ರಾಜ್ಯದ ಶಿಬಿರಗಳಲ್ಲಿ ಆನೆಗಳ ಸಾವು ವಿಚಾರ: ತಜ್ಞರ ಸಮಿತಿ ರಚಿಸುವ ಬಗ್ಗೆ ಮಾಹಿತಿ ನೀಡಿ- ಹೈಕೋರ್ಟ್

Update: 2019-09-11 17:31 GMT

ಬೆಂಗಳೂರು, ಸೆ.11: ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳ ಸಾವನ್ನು ತಡೆಗಟ್ಟಲು ತಜ್ಞರ ಸಮಿತಿ ರಚಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಆನೆ ಶಿಬಿರಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಸೆ.19ರೊಳಗೆ ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ. 

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಎನ್.ಪಿ.ಅಮೃತೇಶ್ ಅವರು ವಾದಿಸಿ, ಕಳೆದ ವಿಚಾರಣೆ ವೇಳೆ ಆನೆಗಳ ಸಾವುಗಳ ಬಗ್ಗೆ ನಿಖರವಾದ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ಪೀಠಕ್ಕೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಅರ್ಜಿದಾರರಿಗೆ ನೀವೆ ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಹೀಗಾಗಿ ನಾಲ್ವರು ತಜ್ಞರ ಪಟ್ಟಿಯನ್ನ ನ್ಯಾಯಲಯಕ್ಕೆ ಅರ್ಜಿದಾರರು ಸಲ್ಲಿಕೆ ಮಾಡಿದರು. ಇದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ತಜ್ಞರ ಸಮಿತಿ ರಚನೆ ಬಗ್ಗೆ ಮಾಹಿತಿ ನೀಡಲು ಆದೇಶಿಸಿತು.

ಅರ್ಜಿಯಲ್ಲಿ ಏನಿದೆ: ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳ ಶಿಬಿರಗಳಲ್ಲಿ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಹೀಗಾಗಿ ತಜ್ಞರ ಸಮಿತಿ ಮಾಡಿ ತನಿಖೆ ನಡೆಸಬೇಕು ಎಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News