ಶಾಕಿಬ್‌ಗೆ ಟೆಸ್ಟ್ ಕ್ರಿಕೆಟ್ ಎಂದರೆ ಇಷ್ಟವಿಲ್ಲ: ಬಿಸಿಬಿ ಮುಖ್ಯಸ್ಥ ಹಸನ್

Update: 2019-09-12 18:30 GMT

ಢಾಕಾ, ಸೆ.12: ಈ ವಾರ ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲನುಭವಿಸಿ ಮುಜುಗರ ಎದುರಿಸಿರುವ, ಟೆಸ್ಟ್ ಕ್ರಿಕೆಟನ್ನು ಇಷ್ಟಪಡದ ಹೊರತಾಗಿಯೂ ಶಾಕಿಬ್ ಅಲ್ ಹಸನ್‌ರನ್ನು ಟೆಸ್ಟ್ ತಂಡದ ನಾಯಕರನ್ನಾಗಿ ಉಳಿಸಿಕೊಳ್ಳಲಾಗುವುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಝ್ಮುಲ್ ಹಸನ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಮೇಲೆ ಆಲ್‌ರೌಂಡರ್ ಹಸನ್‌ಗೆ ಹೆಚ್ಚು ಆಸಕ್ತಿಯಿಲ್ಲ, ಹುಮ್ಮಸ್ಸು ಇಲ್ಲ. ಅವರ ಈ ವರ್ತನೆ ಸೋಮವಾರ ಚಿತ್ತಗಾಂಗ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 224 ರನ್ ಸೋಲಿಗೆ ಕಾರಣವಾಗಿದೆ. ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಒಲವಿಲ್ಲ ಎಂಬ ವಿಚಾರವನ್ನು ನಾವು ಗಮನಿಸಿದ್ದೇವೆ. ನಾವು ವಿದೇಶ ಪ್ರವಾಸ ಕೈಗೊಂಡಾಗ ಅವರು ಟೆಸ್ಟ್ ನಿಂದ ವಿಶ್ರಾಂತಿ ಪಡೆಯಲು ಬಯಸುವುದನ್ನು ನಾವು ನೋಡಿದ್ದೇವೆ ಎಂದು ನಝ್ಮುಲ್ ಹೇಳಿದ್ದಾರೆ.

‘‘ಸಹಜವಾಗಿ ಶಾಕಿಬ್‌ಗೆ ಟೆಸ್ಟ್ ಕ್ರಿಕೆಟ್ ಮೇಲೆ ಆಸಕ್ತಿ ಕಡಿಮೆ ಇದೆ. ಆದರೆ, ಅವರಿಗೆ ನಾಯಕತ್ವದ ಮೇಲೆ ಆಸಕ್ತಿ ಕಡಿಮೆಯಾಗಿಲ್ಲ ಎಂಬ ವಿಚಾರ ನಮಗೆ ತಿಳಿದಿದೆ. ಅವರು ನಾಯಕನಾದರೆ ಅವರು ಆಡುತ್ತಾರೆ. ನಾಯಕನಾಗಿರದೇ ಇದ್ದರೆ, ಪಂದ್ಯವನ್ನು ಆಡುವುದಿಲ್ಲ’’ ಎಂದು ಹಸನ್ ಹೇಳಿದರು. ಶಾಕಿಬ್ ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ 606 ರನ್ ಹಾಗೂ 11 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News