ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

Update: 2019-09-12 17:23 GMT

ಬೆಂಗಳೂರು, ಸೆ. 12: ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಬೇಡ. ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಬೆಂಗಳೂರನ್ನು ಕೊಡುಗೆ ನೀಡಲು ಸಹಕರಿಸಿ ಎಂದು ಗುತ್ತಿಗೆದಾರರಿಗೆ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಕರೆ ನೀಡಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಆಯೋಜಿಸಿದ್ದ ನಿಕಟಪೂರ್ವ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿ ಉತ್ತಮ ಬುನಾದಿಯನ್ನ ಹಾಕಿದ್ದಾರೆ. ಇನ್ನು ಮುಂದೆ ನಾವು ಆ ಬುನಾದಿಯ ಮೇಲೆ ಉತ್ತಮವಾದ ನವ ಬೆಂಗಳೂರಿನ ನಿರ್ಮಾಣ ಮಾಡಬೇಕಾಗಿದೆ. ಸುಸಜ್ಜಿತ, ವ್ಯವಸ್ಥಿತ ಜೀವನಶೈಲಿಯ ನಗರ ಆಗಬೇಕು. ವಿಶ್ವದಾದ್ಯಂತ ಪಡೆದಿರುವ ಖ್ಯಾತಿ ಇನ್ನೂ ಹೆಚ್ಚಾಗಬೇಕೆನ್ನುವುದ ನಮ್ಮ ಆಶಯ ಎಂದರು.

ನಮ್ಮ ಮುಂದೆ ಇರುವ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾದ ಕೆಲಸ ಮಾಡಬೇಕಾಗಿದೆ. ಬಿಬಿಎಂಪಿ ಉತ್ತಮ ಹೆಸರು ಗಳಿಸಬೇಕಾದರೆ, ಗುತ್ತಿಗೆದಾರರ ಪಾತ್ರ ಮುಖ್ಯ. ಕೆಲಸದಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಜನರಿಂದ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಪ್ರಶಂಸೆ ದೊರೆಯುತ್ತದೆ ಎಂದರು.

ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಅದೇರೀತಿ ನಿಮ್ಮಿಂದ ಗುಣಮಟ್ಟದ ಕಾರ್ಯವನ್ನು ನಿರೀಕ್ಷಿಸುತ್ತೇನೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ನಗರ ನಿರ್ಮಾಣಕ್ಕೆ ಕೊಡುಗೆ ನೀಡಿ. ಮುಂದಿನ ಪೀಳಿಗೆಗೆ ಅತ್ಯುತ್ತಮ ಬೆಂಗಳೂರನ್ನು ಬಿಟ್ಟು ಹೋಗುವುದು ನಮ್ಮ ಗುರಿ ಎಂದರು.

ನಿಕಟಪೂರ್ವ ಆಯುಕ್ತ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ಆಯುಕ್ತರಾಗಿ 3 ವರ್ಷ 4 ತಿಂಗಳು ಕಾಲ ಕಾರ್ಯನಿರ್ವಹಿಸಿದ್ದು, ಗುತ್ತಿಗೆದಾರರು ನನ್ನ ಜೊತೆ ಯಾವುದೇ ಮನಸ್ತಾಪ ಇಲ್ಲದೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಈ ಸ್ಥಾನಕ್ಕೆ ಬರುವುದಕ್ಕಿಂತಲೂ ಮುನ್ನ ಗುತ್ತಿಗೆದಾರರು ಹಲವು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಆದರೆ ನನ್ನ ಜೊತೆ ಅಂತ ಯಾವುದೇ ಸಮಸ್ಯೆ ಉದ್ಭವ ಆಗಲಿಲ್ಲ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಹಲವು ಅಧಿಕಾರಿಗಳ ಕೊಡುಗೆ ಹಾಗೂ ಪರಿಶ್ರಮ ಇದೆ ಎಂದರು.

ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಇಲ್ಲದೆ ಹಲವು ತೊಂದರೆಗಳು ಆಗುತ್ತಿದ್ದವು. ಈ ಹಿನ್ನಲೆಯಲ್ಲಿ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ತರುವ ಉದ್ದೇಶದಿಂದಾಗಿ ರಾಜ್ಯ ಸರಕಾರಕ್ಕೆ ಹೊಸ ಕಾನೂನು ಮತ್ತು ಕೆಲವು ಮಾರ್ಪಾಡುಗಳನ್ನು ತರಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ನಾನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಆಗುವ ಹಿಂದಿನ ದಿನ ಇದಕ್ಕೆ ಸರಕಾರ ಅನುಮೋದನೆ ನೀಡಿದೆ. ಈ ನೂತನ ನಿಯಮಗಳ ಅನುಷ್ಠಾನದಿಂದಾಗಿ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಬರಲಿದ್ದು, ಇದರಿಂದಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಹಾಗೂ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು. ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ, ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News