ನಾರಾಯಣಗುರು ಗುರುಪೀಠ ಅಭಿವೃದ್ಧಿಗೆ ಸರಕಾರದಿಂದ ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-13 16:29 GMT

ಬೆಂಗಳೂರು, ಸೆ.13: ಕನಕಪುರ ರಸ್ತೆಯಲ್ಲಿರುವ ನಾರಾಯಣಗುರು ಗುರುಪೀಠದ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಆರ್ಥಿಕ ನೆರವು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕಪುರ ರಸ್ತೆಯಲ್ಲಿ ಗುರುಪೀಠದ ಸಂಬಂಧ ರಾಜ್ಯ ಸರಕಾರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಅದರ ಅಭಿವೃದ್ಧಿ ಸರಕಾರವು ಯಾವ ರೀತಿಯ ನೆರವು ನೀಡಲು ಬದ್ಧವಾಗಿದೆ. ಆ ಮೂಲಕ ನಾರಾಯಣ ಗುರುಗಳ ಆಶಯಗಳು ಸಾವಿರಾರು ವರ್ಷಗಳು ಜೀವಂತವಾಗಿಡಲು ಮುನ್ನುಡಿ ಬರೆಯೋಣ ಎಂದು ಯಡಿಯೂರಪ್ಪ ತಿಳಿಸಿದರು.

ಜಾತೀಯತೆ, ಅಸ್ಪಶ್ಯತೆ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಸಮಾಜ ಸುಧಾರಕರಾಗಿ, ದೀನ, ದಲಿತರ ಸ್ವತಂತ್ರ, ಸಮಾನತೆಗಾಗಿ ಹೊಸ ಆಯಾಮ ನೀಡಿದ ಸಂತ ನಾರಾಯಣಗುರು. ಸರಳ ವಿಚಾರಧಾರೆಗಳಿಂದಲೇ ಸಾಮಾನ್ಯ ಜನರಿಗೆ ಹತ್ತಿರವಾದವರು ಎಂದು ಅವರು ಬಣ್ಣಿಸಿದರು.

ಜಗತ್ತಿನಲ್ಲಿ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವಗಳನ್ನು ಪ್ರತಿಪಾದಿಸದವರು ನಾರಾಯಣಗುರುಗಳು. ಹರಿಜನ ಮಕ್ಕಳಿಗೆ ಸಂಸ್ಕೃತ ಕಲಿಸಿದ ಮಹಾನ್ ನಾಯಕರಾಗಿದ್ದಾರೆ. ಅವರ ತತ್ವಗಳನ್ನು ನಾವಿಂದು ಅನುಸರಿಸಬೇಕಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

ಸಮಾಜದಲ್ಲಿ ಬೇರೂರಿದ್ದ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆದು ಹಾಕಿ, ವೈಜ್ಞಾನಿಕ ಪ್ರಜ್ಞೆ ಬೆಳೆಸಿದರು. ಕೇರಳದಲ್ಲಿ ಅಲ್ಲದೆ, ಕರ್ನಾಟಕದಲ್ಲಿಯೂ ಅವರ ಸೇವೆ ಅಪಾರವಾದುದು. ರವೀಂದ್ರನಾಥ ಠಾಗೂರ್, ಮಹಾತ್ಮಗಾಂಧಿಯಂತಹವರೇ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು ಎಂದರು. ಅಂದಿನ ಜನರ ನಡುವೆ ಆತ್ಮಸ್ಥೈರ್ಯ ತುಂಬಿ, ಸಂಘರ್ಷ ರಹಿತ ಸಮಾಜ ನಿರ್ಮಾಣ ಮಾಡಲು ಕೆಲಸ ಮಾಡಿದರು. ಅಸ್ಪಶ್ಯತೆ ಅತಿಯಾಗಿದ್ದ ಸಂದರ್ಭದಲ್ಲಿ ಎಲ್ಲರಿಗೂ ದೇವಾಲಯಗಳಿಗೆ ಪ್ರವೇಶ ಸಿಗಬೇಕು ಎಂದು ದೇವಾಲಯಗಳು ನಿರ್ಮಿಸಿದ ದಾರ್ಶನಿಕರು. ನಾರಾಯಣಗುರುಗಳ ವಿಚಾರಗಳು ನಮ್ಮ ಸಂವಿಧಾನದಲ್ಲಿಯೇ ಅಡಕವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ, ಕಾರ್ಯದರ್ಶಿ ಜನ್ನು, ವಿದ್ವಾಂಸ ಗೋಪಾಲಕೃಷ್ಣ ಉಪಸ್ಥಿತರಿದ್ದರು. 

ನಾರಾಯಣ ಗುರು ದೇವರಲ್ಲ

ನಾರಾಯಣ ಗುರುಗಳ ಇತಿಹಾಸ ಹಾಗೂ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ. ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲಘಟ್ಟದಲ್ಲಿ ಜನಿಸಿದ ಅವರು, ಅದನ್ನು ನಿರ್ಮೂಲನೆ ಮಾಡಲು ಜೀವನಪೂರ್ತಿ ದುಡಿದರು. ದೇಶದಲ್ಲಿಯೇ ಕೇರಳವು ಸಾಕ್ಷರತೆಯಲ್ಲಿ ಮೊದಲನೆ ಸ್ಥಾನದಲ್ಲಿ. ಅದಕ್ಕೆ ನಾರಾಯಣ ಗುರುಗಳು ಹಾಕಿಕೊಟ್ಟಿರುವ ತಳಪಾಯವೇ ಕಾರಣವಾಗಿದೆ. ನಾರಾಯಣಗುರುಗಳು ಒಂದು ಸಮುದಾಯಕ್ಕೆ ಸೇರಿದವರಲ್ಲ, ದೇವರು ಎಂದು ಪರಿಗಣಿಸುವುದು ಸಲ್ಲ. ನಾರಾಯಣ ಗುರುಗಳ ನಿಗಮ ಮಂಡಳಿ ರಚನೆ ಸಂಬಂಧ ಪರಿಶೀಲನೆ ಮಾಡುವ ಸಾಧ್ಯತೆಯಿದೆ.

-ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News