭಾರತದಿಂದ ಚಂದ್ರನ ಮೇಲೆ ಕಾರ್ಖಾನೆ: ಡಿಆರ್‌ಡಿಒ ಮಾಜಿ ವಿಜ್ಞಾನಿ

Update: 2019-09-09 15:41 GMT

ಹೊಸದಿಲ್ಲಿ, ಸೆ. 9: ಹೀಲಿಯಂ-3 ಅನ್ನು ಹೊರತೆಗೆಯಲು ಚಂದ್ರನ ಮೇಲ್ಮೈಯಲ್ಲಿ 10 ವರ್ಷಗಳಲ್ಲಿ ನೆಲೆ ರೂಪಿಸಲು ಭಾರತ ಸಮರ್ಥವಾಗಲಿದೆ ಎಂದು ಡಿಆರ್‌ ಡಿಒ ಮಾಜಿ ವಿಜ್ಞಾನಿ ಎ. ಶಿವಥಾನು ಪಿಳ್ಳೈ ಹೇಳಿದ್ದಾರೆ.

ಡಿಡಿ ನ್ಯೂಸ್‌ನ ಕಾರ್ಯಕ್ರಮ ‘ವಾರ್ ಆ್ಯಂಡ್ ಪೀಸ್’ನಲ್ಲಿ ಮಾತನಾಡಿದ ಪಿಳ್ಳೈ, ‘‘ಬಾಹ್ಯಾಕಾಶ ಯೋಜನೆಗಳಲ್ಲಿ ತಂತ್ರಜ್ಞಾನದ ಮೇಲೆ ಸಂಪೂರ್ಣ ಪಾರಮ್ಯ ಸಾಧಿಸಿದ ನಾಲ್ಕು ದೇಶಗಳಲ್ಲಿ ನಮ್ಮ ದೇಶ ಕೂಡ ಒಂದು’’ ಎಂದು ಅವರು ತಿಳಿಸಿದರು. ಬ್ರಹ್ಮೋಸ್ ಕ್ಷಿಪಣಿ ಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ಪಿಳ್ಳೈ, ‘‘ಅತ್ಯಮೂಲ್ಯ ಭಾರೀ ಪ್ರಮಾಣದ ಕಚ್ಚಾ ಸಾಮಗ್ರಿಗಳ ಪರಿಷ್ಕರಣೆ ಹಾಗೂ ಹೊರತೆಗೆಯಲಾದ ಹೀಲಿಯಂ-3ನ್ನು ಭೂಮಿಗೆ ತರಲು ಚಂದ್ರನ ಮೇಲೆ ಕಾರ್ಖಾನೆ ಸ್ಥಾಪಿಸಲು ಭಾರತ ಸಮರ್ಥವಾಗಲಿದೆ’’ ಎಂದರು.

ಹೀಲಿಯಂ-3 ಭವಿಷ್ಯದ ಶಕ್ತಿಯ ವಸ್ತು ಎಂದು ಹೇಳಿದ ಅವರು, ಯುರೇನಿಯಂಗಿಂತ 100 ಪಟ್ಟಿ ಹೆಚ್ಚು ಶಕ್ತಿ ಉತ್ಪಾದಿಸುವ ರೇಡಿಯೋಆ್ಯಕ್ಟೀವ್ ಅಲ್ಲದ ಸಾಮಗ್ರಿ ಇದಾಗಿದೆ ಎಂದರು. ಚಂದ್ರನ ಮೇಲ್ಮೈಯಲ್ಲಿ ಸ್ಥಾಪಿಸಲಾಗುವ ಭಾರತದ ನೆಲೆ ಸೌರವ್ಯೂಹದಲ್ಲಿರುವ ಇತರ ಗ್ರಹಗಳಿಗೆ ಉಡಾವಣಾ ಯೋಜನೆಗಳ ಕೇಂದ್ರವಾಗಲಿದೆ ಎಂದು ಪಿಳ್ಳೈ ಹೇಳಿದರು. ಪ್ರಸ್ತುತ ಅಮೆರಿಕ, ರಶ್ಯಾ ಹಾಗೂ ಚೀನಾ ದೇಶಗಳು ಚಂದ್ರನ ಮೇಲ್ಮೈಯಲ್ಲಿ ನೆಲೆ ರೂಪಿಸಲು ಆಸಕ್ತಿ ಹೊಂದಿವೆ ಎಂದು ಪಿಳ್ಳೈ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News