ಲಡಾಖ್ ಗಡಿಯಲ್ಲಿ ಭಾರತ- ಚೀನಾ ಸೈನಿಕರ ಸಂಘರ್ಷ

Update: 2019-09-12 03:33 GMT

ಹೊಸದಿಲ್ಲಿ, ಸೆ.12: ಅರುಣಾಚಲ ಪ್ರದೇಶದಲ್ಲಿ ಮುಂದಿನ ತಿಂಗಳು ತನ್ನ ಹೊಸ ಸಮಗ್ರ ಯುದ್ಧ ಪಡೆ (ಐಬಿಜಿ)ಗಳ ಪರೀಕ್ಷಾರ್ಥ ಅಣಕು ಯುದ್ಧಕ್ಕೆ ಭಾರತ ಪಡೆಗಳು ಸಜ್ಜಾಗಿರುವ ನಡುವೆಯೇ ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ಮುಂದುವರಿದಿದ್ದು, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಭುಗಿಲೆದ್ದಿದೆ.

ಲಡಾಖ್‌ನಿಂದ ಟಿಬೇಟ್‌ವರೆಗೆ ವಿಸ್ತರಿಸಿರುವ 134 ಕಿಲೋಮೀಟರ್ ಉದ್ದದ ಪಾಂಗಾಂಗ್ ಸೋ ಸರೋವರದ ಉತ್ತರ ದಂಡೆಯಲ್ಲಿ ಉಭಯ ದೇಶಗಳ ನಡುವಿನ ಕಾಳಗ ಬುಧವಾರ ಆರಂಭವಾಗಿದೆ.

"ಭಾರತೀಯ ಸೈನಿಕರು ಗಸ್ತು ತಿರುಗುತ್ತಿದ್ದಾಗ ಆ ಪ್ರದೇಶದಲ್ಲಿ ಭಾರತೀಯ ಸೈನಿಕರ ಇರುವಿಕೆ ಬಗ್ಗೆ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದು ಉಭಯ ದೇಶಗಳ ಸೈನಿಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಉಭಯ ದೇಶಗಳು ಹೆಚ್ಚುವರಿ ಪಡೆಯನ್ನು ಕಳುಹಿಸಿದ್ದು ಉದ್ವಿಗ್ನತೆಗೆ ಕಾರಣವಾಗಿದೆ. ಸಂಜೆಯವರೆಗೂ ಇದೇ ಪರಿಸ್ಥಿತಿ ಇತ್ತು" ಎಂದು ಮೂಲಗಳು ಹೇಳಿವೆ.

ಉದ್ವಿಗ್ನತೆಯನ್ನು ಶಮನಗೊಳಿಸುವ ದೃಷ್ಟಿಯಿಂದ ಮಾಡಿಕೊಂಡಿರುವ ದ್ವಿಪಕ್ಷೀಯ ವ್ಯವಸ್ಥೆಯಡಿ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳ ನೇತೃತ್ವದ ನಿಯೋಗ ಹಂತದ ಮಾತುಕತೆ ನಡೆಯುತ್ತಿದೆ ಎಂದು ಸೇನೆಯ ಮೂಲಗಳು ಸ್ಪಷ್ಟಪಡಿಸಿವೆ. "ವಾಸ್ತವವಾಗಿ ವಾಸ್ತವ ನಿಯಂತ್ರಣ ರೇಖೆ ಎಲ್ಲಿದೆ ಎಂಬ ಬಗ್ಗೆ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಇರುವ ಕಾರಣದಿಂದ ಇಂಥ ಉದ್ವಿಗ್ನತೆ ಸಹಜ. ಗಡಿ ಸಿಬ್ಬಂದಿ ಸಭೆ, ಧ್ವಜ ಸಭೆ ಮತ್ತು ಇಂಥ ಮಾತುಕತೆ ಮೂಲಕ ಅದನ್ನು ಬಗೆಹರಿಸಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪಾಂಗಾಂಗ್ ಉತ್ತರ ದಂಡೆಯ ವಿವಾದಿತ ಫಿಂಗರ್-5 ನಿಂದ ಫಿಂಗರ್-8 (ಪರ್ವತ ಶ್ರೇಣಿಗಳು) ಪ್ರದೇಶದಲ್ಲಿ 2017ರ ಆಗಸ್ಟ್ 15ರಂದು ಕೂಡಾ ವ್ಯಾಪಕ ಹಿಂಸಾಚಾರ ನಡೆದಿದ್ದು, ಉಭಯ ದೇಶಗಳ ನಡುವಿನ ಸೈನಿಕರ ಪರಸ್ಪರ ಕಾಳಗಕ್ಕೆ ಕಲ್ಲು ಮತ್ತು ಕಬ್ಬಿಣದ ರಾಡ್‌ಗಳು ಬಳಕೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News