ವ್ಯವಸ್ಥೆಯ ನಗ್ನ ಸತ್ಯಗಳನ್ನು ಬಿಚ್ಚಿಟ್ಟ ಎ.ಕೆ.ಸುಬ್ಬಯ್ಯ: ನ್ಯಾ.ವಿ.ಗೋಪಾಲಗೌಡ

Update: 2019-09-11 18:06 GMT

ಬೆಂಗಳೂರು, ಸೆ.11: ವ್ಯವಸ್ಥೆಯ ನಗ್ನಸತ್ಯಗಳನ್ನು ಜನರೆದುರು ಬಿಚ್ಚಿಡುತ್ತಿದ್ದ ಎ.ಕೆ.ಸುಬ್ಬಯ್ಯ ಅವರು ಎಂದೂ ನಾಟಕೀಯವಾಗಿ ರಾಜಕಾರಣ ಮಾಡಲಿಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ವಕೀಲರ ಸಭಾಭವನದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ದಿ.ಎ.ಕೆ.ಸುಬ್ಬಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರವೊಂದು ಸಂವಿಧಾನಬದ್ಧವಾಗಿ ಹೇಗೆ ನಡೆಯಬೇಕು ಎಂಬುದನ್ನು ವಿಧಾನ ಪರಿಷತ್ ಸಭಾನಾಯಕರಾಗಿ ತೋರಿಸಿಕೊಟ್ಟ ಸುಬ್ಬಯ್ಯ ಒಬ್ಬ ವಸ್ತುನಿಷ್ಠ ಮತ್ತು ನಿಷ್ಠುರ ರಾಜಕಾರಣಿಯಾಗಿದ್ದರು. ಇಂದಿನ ರಾಜಕೀಯ ಸಂದರ್ಭ ಪ್ರಾಮಾಣಿಕ ರಾಜಕಾರಣಿಗಳನ್ನು ದೂರವಿಡುತ್ತಿರುವಾಗ ಸುಬ್ಬಯ್ಯ ಅವರಂತಹ ವ್ಯಕ್ತಿತ್ವ ಅಪರೂಪ ಎಂದರು.

ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಎಲ್.ಶಂಕರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಆರಂಭದಲ್ಲಿ ಕಟ್ಟಿ ಬೆಳೆಸಿದ ಸುಬ್ಬಯ್ಯ ಕೃಷಿಕರಾಗಿ, ವಕೀಲರಾಗಿ, ರಾಜಕಾರಣಿಯಾಗಿ, ಸಾಹಿತಿಯಾಗಿ ಮತ್ತು ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ ತಾವು ನಂಬಿದ್ದ ಸಿದ್ಧಾಂತಗಳಿಗೆ ಅತ್ಯಂತ ಬದ್ಧತೆಯಿಂದ ನಡೆದುಕೊಂಡರು ಎಂದು ಸ್ಮರಿಸಿದರು.

ಸುಬ್ಬಯ್ಯ ಅವರನ್ನು ನೋಡಲು ಹೋದಾಗ ನಾನು ಯಾರನ್ನಾದರೂ ಕರೆದುಕೊಂಡು ಹೋಗಿದ್ದರೆ(ಅವರ ಬಗ್ಗೆ ಸದಾಭಿಪ್ರಾಯ ಇರಲಿಲ್ಲ ಎಂದರೆ), ಈ ಕಳ್ಳನನ್ನು ಯಾಕೆ ಕರೆದುಕೊಂಡು ಬಂದಿದ್ದೀಯಾ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಕೇಳುತ್ತಿದ್ದರು. ತೀವ್ರ ನಿಷ್ಠುರವಾದಿಯಾಗಿದ್ದ ಅವರು, ಪ್ರತಿಫಲಾಪೇಕ್ಷೆ ಇಲ್ಲದೆ ರಾಜಕಾರಣ ಮಾಡಿದರು. ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳಲಿಲ್ಲ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಒಟಿಸಿ (ಆಫೀಸರ್ಸ್ ಟ್ರೈನಿಂಗ್ ಕ್ಯಾಂಪ್) ಪೂರೈಸಿದ್ದಂತಹ ಪಿ.ಜಿ.ಆರ್. ಸಿಂಧ್ಯ ಮತ್ತು ವಿ.ಎಸ್.ಉಗ್ರಪ್ಪನವರಂತಹ ಯುವಕರು ಅಂದು ಸುಬ್ಬಯ್ಯನವರ ಚಿಂತನೆಗಳಿಂದ ಆಕರ್ಷಿತರಾಗಿ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಬದಲಿಸಿಕೊಂಡರು. ನಾನೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿದ್ದವನು. ಜೆ.ಪಿ.ಚಳುವಳಿಯಲ್ಲಿ ಸುಬ್ಬಯ್ಯನವರ ವಿಚಾರಧಾರೆಗಳಿಗೆ ಮನಸೋತು ಸಮಾಜವಾದಿ ರಾಜಕಾರಣಕ್ಕೆ ಧುಮುಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News