ಆಹಾರ ಸುರಕ್ಷತೆ-ಗುಣಮಟ್ಟ ವಿಭಾಗವು ಪ್ರತ್ಯೇಕ ಇಲಾಖೆಯಾಗಲಿ: ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ

Update: 2019-09-11 15:26 GMT

ಬೆಂಗಳೂರು, ಸೆ. 11: ಆರೋಗ್ಯ ಇಲಾಖೆಯ ಒಂದು ಭಾಗವಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗವನ್ನು ಒಂದು ಪ್ರತ್ಯೇಕ ಇಲಾಖೆಯಾಗಿ ರಚಿಸಬೇಕು ಎಂದು ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ. ರವೀಂದ್ರ ಅಭಿಪ್ರಾಯಪಟ್ಟಿದದರೆ.

ಬುಧವಾರ ಆಹಾರ ಸುರಕ್ಷತಾ ಹಾಗೂ ಮಾನದಂಡಗಳ ಪ್ರಾಧಿಕಾರದ ಅಶ್ರಯದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತರು ನಗರದ ವಾರ್ತಾ ಸೌಧದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಮರು ಉದ್ದೇಶಿತ ಬಳಕೆಯಾದ ಅಡುಗೆ ಎಣ್ಣೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಆರೋಗ್ಯ ಸಂರಕ್ಷಣೆಗೆ ನಾವು ಸೇವಿಸುವ ಆಹಾರ ಪದಾರ್ಥಗಳ ಸುರಕ್ಷತೆ ಅತಿಮುಖ್ಯ. ಆಹಾರ ಪದಾರ್ಥಗಳ ಉತ್ಪಾದನೆ, ಉಗ್ರಾಣದಲ್ಲಿನ ಸಂಗ್ರಹ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅವುಗಳ ಸಾರಿಗೆ ಹಾಗೂ ಅಂತಿಮವಾಗಿ ಅದರ ಬಳಕೆ ಹೀಗೆ ಎಲ್ಲ ಹಂತಗಳಲ್ಲೂ ನಾವು ಆಹಾರ ಸುರಕ್ಷತೆಯತ್ತ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ.

ಒಮ್ಮೆ ಅಡುಗೆ ಎಣ್ಣೆಯನ್ನು ಬಳಕೆ ಮಾಡಿದ ನಂತರ ಉಳಿಕೆ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಪ್ರತಿ ಮನೆಯಲ್ಲಿ ಅಡುಗೆ ಮನೆಯನ್ನು ನಿರ್ವಹಿಸುವವರು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ, ಬೀದಿ ಬದಿ ವ್ಯಾಪಾರಸ್ಥರು, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಮಾಲಕರೂ ಇದನ್ನು ಗಮನಿಸಿ ಗ್ರಾಹಕರ ಆರೋಗ್ಯದತ್ತ ಎಚ್ಚರಿಕೆ ವಹಿಸಬೇಕೆಂದು ರವೀಂದ್ರ ಸೂಚಿಸಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಪ್ರತಿನಿತ್ಯ ನಾವು ಆಹಾರವನ್ನು ಸೇವಿಸುತ್ತೇವೆ. ರಾಸಾಯನಿಕಗಳು, ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಅಧಿಕ ಬಳಕೆ ಆಹಾರ ಪದಾರ್ಥಗಳನ್ನೇ ಕಲುಷಿತಗೊಳಿಸುತ್ತಿವೆ ಎಂದರು.

ಅಲ್ಲದೆ, ಆಹಾರ ಕಲಬೆರಕೆ ತಡೆಗಟ್ಟುವ ಕಾಯಿದೆಯ ನಂತರ, 2006ರಲ್ಲಿ ಆಹಾರ ಸುರಕ್ಷತಾ ಗುಣಮಟ್ಟ ಕಾಯಿದೆ ರೂಪಿಸಿದ ಕೇಂದ್ರ ಸರಕಾರ ಕೆಲವು ನಿಯಮಗಳನ್ನು ರೂಪಿಸಿ ಮಾರ್ಗಸೂಚಿಗಳನ್ನು ಹೊರತಂದಿದೆ. ಇವುಗಳನ್ನು ಪಾಲಿಸಿದರೆ, ನಮ್ಮ ಹಲವು ಸಮಸ್ಯೆಗಳಿಗೆ ಉತ್ತರ ದೊರೆಯಲಿದೆ. ಈ ಕಾಯಿದೆಯನ್ನು ಉಲ್ಲಂಘಿಸುವವರ ವಿರುದ್ಧ ಎಲ್ಲಿ ದೂರು ನೀಡಬೇಕು? ಹೇಗೆ ದೂರು ಸಲ್ಲಿಸಬೇಕು? ಎಂಬುದರ ಕುರಿತು ನಾಗರಿಕ ಚಳುವಳಿ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಆಹಾರ ಸುರಕ್ಷತೆ-ಗುಣಮಟ್ಟ ಜಂಟಿ ಆಯುಕ್ತೆ ಕಾತ್ಯಾಯಿನಿ, ಉಪ ಆಯುಕ್ತೆ ಡಾ.ಪ್ರೇಮಲತಾ, ಲತಾ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಎಕೋ- ಗ್ರೀನ್ ಫ್ಯೂಯೆಲ್ಸ್ ಪ್ರೈ.ಲಿ., ರಾಜ್ಯ ಪ್ರದೇಶ ಹೊಟೇಲ್ಸ್ ಅಂಡ್ ರೆಸ್ಟೋರೆಂಟ್ಸ್ ಅಸೋಸಿಯೋಷನ್ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News