ಸಿಎಂ ಕುರ್ಚಿಗಾಗಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದ ಸಿದ್ದರಾಮಯ್ಯ: ಎನ್.ರವಿಕುಮಾರ್

Update: 2019-09-10 14:05 GMT

ಬೆಂಗಳೂರು, ಸೆ.10: ಮಾಜಿ ಸಿಎಂ ಸಿದ್ದರಾಮಯ್ಯ ಬೇರೆ ಪಕ್ಷದ ನಾಯಕರನ್ನು ಟೀಕಿಸುವ ಮೊದಲು ತಮ್ಮ ವಿಶ್ವಾಸಾರ್ಹತೆ ಎಷ್ಟು ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಆಸೆಗಾಗಿ ತನ್ನದೇ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ್ದನ್ನು ಯಾರೂ ಮರೆತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಹೊಣೆಯನ್ನು ಯಾರದೋ ತಲೆಗೆ ಕಟ್ಟಿ ತನ್ನದೇನೂ ಜವಾಬ್ದಾರಿ ಇಲ್ಲ ಎನ್ನುವಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ, ಬಿಜೆಪಿಯನ್ನು ಟೀಕಿಸುವ ನೈತಿಕತೆ ಹೊಂದಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಐದು ವರ್ಷಗಳ ದುರಾಡಳಿತದಿಂದಾಗಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿಗೆ ಅತೀ ಹೆಚ್ಚಿನ ಸ್ಥಾನ ನೀಡಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು. ರಾಜ್ಯದ ಅನೇಕ ಕಡೆಗಳಲ್ಲಿ ಅಮಾಯಕ ಹಿಂದುಗಳ ಹತ್ಯೆ ನಡೆದಿದ್ದು ಸಿದ್ದರಾಮಯ್ಯ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಅವರು ದೂರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಲಾಗದೇ ಅಸಹಾಯಕವಾಗಿರುವ ಕಾಂಗ್ರೆಸ್ ಹೈಕಮಾಂಡ್ ಕುರಿತು ಮೌನವಹಿಸಿರುವ ಸಿದ್ದರಾಮಯ್ಯರಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ. ದೇವೇಗೌಡ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿಗೆ ಸಿದ್ದರಾಮಯ್ಯ ಹೇಗೆ ದ್ರೋಹ ಬಗೆದಿದ್ದಾರೆ ಎನ್ನುವುದನ್ನು ಸ್ವತಃ ಸಿದ್ದರಾಮಯ್ಯ ಆಪ್ತರೇ ವಿವರಿಸುತ್ತಾರೆ ಎಂದು ರವಿಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸಿದ್ದಾರೆ ಎಂದು ಶಿವಕುಮಾರ್ ಅವರ ತಾಯಿಯೇ ಹೇಳಿದ್ದರು. ಬಿಜೆಪಿ ಮಾತ್ರ ಈ ಆರೋಪ ಮಾಡಿಲ್ಲ. ರಾಜ್ಯವನ್ನು ಅತೀ ಹೆಚ್ಚು ಸಾಲಗಾರ ರಾಜ್ಯವನ್ನಾಗಿ ಮಾಡಿದ ಅಪಕೀರ್ತಿಯೂ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಅವರು ಟೀಕಿಸಿದ್ದಾರೆ. ಸಮಾಜವಾದಿ ಎಂದು ಹೇಳಿಕೊಳ್ಳುತ್ತಲೇ 75 ಲಕ್ಷ ರೂ.ವಾಚು ಧರಿಸಿದ್ದ ಸಿದ್ದರಾಮಯ್ಯ ಅವರಿಂದ ಬಿಜೆಪಿ ಕಲಿಯಬೇಕಾದ್ದೇನೂ ಇಲ್ಲ. ಬಿಜೆಪಿಯಲ್ಲಿ ಕ್ರಮಬದ್ಧವಾಗಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸಲಾಗುತ್ತದೆ. ಅದರಂತೆ ಪಕ್ಷದ ಹಿತದೃಷ್ಟಿಯಿಂದ ಯಾರು ಅಧ್ಯಕ್ಷರಾಗಬೇಕು ಎಂದು ನಿರ್ಧರಿಸಲಾಗುತ್ತದೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಮಾರ್ಗದರ್ಶನ ಬಿಜೆಪಿಗೆ ಅಗತ್ಯವಿಲ್ಲ ಎಂದು ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News