ಪರಿಶ್ರಮವಿಲ್ಲದೆ ಪ್ರತಿಭೆ ಪ್ರಕಾಶಿಸುವುದಿಲ್ಲ: ಬಂಜಗೆರೆ ಜಯಪ್ರಕಾಶ್

Update: 2019-09-10 15:10 GMT

ಬೆಂಗಳೂರು, ಸೆ.10: ಪರಿಶ್ರಮವಿಲ್ಲದ ಯಾವ ಪ್ರತಿಭೆಯೂ ಪ್ರಕಾಶಿಸುವುದಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಯಾದವ ಸಾಂಸ್ಕೃತಿಕ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಟ್ರಸ್ಟ್ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಡಾ.ಎ.ಚಂದ್ರಶೇಖರ್‌ರ ‘ಯಾದವರ ಭವ್ಯ ಪರಂಪರೆ ಹಾಗೂ ಇತಿಹಾಸ’ ಕೃತಿ ಬಿಡುಗಡೆ ಹಾಗೂ ಮೋಹನ್ ಕುಮಾರ್ ಗಾಯನದ ಕಾಡುಗೊಲ್ಲರ ದೇವರ ಪದಗಳು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಭೆ ಎಂಬುದು ಎಲ್ಲರಲ್ಲಿಯೂ ಅಡಗಿರುತ್ತದೆ. ಆದರೆ, ಕೆಲವರಿಗಷ್ಟೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಾವ ಕ್ಷೇತ್ರದಲ್ಲಾದರೂ ಪರಿಶ್ರಮ ಅಗತ್ಯ. ರಾಜಕೀಯದಲ್ಲಿ ಇದ್ದವರಿಗೆ ಒಂದೇ ಬಾರಿಗೆ ಮುಖ್ಯಮಂತ್ರಿಯಾಗಲು ಆಗಲ್ಲ, ಸಿನಿಮಾದಲ್ಲಿದ್ದವರಿಗೆ ಏಕಾಏಕಿ ನಾಯಕನಾಗಲ್ಲ, ನಿರಂತರ ಪ್ರಯತ್ನವಿರಬೇಕು ಎಂದರು.

ಯಾದವರ ಪರಂಪರೆ ಬಹಳ ದೊಡ್ಡದು. ಸಮುದಾಯವು ತನ್ನ ಪರಂಪರೆ, ಹಿನ್ನೆಲೆಯನ್ನು ಅರಿಯಲು ಅಧ್ಯಯನ ಮಾಡಬೇಕು. ಇಲ್ಲದಿದ್ದರೆ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಲು ಸಾಧ್ಯವಾಗುವುದಿಲ್ಲ. ಸಂಪನ್ನವಾದ ಇತಿಹಾಸ ಹಾಗೂ ಪರಂಪರೆಯಿದೆ. ಅದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಆರ್ಯರು ಭರತ ಖಂಡದಲ್ಲಿ ಮೊದಲು ಭೇಟಿ ಮಾಡಿದ್ದು ಯಾದವರನ್ನು ಎನ್ನುತ್ತದೆ ಇತಿಹಾಸ. ಆದರೆ, ಈ ಕುರಿತು ಸಮುದಾಯವು ಎಲ್ಲಿಯೂ ಅಧ್ಯಯನಶೀಲವಾಗಿಲ್ಲ ಎಂದ ಅವರು, ಇದೇ ಸತ್ಯವಾಗಿದ್ದರೆ ನೀವದನ್ನು ಸಂಶೋಧನೆ ನಡೆಸುವುದು ಸೂಕ್ತ. ವ್ಯಾಪಕ ಅಧ್ಯಯನದ ಮೂಲಕ ಸಮುದಾಯದ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದು ಸಲಹೆ ನೀಡಿದರು.

ಯಾದವ ಸಮುದಾಯವು ಕಾಲಕಾಲಕ್ಕೆ ಬೆಳೆಯಬೇಕಾದಷ್ಟು ಬೆಳೆಯಲಿಲ್ಲ. ಸಮುದಾಯದ ಜನರು ಸಾಕಷ್ಟು ವಿದ್ಯಾವಂತರಾಗಲಿಲ್ಲ ಎಂದ ಅವರು, ನಮ್ಮನ್ನು ನಾವು ಅರಿಯದ ಹೊರತು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವುದಿಲ್ಲ ಎಂದು ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಸಮಾಜದಲ್ಲಿ ಯಾವ ಸಮುದಾಯ ಸಂಘಟಿತವಾಗುವುದಿಲ್ಲವೋ ಅದನ್ನು ಸಮಾಜ ಗುರುತಿಸುವುದಿಲ್ಲ. ಯಾರು ಬಲಿಷ್ಠವಾಗಿ ಸಂಘಟಿತರಾಗುತ್ತಾರೋ ಅವರನ್ನು ಗುರುತಿಸಲಾಗುವುದು. ಹೀಗಾಗಿ, ಎಲ್ಲರೂ ಒಂದಾಗಿ ಸಂಘಟಿತರಾಗಬೇಕಿದೆ ಎಂದು ಅವರು ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಮನಸ್ಸಿಗೆ ಯಾವ ಶಿಕ್ಷಣ ಆಪ್ತವೆನಿಸುತ್ತದೆಯೋ ಅದನ್ನೇ ಕಲಿಸಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಅವರು ಪ್ರೀತಿಯಿಂದ, ಸ್ವಯಂ ಪ್ರೇರಿತವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಬೇಕು ಎಂದು ಸಲಹೆ ನೀಡಿದರು.

ಕನಸು ಕಾಣುವುದಕ್ಕೆ ಹಾಗೂ ಸಾಧನೆ ಮಾಡುವುದಕ್ಕೆ ಬಣ್ಣ, ಆಕಾರಗಳು ಅಡ್ಡಿ ಬರಬಾರದು. ಕಪ್ಪು ಬಣ್ಣದ ಬಲೂನೂ ಗಾಳಿಯಲ್ಲಿ ಮೇಲಕ್ಕೆ ಹಾರುತ್ತದೆ. ಅದೇ ರೀತಿ ಸಾಧನೆ ಮಾಡಬೇಕಾದರೆ ನಮ್ಮ ಕೌಶಲ್ಯತೆಯನ್ನು ವೃದ್ಧಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ, ಟೆಕ್ನಾಜಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ನಾರಾಯಣಸ್ವಾಮಿ, ಚಿತ್ರಕಲಾವಿದ ವಿಶ್ವನಾಥ್, ಜಾನಪದ ಗಾಯಕಿ ಸಾಕಮ್ಮ, ಗಾಯಕ ಮೋಹನ್ ಕುಮಾರ್, ಯಾದವವಾಣಿ ಸಂಪಾದಕ ಡಾ.ಚಂದ್ರಶೇಖರ್, ಟ್ರಸ್ಟ್‌ನ ಅಧ್ಯಕ್ಷ ಜಿ.ದೇವರಾಜು ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News