ಮೇಯರ್ ಚುನಾವಣೆ ಅಧಿಸೂಚನೆ ಸೆ.11ಕ್ಕೆ ಹೊರಬೀಳುವ ಸಾಧ್ಯತೆ

Update: 2019-09-10 15:03 GMT

ಬೆಂಗಳೂರು, ಸೆ.10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2019-20 ಸಾಲಿನ ಚುನಾವಣೆಗೆ ಇಂದು (ಸೆ.11) ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೆಗೌಡ ಅವರ ಅಧಿಕಾರಾವಧಿ ಸೆ.28ಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣೆ ನಡೆಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ. ಇನ್ನು, ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಚುನಾವಣೆ ನಡೆಸದಂತೆ ಪಾಲಿಕೆ ಆಡಳಿತರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಬಿಬಿಎಂಪಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಕೆಎಂಸಿ ಕಾಯ್ದೆಯ ನಿಯಮದಂತೆ 2019-20ನೇ ಸಾಲಿನ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ವೇಳೆಯಲ್ಲಿಯೇ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪಾಲಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸ್ಥಾಯಿ ಸಮಿತಿ ಅಧಿಕಾರಾವಧಿ ಒಂದು ವರ್ಷವಾಗಿದೆ. ಅದರಂತೆ ಡಿ.4ಕ್ಕೆ ಮುಕ್ತಾಯವಾಗಲಿದೆ. ಅಲ್ಲಿಯವರೆಗೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸದಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಾದೇಶಿಕ ಚುನಾವಣಾ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕೆಎಂಸಿ ಕಾಯ್ದೆ ಪ್ರಕಾರ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯುವ ದಿನವೇ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕು. ಈ ಹಿಂದಿನ ಅವಧಿಯಲ್ಲಿಯೂ ಮೇಯರ್ ಚುನಾವಣೆ ದಿನವೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆಯುತ್ತಿತ್ತು. ಆದರೆ, 2015-16ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಂದಾಗಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿದ ನಂತರ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಪ್ರತ್ಯೇಕವಾಗಿ ನಡೆಯಲು ಆರಂಭವಾಯಿತು. ಈಗ ಇದು ಗೊಂದಲದ ಗೂಡಾಗಿದೆ.

ಗೊಂದಲದ ಹಿನ್ನೆಲೆ

ಕಳೆದ 2018ರಲ್ಲಿ ಸೆ.28ರಂದು ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಚುನಾವಣೆ ನಡೆದರೆ, ಡಿ.4ರಂದು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಿತು. ಹಾಗಾಗಿ, ಮೇಯರ್ ಅಧಿಕಾರಾವಧಿ ಪೂರ್ಣಗೊಂಡ ಎರಡು ತಿಂಗಳ ಬಳಿಕ ಸ್ಥಾಯಿ ಸಮಿತಿ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ.

ಕಾನೂನು ಸಲಹೆ: ಪಾಲಿಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ನಗರಾಭಿವೃದ್ಧಿ ಇಲಾಖೆಗೆ ಸ್ಥಾಯಿ ಸಮಿತಿ ಚುನಾವಣೆ ಸಂಬಂಧ ಮಾಡಿರುವ ಮನವಿ ಕುರಿತಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಾನೂನು ಇಲಾಖೆ ಸಲಹೆ ಪಡೆಯುವುದಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News