ಒಂದು ರಾಷ್ಟ್ರ-ಒಂದು ಪಡಿತರ ಚೀಟಿ ವ್ಯವಸ್ಥೆ ಜಾರಿಗೆ ಚಿಂತನೆ: ಕೇಂದ್ರ ಸಚಿವ ಸದಾನಂದಗೌಡ

Update: 2019-09-12 16:39 GMT

ಬೆಂಗಳೂರು, ಸೆ.12: ಒಂದು ದೇಶ ಒಂದು ಕಾನೂನು ಒಂದು ಸಂವಿಧಾನ ಎಂಬಂತೆ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 2ನೇ ಅವಧಿಯ ನೂರು ದಿನದಲ್ಲಿ ನೂರಾರು ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ವಿಧಿ 370ರ ಅಡಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು ತೆರವುಗೊಳಿಸುವ ಮೂಲಕ ಒಂದು ದೇಶ ಒಂದು ಕಾನೂನಿನ ಜತೆಗೆ ದೇಶದ ಜನರ ಭಾವನೆಗೆ ಬೆಲೆ ಕೊಟ್ಟಿದೆ. ಕಾಶ್ಮೀರದಲ್ಲಿ ಖಾಸಗಿ ಉದ್ಯಮಗಳ ಅಭಿವೃದ್ಧಿಯೊಂದಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಸರಕಾರವು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಳಗೆ ಸೇರಿಸಲು ಬದ್ಧವಾಗಿದೆ. ಇದಕ್ಕಾಗಿ ಹೂಡಿಕೆ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಉದ್ಯೋಗ ಮತ್ತು ಕೌಶಲಾಭಿವೃದ್ಧಿ ಸಮಿತಿಯನ್ನು ರಚನೆ ಮಾಡಲಾಗಿದೆ. ಕೃಷಿ ವಲಯದಲ್ಲಿ ರಚನಾತ್ಮಕ ಸುಧಾರಣೆ ಕೈಗೊಳ್ಳಲು ಉನ್ನತಾಧಿಕಾರಿ ಸಮಿತಿ ರಚನೆ ಮಾಡಲಾಗುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಸಿದ್ದೇವೆ. 27 ಸಾರ್ವಜನಿಕ ಬ್ಯಾಂಕ್‌ಗಳು ಈಗ 12ಕ್ಕೆ ಇಳಿದಿದೆ. ಇದರಿಂದ ದೇಶದ ಆರ್ಥಿಕತೆಗೆ ಚೈತನ್ಯ ಸಿಗುವ ಜತೆಗೆ ಸಾಲ ನೀಡಿಕೆ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯಾಚರಣೆಯನ್ನು ವ್ಯವಸ್ಥಿತಗೊಳಿಸಿ, ಲಾಭ ಹೆಚ್ಚುತ್ತದೆ ಎಂದು ತಿಳಿಸಿದರು.

ಮೂಲಸೌಲಭ್ಯಕ್ಕೆ ಆದ್ಯತೆ: ದೀರ್ಘಾವಧಿ ಸಾಲ ಒದಗಿಸುವ ಸಲುವಾಗಿ ವಸತಿಯೋಜನೆಗಳಿಗೆ ಮತ್ತು ವೌಲಸೌಕರ್ಯಕ್ಕೆ ಹೆಚ್ಚಿನ ಸಾಲ ಒದಗಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. 2020ರ ಮಾರ್ಚ್ ವರೆಗೆ ಖರೀದಿಸುವ ಎಲ್ಲ ವಾಹನಗಳ ಮೇಲೆ ಸವಕಳಿಯನ್ನು ಶೇ.30ಕ್ಕೆ ಏರಿಸಲಾಗಿದೆ. ರೈಲು ಕ್ಷೇತ್ರದ ಅಭಿವೃದ್ಧಿಗಾಗಿ 2030ರ ವೇಳೆಗೆ 50 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತದೆ. ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರು.

ಕಾರ್ಮಿಕ ಕಾನೂನುಗಳ ತಿದ್ದುಪಡಿ, ಪರಿಸರಕ್ಕೆ ಹಾನಿಯಾಗದಂತೆ ಕೈಗಾರಿಕೆಗಳಿಗೆ ಪರವಾನಿಗೆ, ಕಂಪೆನಿಗಳನ್ನು ಸ್ಥಾಪಿಸಲು ಕೇಂದ್ರೀಯ ನೋಂದಣಿ ವ್ಯವಸ್ಥೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಂಪೆನಿಗಳ ಪ್ರವೇಶಕ್ಕೆ ಪ್ರೋತ್ಸಾಹ, ವಿದೇಶಿ ಹೂಡಿಕೆಗೆ ಆದ್ಯತೆ ನೀಡುವುದು ಸೇರಿದಂತೆ ಎಲ್ಲ ರಂಗದ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸುತ್ತಿದ್ದೇವೆ ಎಂದರು.

ಅಂತರ್ ರಾಜ್ಯ ವರ್ಗಾವಣೆಯನ್ನು ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಜಾರಿಗೊಳಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ, ರೈತರ ಆದಾಯ ದುಪ್ಪಟ್ಟು ಮಾಡಲು ಪಿಎಂ ಕಿಸಾನ್ ಯೋಜನೆ ವಿಸ್ತರಣೆ, ಅನ್ನದಾತರ ಜೀವನ ಭದ್ರತೆಗಾಗಿ ಪಿಂಚಣಿ ವ್ಯವಸ್ಥೆ, ಉತ್ತಮ, ಪಾರದರ್ಶಕ ಆಡಳಿತಕ್ಕೆ ಒತ್ತು, ನೀರಿನ ಸಂರಕ್ಷಣೆಗೆ ಪಣ, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ, ರಸ್ತೆ ಸುರಕ್ಷತೆ, ಒಳನಾಡು ಜಾರಿಗೆ ಸೇರಿದಂತೆ ಹಲವುಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ.ವೈ.ಎ ನಾರಾಯಣಸ್ವಾಮಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News