ನಿರುದ್ಯೋಗ ಅಂಕಿ ಅಂಶಗಳು ತಪ್ಪು, ಯಾರೂ ಉದ್ಯೋಗ ಕಳೆದುಕೊಳ್ಳುತ್ತಿಲ್ಲ ಎಂದ ಕೇಂದ್ರ ಸಚಿವ!

Update: 2019-09-11 07:11 GMT

ಹೊಸದಿಲ್ಲಿ, ಸೆ.11:  ನಿರುದ್ಯೋಗ ಪ್ರಮಾಣದ ಅಂಕಿ ಅಂಶಗಳು ತಪ್ಪು ಹಾಗೂ ದೇಶದಲ್ಲಿ ಯಾರು ಕೂಡ ಉದ್ಯೋಗ ಕಳೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿಕೊಂಡಿದ್ದಾರೆ.

ದೇಶದಲ್ಲಿ 2017-18ರಲ್ಲಿದ್ದ ಒಟ್ಟು ಉದ್ಯೋಗಾರ್ಹ ಜನಸಂಖ್ಯೆಯ ಪೈಕಿ ನಿರುದ್ಯೋಗ ಪ್ರಮಾಣ ಶೇ.6.1ರಷ್ಟಿದೆ ಹಾಗೂ ಇದು ಕಳೆದ 45 ವರ್ಷಗಳಲ್ಲಿಯೇ  ಗರಿಷ್ಠ ಎಂದು ಕೇಂದ್ರ ಮೇ 31ರಂದು ಬಿಡುಗಡೆಗೊಳಿಸಿದ ವರದಿ ತಿಳಿಸಿದ್ದರೂ ಸಚಿವರು ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

“ಮೂಲಭೂತ ಸೌಕರ್ಯ ಅಭಿವೃದ್ಧಿಗೊಳ್ಳುತ್ತಿದೆ, ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಕಂಪೆನಿಗಳು ಹೂಡಿಕೆ ಮಾಡುತ್ತಿವೆ, ಕೃಷಿ ಉತ್ಪಾದನೆ ಹೆಚ್ಚಳವಾಗಿದೆ ಹಾಗೂ ಕೋಟ್ಯಂತರ ಜನರು ಮುದ್ರಾ ಯೋಜನೆಯಡಿ ಸಾಲ ಪಡೆಯುತ್ತಿದ್ದಾರೆ. ಉದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ'' ಎಂದು ರೈ  ಭೋಪಾಲದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯ ಮೊದಲ ನೂರು ದಿನಗಳ ಸಾಧನೆ ಬಗ್ಗೆ ಹೇಳಿಕೊಳ್ಳಲು ಸಚಿವ ಭೋಪಾಲಕ್ಕೆ ಆಗಮಿಸಿದ್ದರು.

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದ ಸಚಿವರು, ಕೆಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬೇಕಿದ್ದು ಈ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದೆ. ದೇಶದ ಅರ್ಥವ್ಯವಸ್ಥೆ  ಸಶಕ್ತವಾಗಿದೆ ಹಾಗೂ ಅದು ಹಾಗೆಯೇ ಮುಂದುವರಿಯಲಿದೆ ಎಂದೂ ರೈ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News