ಡೆಂಗ್ ಪರೀಕ್ಷೆಗೆ ನಿಗದಿಗಿಂತ ಹೆಚ್ಚು ಹಣ ಪಡೆದರೆ ದೂರು ನೀಡಿ: ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ

Update: 2019-09-11 17:42 GMT

ಬೆಂಗಳೂರು, ಸೆ.11: ಡೆಂಗ್ ಸೋಂಕು ಪರೀಕ್ಷೆಗೆ ದರ ನಿಗದಿಪಡಿಸಿದ್ದು, ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿ ದರ ಪಡೆದಿದ್ದರೆ ಆರೋಗ್ಯಾಧಿಕಾರಿಗಳ ಬಳಿ ದೂರು ನೀಡಿ, ಹಣ ವಾಪಸ್ ಪಡೆಯಬಹುದಾಗಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಕುಮಾರ್ ತಿಳಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಡೆಂಗಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಡೆಂಗಿ ಪರೀಕ್ಷೆಗೆಂದು ಸಾಕಷ್ಟು ಹಣ ಪಡೆಯುತ್ತಿದ್ದ ಕಾರಣ ಸರಕಾರ ಮೂರು ವರ್ಷಗಳ ಹಿಂದೆ ದರ ನಿಗದಿ ಪಡಿಸಿತ್ತು. ಸರಕಾರ ಇದಕ್ಕೆ ನಿಗದಿ ಮಾಡಿರುವುದು 500ರೂ. ಮಾತ್ರ. ಖಾಸಗಿ ಆಸ್ಪತ್ರೆಗಳು ಐಜಿಜಿ, ಎನ್‌ಎಸ್1 ಮತ್ತು ಐಜಿಎಂ ಪರೀಕ್ಷೆಗೆ ತಲಾ 250 ಪಡೆಯಬೇಕು. ಹಾಗೂ ಈ ಮೂರು ಪರೀಕ್ಷೆಗಳನ್ನು ಒಟ್ಟಿಗೆ ಮಾಡಿಸಿದರೆ 500 ರೂ.ಪಡೆಯಬೇಕು ಎಂದು ಸರಕಾರ ದರ ನಿಗದಿಗೊಳಿಸಿದೆ.

ಡೆಂಗ್ ಪರೀಕ್ಷೆಗಾಗಿ ಸರಕಾರ ನಿಗದಿಪಡಿಸಿರುವಷ್ಟೇ ಹಣವನ್ನು ಪಡೆಯಬೇಕು. ಅಧಿಕ ಹಣವನ್ನು ಪಡೆಯುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ಪಡೆಯುವ ಬಗ್ಗೆ ಜನರು ದೂರು ನೀಡಿದರೆ, ಸರಕಾರದ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಎಚ್ಚರಿಕೆಯ ನೋಟಿಸ್ ನೀಡುತ್ತೇವೆ. ನಂತರ ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬಹುದು. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಅದರ ಆಧಾರದ ಮೇಲೆ ಈಗಾಗಲೇ ಕೆಲವು ಲ್ಯಾಬ್‌ಗಳಿಗೆ ನೋಟಿಸ್ ಅನ್ನೂ ನೀಡಿದ್ದೇವೆ. ಆಗ ಅವರು ಹೆಚ್ಚುವರಿ ಹಣವನ್ನು ದೂರುದಾರರಿಗೆ ವಾಪಸ್ ನೀಡಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News