ಪೊಲೀಸ್ ಆಯುಕ್ತರ ದಿಢೀರ್ ಭೇಟಿ: ಠಾಣೆಯ ಅವ್ಯವಸ್ಥೆ ಕಂಡು ಸಿಬ್ಬಂದಿಗಳಿಗೆ ತರಾಟೆ

Update: 2019-09-10 17:08 GMT
ಭಾಸ್ಕರ್ ರಾವ್

ಬೆಂಗಳೂರು, ಸೆ.10: ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಠಾಣೆಯಲ್ಲಿ ಕಂಡುಬಂದ ಅವ್ಯವಸ್ಥೆಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಯನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು, ದಾಖಲಾತಿಗಳನ್ನು ಕ್ರಮವಾಗಿ ಜೋಡಿಸದಿರುವುದು ಹಾಗೂ ದೂಳು ತುಂಬಿರುವುದನ್ನು ಗಮನಿಸಿ ಠಾಣೆಯಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ಠಾಣೆಯ ನಿರ್ವಹಣೆಗಾಗಿ ನೀಡಲಾಗುತ್ತಿರುವ ಹಣವನ್ನು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ ಆಯುಕ್ತರು ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಎಸ್‌ಐ ಹಾಗೂ ಮುಖ್ಯಪೇದೆ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆಯುಕ್ತರು, ಠಾಣೆ ಅವ್ಯವಸ್ಥೆಯಿಂದ ಕೂಡಿದೆ, ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಇಂತಹ ಅವ್ಯವಸ್ಥೆಯನ್ನು ಸಹಿಸುವುದಿಲ್ಲ. ಇದು ಹೀಗೆಯೇ ಮುಂದುವರೆದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ನಂತರ ವಾಕಿಟಾಕಿಯ ಮೂಲಕ ನಗರದ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ ಅವರು, ನಾನು ಯಾವುದೇ ಕ್ಷಣದಲ್ಲಾದರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಈ ಸಂದರ್ಭದಲ್ಲಿ ಅವ್ಯವಸ್ಥೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಆಯುಕ್ತರ ಭೇಟಿಗೆ ಅಭಿನಂದನೆ

ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಬನಶಂಕರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಅಭಿನಂದನೀಯ. ಇದೇ ರೀತಿಯಲ್ಲಿ ಇತರೆ ಠಾಣೆಗಳಿಗೂ ಭೇಟಿ ನೀಡಿ, ತಮ್ಮ ಠಾಣೆಗಳಲ್ಲಿ ತಪ್ಪಿಸಿಕೊಂಡ ಮಕ್ಕಳ ಬಗ್ಗೆ ಎಷ್ಟು ದೂರು ಬಂದಿದೆ. ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು, ತುರ್ತು ಅಗತ್ಯಗಳನ್ನು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಬೇಕು ಹಾಗೂ ಮಕ್ಕಳ ಕಲ್ಯಾಣ ಸಮಿತಿಯೆಂದರೆ ಏನು ಎಂಬುದನ್ನು ತಿಳಿಸಿಕೊಡಿ.

-ಅಂಜಲಿ ರಾಮಣ್ಣ, ಅಧ್ಯಕ್ಷೆ. ಮಕ್ಕಳ ಕಲ್ಯಾಣ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News