ಉತ್ತರ ಪ್ರದೇಶದಲ್ಲಿ ಸಿಎಂ, ಸಚಿವರ ಐಟಿ ಬಾಕಿ ಪಾವತಿಸುತ್ತಿರುವ ಸರಕಾರಿ ಖಜಾನೆ!

Update: 2019-09-13 04:26 GMT

ಲಕ್ನೋ, ಸೆ.13: ಉತ್ತರ ಪ್ರದೇಶದಲ್ಲಿ ನಾಲ್ಕು ದಶಕಗಳಿಂದ ಜಾರಿಯಲ್ಲಿರುವ ಕಾನೂನಿನ ಅನ್ವಯ ರಾಜ್ಯದ ಮುಖ್ಯಮಂತ್ರಿ ಹಾಗೂ ಇತರ ಸಚಿವರಿಗೆ ನೀಡುವ ವೇತನ ಹಾಗೂ ಇತರ ಸೌಲಭ್ಯಗಳ ಮೇಲಿನ ತೆರಿಗೆಯನ್ನು ಭರಿಸುವುದು ರಾಜ್ಯ ಖಜಾನೆ!

ವಿಚಿತ್ರ ಆದರೂ ಸತ್ಯ. ಇವರು ಬಡವರು; ತಮ್ಮದೇ ಅಲ್ಪ ಆದಾಯದಲ್ಲಿ ಆದಾಯ ತೆರಿಗೆ ಪಾವತಿಸಲು ಸಾಧ್ಯವಿಲ್ಲ ಎನ್ನುವುದು ಈ ಕಾನೂನಿನ ಸಮರ್ಥನೆ.

ಚುನಾವಣೆ ವೇಳೆ ಇವರೇ ಸಲ್ಲಿಸಿದ ಅಫಿಡವಿಟ್‌ಗಳ ಅನ್ವಯ ಕೋಟ್ಯಂತರ ರೂಪಾಯಿಗಳ ಆಸ್ತಿ ಹೊಂದಿರುವ ಇವರು, ಈ ಕಾನೂನಿನ ಪ್ರಕಾರ ಬಡವರು. ಆದ್ದರಿಂದ ಇವರ ಆದಾಯ ತೆರಿಗೆಯನ್ನು ಖಜಾನೆ ಪಾವತಿಸುತ್ತದೆ.

ಉತ್ತರ ಪ್ರದೇಶ ಸಚಿವರ ವೇತನ, ಭತ್ತೆ ಮತ್ತು ಇತರ ಸೌಲಭ್ಯಗಳ ಕಾಯ್ದೆ- 1981, ವಿ.ಪಿ.ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದಿದೆ. ಆ ಬಳಿಕ ರಾಜ್ಯ 19 ಮಂದಿ ಮುಖ್ಯಮಂತ್ರಿಗಳನ್ನು ಕಂಡಿದೆ. ವಿವಿಧ ಪಕ್ಷಗಳಿಗೆ ಸೇರಿದ ಸಾವಿರಕ್ಕೂ ಹೆಚ್ಚು ಮಂದಿ ಸಚಿವರಾಗಿದ್ದಾರೆ.

ಕಾಯ್ದೆಯ ಪ್ರಕಾರ, ಎಲ್ಲ ಸಚಿವರು, ರಾಜ್ಯ ಸಚಿವರಿಗೆ ವೇತನ ಹಾಗೂ ಇತರ ಸೌಲಭ್ಯಗಳ ಮೇಲೆ ವಿಧಿಸುವ ಆದಾಯ ತೆರಿಗೆಯನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಸದ್ಯ ಆದಿತ್ಯನಾಥ್ ಸರ್ಕಾರದ ಸಚಿವರ ತೆರಿಗೆಯನ್ನು ರಾಜ್ಯ ಖಜಾನೆ ಕಳೆದ ಎರಡು ವರ್ಷಗಳಿಂದ ತುಂಬುತ್ತಿದೆ. ಪ್ರಸಕ್ತ ವರ್ಷ ಸಚಿವರ ತೆರಿಗೆ ಬಿಲ್ ಸುಮಾರು 86 ಲಕ್ಷ ರೂ.

ಈ ಕಾಯ್ದೆಯ ಅನ್ವಯ ಸಿಎಂ ಹಾಗೂ ಅವರ ಸಂಪುಟದ ಸಚಿವರ ತೆರಿಗೆಗಳನ್ನು ಖಜಾನೆ ಪಾವತಿಸಿದೆ ಎಂದು ಉತ್ತರ ಪ್ರದೇಶದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವ್ ಮಿತ್ತಲ್ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News