ಬಾಬರಿ ಮಸೀದಿ ಧ್ವಂಸವಾಗಿ 27 ವರ್ಷಗಳ ಬಳಿಕವೂ ಒಬ್ಬರಿಗೂ ಶಿಕ್ಷೆಯಾಗದಿರುವುದು ದುರದೃಷ್ಟಕರ

Update: 2019-09-12 10:45 GMT

ಹೊಸದಿಲ್ಲಿ: ಎಲ್ಲಾ ರಾಜಕೀಯ ಪಕ್ಷಗಳೂ ಹಿಂದುಗಳನ್ನು ಓಲೈಸುತ್ತಿದೆಯೆಂಬುದನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆ ನಡೆಸಿದ ಲಿಬರ್ಹಾನ್ ಆಯೋಗಕ್ಕೆ ಅವುಗಳು ನೀಡಿದ ಸಹಕಾರದಿಂದ ತಿಳಿದು ಬರುತ್ತದೆ, ಎಂದು ನಿವೃತ್ತ ಐಎಎಸ್ ಅಧಿಕಾರಿ ಮಾಧವ್ ಗೋಡ್ಬೋಲೆ ಹೇಳಿದ್ದಾರೆ.

ಘಟನೆ ನಡೆದು 27 ವರ್ಷಗಳೇ ಸಂದಿದ್ದರೂ ಇಲ್ಲಿಯ ತನಕ ಒಬ್ಬನೇ ಒಬ್ಬ ವ್ಯಕ್ತಿಯನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ಬಂಧಿಸಲಾಗಿಲ್ಲದೇ ಇರುವುದು ದುರದೃಷ್ಟಕರ ಎಂದು ‘ದಿ ಬಾಬರಿ ಮಸ್ಜಿದ್ ರಾಮ್ ಮಂದಿರ್ ಡೈಲೆಮ್ಮ _ ಆ್ಯನ್ ಆ್ಯಸಿಡ್ ಟೆಸ್ಟ್ ಫಾರ್ ಇಂಡಿಯಾಸ್ ಕಾನ್‍ಸ್ಟಿಟ್ಯೂಶನ್' ಎಂಬ ಕೃತಿಯ ಲೇಖಕರಾಗಿರುವ ಗೋಡ್ಬೋಲೆ ಹೇಳಿದ್ದಾರೆ.

“ತನಿಖೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ನಾವೊಂದು ಜಾತ್ಯತೀತ ರಾಷ್ಟ್ರ ಎಂದು ನಾವು ವಿಶ್ವದೆದುರು ಹೇಗೆ ಹೇಳಬಲ್ಲೆವು?'' ಎಂದು ‘ದಿ ಪ್ರಿಂಟ್’ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಹದಿನಾರನೇ ಶತಮಾನದಲ್ಲಿ ನಿರ್ಮಿತ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಮಾರ್ಚ್ 1993ರಲ್ಲಿ ನಿವೃತ್ತರಾಗಲು ಇನ್ನೂ 18 ತಿಂಗಳುಗಳಿರುವಾಗಲೇ ಕೇಂದ್ರ ಗೃಹ ಕಾರ್ಯದರ್ಶಿ ಹುದ್ದೆಗೆ ಗೋಡ್ಬೋಳೆ ರಾಜೀನಾಮೆ ನೀಡಿದ್ದರು. ತಮ್ಮನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳಾದ ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಲಿಬರ್ಹಾನ್ ಆಯೋಗ ತನಿಖೆ ನಡೆಸಿದ 17 ವರ್ಷಗಳ ಪೈಕಿ 10 ವರ್ಷ  ಅಧಿಕಾರದಲ್ಲಿದ್ದರೂ ತನಿಖೆಗೆ ಚುರುಕು ಮುಟ್ಟಿಸಲು ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

“ಅವರು ವಸ್ತು ರೂಪದ ಸಾಕ್ಷ್ಯಗಳನ್ನು ಮುಂದಿಡಬಹುದಾಗಿತ್ತು. ಆದರೆ ಎಲ್ಲಾ ರಾಜಕೀಯ ಪಕ್ಷಗಳು ಹಿಂದು ಓಲೈಕೆ ಪಕ್ಷಗಳಾಗಿವೆ. ಅವುಗಳ ಮಾತುಗಳಿಗಿಂತ ಹೆಚ್ಚಾಗಿ ಕೃತಿಗಳು ಇದನ್ನು ಸೂಚಿಸುತ್ತವೆ. ಅವರು ಲಿಬರ್ಹಾನ್ ಆಯೋಗಕ್ಕೆ ನೀಡಿದ ಸಹಕಾರದಿಂದ ಇದು ತಿಳಿದು ಬರುತ್ತದೆ,'' ಎಂದು ಗೋಡ್ಬೋಲೆ ಹೇಳಿದ್ದಾರೆ.

ಪಿ ವಿ ನರಸಿಂಹ ರಾವ್, ಎಸ್ ಬಿ ಚವಾಣ್, ಶರದ್ ಪವಾರ್ ಹಾಗೂ ಅರ್ಜುನ್ ಸಿಂಗ್ ಅವರಂತಹ ನಾಯಕರು ಆಯೋಗದ ಮುಂದೆ ನೀಡಿದ್ದ ಹೇಳಿಕೆಗಳನ್ನು ಓದಲು ತಮ್ಮ ಕೃತಿ ಬರೆಯುವ ವೇಳೆ ತಮಗೆ ಆಸಕ್ತಿಯಿತ್ತು ಎಂದು ಅವರು ಹೇಳಿದರು. “ನಾನು ಗೃಹ ಕಾರ್ಯದರ್ಶೀ ಹಾಗೂ ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ ಆದರೆ ಸಾಕ್ಷ್ಯಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ ಎಂದು ನನಗೆ ಹೇಳಲಾಯಿತು. ನಾವು  ಇತಿಹಾಸವನ್ನು ಸಮರ್ಥವಾಗಿ ಅಳಿಸಿದ್ದೇವೆ, ನಾವು  ಇತಿಹಾಸವನ್ನು ಪುನರ್ರಚಿಸಿದ್ದೇವೆ ಹಾಗೂ  ನಾವು ಬರೆದಿದ್ದನ್ನು ಪ್ರಶ್ನಿಸದಂತೆ ಮಾಡಿದ್ದೇವೆ. ಇವುಗಳನ್ನೆಲ್ಲಾ ಸಾರ್ವಜನಿಕವಾಗಿ ಚರ್ಚಿಸಬೇಡವೇ? ಆದರೆ ಯಾವುದೇ ಪಕ್ಷ ಯಾ ಮಾಧ್ಯಮಕ್ಕೆ ಆಸಕ್ತಿಯಿದ್ದಂತೆ ಕಾಣುವುದಿಲ್ಲ,'' ಎಂದಿದ್ದಾರೆ.

‘ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ನರಸಿಂಹ ರಾವ್ ಅವರಿಗೆ ಕೂಡ ರಾಜಕೀಯ ಇಚ್ಛಾ ಶಕ್ತಿಯಿರಲಿಲ್ಲ’

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಈ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದ ಪರಿಹಾರಕ್ಕೆ ತಮ್ಮ ಮುಂದಿರಿಸಲಾದ  ಪರಿಹಾರಗಳನ್ನು  ಪರಿಗಣಿಸಿರಲಿಲ್ಲ. “ಅವರು ಯುವಕರು ಹಾಗೂ ಹೊಸ ಚಿಂತನೆಗಳ್ಳುಳವರು ಎಂದು ಕಂಡು ಬಂದರೂ ನಿರಾಸೆಯುಂಟು ಮಾಡಿದ್ದರು,” ಎಂದು ಗೋಡ್ಬೋಲೆ ಹೇಳಿದರು.

ಮಸೀದಿಯ ಹೊರಾಂಗಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಬಳಸಬೇಕೆಂದು ಆಗ ಸಚಿವರಾಗಿದ್ದ ಕರಣ್ ಸಿಂಗ್ ಸಲಹೆ ನೀಡಿದ್ದರು, ಈ ಪ್ರಸ್ತಾಪವನ್ನು ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸದಸ್ಯ ಸಯ್ಯದ್ ಶಹಾಬುದ್ದೀನ್ ಕೂಡ ಮಾಡಿದ್ದರು. ಕೇಂದ್ರ ಮಸೀದಿಯನ್ನು ಸಂರಕ್ಷಿಸಲು ಅದನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದೂ ಶಹಾಬುದ್ದೀನ್ ಸಲಹೆ ನೀಡಿದ್ದರು,'' ಎಂದು ಗೋಡ್ಬೋಲೆ ಹೇಳಿದ್ದಾರೆ.

“ಮಸೀದಿ ರಕ್ಷಣೆಗೆ ವಿಸ್ತೃತ ತುರ್ತು ಯೋಜನೆಯಿದ್ದರೂ ಮುಂದೆ ಪ್ರಧಾನಿಯಾದ ಪಿ ವಿ ನರಸಿಂಹ ರಾವ್ ಕ್ರಮ ಕೈಗೊಂಡಿರಲಿಲ್ಲ,'' ಎಂದು ಅವರು ಹೇಳಿದರು.

“ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ಪ್ರಸ್ತಾಪವೂ ಇತ್ತು. ಹತ್ತು ಲಕ್ಷ ಕರಸೇವಕರನ್ನು ಒಟ್ಟುಗೂಡಿಸುವ ಯೋಚನೆಯೂ ಇತ್ತು. ಅವರು ಆಗಮಿಸುವ ಮುನ್ನ ಮಸೀದಿಯನ್ನು ರಕ್ಷಿಸಬಹುದಾಗಿತ್ತು,'' ಎಂದು ಅವರು ವಿವರಿಸಿದ್ದಾರೆ.  ``ಈ ತುರ್ತು ಯೋಜನೆಯನ್ನು ರಾತ್ರೋರಾತ್ರಿ ಸಚಿವ ಸಂಪುಟ ನಿರ್ಧಾರದ ಮೂಲಕ ಜಾರಿಗೊಳಿಸುವ ಸಲಹೆಯೂ ಇತ್ತು ಆದರೆ ರಾಜಕೀಯ ಇಚ್ಛಾ ಶಕ್ತಿಯಿರಲಿಲ್ಲ'' ಎಂದಿರುವ ಗೋಡ್ಬೋಲೆ ಸಂಸತ್ತು, ಕೇಂದ್ರ, ರಾಜ್ಯ ಸರಕಾರಗಳು ಹಾಗೂ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಹೇಗೆ ಎಡವಿದ್ದರು ಎಂಬುದನ್ನು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News