ಭದ್ರತಾ ಸುರಕ್ಷಾ ಪಡೆ ಶಾಶ್ವತ ಘಟಕ ಸ್ಥಾಪನೆಗೆ ಚಿಂತನೆ

Update: 2019-09-10 16:45 GMT

ಬೆಂಗಳೂರು, ಸೆ.10: ಬೆಂಗಳೂರು ನಗರದಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆಯ ಶಾಶ್ವತ ಘಟಕ ಸ್ಥಾಪನೆಯಾಗಲಿದೆ. ಇದು ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಘಟಕವಾಗಿದೆ.

ರೈಲ್ವೆ ಭದ್ರತಾ ಸುರಕ್ಷಾ ಪಡೆ (ಆರ್‌ಪಿಎಸ್‌ಎಫ್) ತುರ್ತು ಸಂದರ್ಭದಲ್ಲಿ ನಗರದ ರೈಲು ನಿಲ್ದಾಣದ ಸುರಕ್ಷತೆಯ ಹೊಣೆ ಹೊರಲಿದೆ. ಪ್ರಸ್ತುತ ಸಿಕಂದರಾಬಾದ್ ಮತ್ತು ತಿರುಚಿನಾಪಳ್ಳಿಯಲ್ಲಿ ಈ ಘಟಕವಿದೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಸಮೀಪದಲ್ಲಿಯೇ 100 ಜನರು ಉಳಿದುಕೊಳ್ಳಬಹುದಾದ ಘಟಕ ಸ್ಥಾಪನೆಯಾಗಲಿದೆ. ತುರ್ತು ಸಂದರ್ಭದಲ್ಲಿ ಯಶವಂತಪುರ, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಈ ಘಟಕ ಆಗಮಿಸಲಿದೆ.

ಬೆಂಗಳೂರು ನಗರಕ್ಕೆ ಆಗಾಗ ಉಗ್ರರ ದಾಳಿಯ ಎಚ್ಚರಿಕೆ ಬರುತ್ತದೆ. ಆದುದರಿಂದಾಗಿ, ನಗರದಲ್ಲಿ ಆರ್‌ಪಿಎಸ್‌ಎಫ್ ಶಾಶ್ವತ ಘಟಕ ಸ್ಥಾಪನೆ ಅನುಕೂಲವಾಗಲಿದೆ. ಈಗಾಗಲೇ ಘಟಕ ಸ್ಥಾಪನೆ ಕಾಮಗಾರಿ ಆರಂಭವಾಗಿದ್ದು, ಆರು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಲು ಆರ್‌ಪಿಎಸ್‌ಎಫ್ ತಂಡ ಸಿದ್ಧವಾಗಿರುತ್ತದೆ. ಈ ತಂಡದ ಸದಸ್ಯರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿರುತ್ತದೆ.

ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿಭಾಗ ಇದರಲ್ಲಿ ಇರುತ್ತದೆ. ಇದುವರೆಗೂ ನಕ್ಸಲ್ ಪೀಡಿತ ಪ್ರದೇಶ, ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಆರ್‌ಪಿಎಸ್‌ಎಫ್ ಘಟಕ ಸ್ಥಾಪನೆಯಾಗುತ್ತಿತ್ತು. ಈಗ ಬೆಂಗಳೂರಿಗೂ ಘಟಕ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News