ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಮುಂದಾಗೋಣ: ಡಿಸಿಎಂ ಡಾ.ಅಶ್ವಥನಾರಾಯಣ್

Update: 2019-09-10 14:21 GMT

ಬೆಂಗಳೂರು, ಸೆ.10: ಸಮಾಜ ಭ್ರಷ್ಟಾಚಾರದಿಂದ ತತ್ತರಿಸಿ ಹೋಗಿದೆ. ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರಲ್ಲೂ ಮನವಿ ಮಾಡುತ್ತೇನೆ, ಜಾತಿ ಮೀರಿ ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ನಾವೆಲ್ಲ ಮುಂದಾಗೋಣ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ತಿಳಿಸಿದರು.

ನಗರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಪ್ರತಿಭಟನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಸಂವಿಧಾನ, ಕಾನೂನನ್ನು ಎಲ್ಲ ನಾಗರಿಕ ಬಂಧುಗಳು ಪಾಲಿಸಬೇಕು. ಭಾವನಾತ್ಮಕವಾಗಿ ವಿಚಾರಗಳನ್ನು ವಿರೋಧಿಸಲು ಹೋಗಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು. ಈ ನೆಲದ ಕಾನೂನು ಸುವ್ಯವಸ್ಥೆ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸ್ವತಃ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧವಾಗಿ ಇರಬೇಕೆ ಹೊರತು, ಯಾರ ಪರವಾಗಿಯೂ ಇರಬಾರದು. ನೆಲದ ಕಾನೂನು ಎತ್ತಿ ಹಿಡಿಯುವ ಮೂಲಕ, ಶಾಂತಿ, ಸೌಹಾರ್ದತೆಯನ್ನು ನಾವೆಲ್ಲರೂ ಕಾಪಾಡಬೇಕು ಎಂದು ಅಶ್ವಥನಾರಾಯಣ್ ಹೇಳಿದರು.

ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ನಿನ್ನೆ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ತುಂಬಾ ಹತಾಶರಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಜನರಿಗೆ ಹೋರಾಟ ಮಾಡಿ ಎನ್ನುತ್ತಾರೆ. ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರದ ವಿರುದ್ಧ ತಮ್ಮ ಆಡಳಿತ ಕೊಟ್ಟಿದ್ದಾರೆ ಎಂಬುದು ಮುಖ್ಯ ಎಂದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಯೋಜನೆಗಳನ್ನು ನಿಲ್ಲಿಸಿಲ್ಲ. ಆದರೆ, ಇಂದಿರಾ ಕ್ಯಾಂಟೀನ್, ಕೃಷಿ ಭಾಗ್ಯ, ಕಸ ವಿಲೇವಾರಿ, ವೈಟ್‌ಟಾಪಿಂಗ್ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ದುರ್ಬಳಕೆ ಆಗುತ್ತಿರುವ ಮಾಹಿತಿ ಸಿಕ್ಕಿದಾಗ ಸರಕಾರ ತನಿಖೆ ಅಥವಾ ವಿಚಾರಣೆ ಮಾಡಿ ಲೋಪಗಳನ್ನು ಸರಿಪಡಿಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯರು, ತಿಳುವಳಿಕೆ ಉಳ್ಳವರು, ಅನುಭವಿಗಳು. ಆದರೂ, ಯಾವ ಕಾರಣಕ್ಕಾಗಿ ಟೀಕೆ ಮಾಡಿದ್ದಾರೋ ಗೊತ್ತಿಲ್ಲ. ಈ ಯೋಜನೆಗಳಲ್ಲಿ ದುರ್ಬಳಕೆ ಆಗುತ್ತಿರುವುದು ನೋಡಿ ಸಂತೋಷ ಪಡಬೇಕೆ? ಎಂದು ಅಶ್ವಥನಾರಾಯಣ್ ಪ್ರಶ್ನಿಸಿದರು.

ಬಿಬಿಎಂಪಿ ಮೇಯರ್ ಅವಧಿ ಮುಕ್ತಾಯವಾದ ಬಳಿಕ ಹೊಸ ಮೇಯರ್ ಆಯ್ಕೆಯಾಗುತ್ತಾರೆ. ಬಿಬಿಎಂಪಿಯಲ್ಲಿ ನಾವು 102 ಸಂಖ್ಯಾಬಲ ಹೊಂದಿದ್ದೇವೆ. ಮತದಾರರು ನಮಗೆ ಕೊಟ್ಟಿರುವ ಜನಾದೇಶದಂತೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲಿದ್ದೇವೆ. ನಮಗೆ ಬೆಂಬಲ, ಸಹಕಾರ ನೀಡುವಂತೆ ಎಲ್ಲರನ್ನು ಕೋರುತ್ತೇವೆ ಎಂದು ಅವರು ಹೇಳಿದರು.

ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬ ಸದುದ್ದೇಶ ಇದರಲ್ಲಿದೆ. ದಾಖಲೆಗಳಿಲ್ಲದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರೆ ಯಾರ ಜೀವ ಸುರಕ್ಷಿತವಾಗಿರುತ್ತದೆ ಎಂದು ಅವರು ಪ್ರಶ್ನಿಸಿದರು.

ದಂಡ ಕಟ್ಟಿದಾಗ ಚುರುಕು ಮುಟ್ಟಬೇಕು, ಇನ್ನೊಮ್ಮೆ ತಪ್ಪು ಮಾಡಬಾರದು ಎಂಬ ಉದ್ದೇಶ ಈ ಕಾನೂನಿನಲ್ಲಿದೆ. ಅದಕ್ಕೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ, ರಸ್ತೆಗಳ ದುರಸ್ತಿ, ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಸರಕಾರ ಕಟ್ಟಿಬದ್ಧವಾಗಿದೆ. ಜನರಿಗೆ ಸಮಸ್ಯೆಯಲ್ಲಿ ಬಿಟ್ಟು, ಕೇವಲ ದಂಡಕಟ್ಟಿಸಿಕೊಳ್ಳುವುದಷ್ಟೇ ಸರಕಾರದ ಕೆಲಸವಲ್ಲ ಎಂದು ಅಶ್ವಥನಾರಾಯಣ್ ಹೇಳಿದರು.

ಗೋಹತ್ಯೆ ನಿಷೇಧ

ಗೋಹತ್ಯೆ ನಿಷೇಧ ಸಂವಿಧಾನದಲ್ಲೇ ಇದೆ. ಆದನ್ನು ಹೊಸದಾಗಿ ತರುವಂತಹದ್ದು ಏನು ಇಲ್ಲ. ನಾವು ಜಾರಿಗೆ ತಂದಿರುವ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಈ ಸಂಬಂಧ ಯಾವುದಾದರೂ ಅಡೆತಡೆಗಳಿದ್ದರೆ ತಿದ್ದುಪಡಿ ಮಾಡುತ್ತೇವೆ. ಗೋ ಹತ್ಯೆ ಆಗಬಾರದು ಎಂಬುದು ನಮ್ಮ ಉದ್ದೇಶ.

-ಡಾ.ಸಿ.ಎನ್.ಅಶ್ವಥನಾರಾಯಣ್, ಡಿಸಿಎ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News