ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲ !

Update: 2019-09-13 16:56 GMT

ಬೆಂಗಳೂರು, ಸೆ.13: ನಗರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಘೋಷಣೆ ಮಾಡಿ ಎರಡು ವಾರಗಳು ಕಳೆಯುತ್ತಿದ್ದರೂ, ಇನ್ನೂ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವಲ್ಲಿ ಪಾಲಿಕೆ ಸೋತಿದೆ.

ಸೆ.1 ರಿಂದಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಯಂತ್ರಣ ಎಂದು ಘೋಷಿಸಲಾಗಿತ್ತು. ಬಿಬಿಎಂಪಿ ಮೇಯರ್, ಆಯುಕ್ತರು ಘೋಷಣೆ ಮಾಡಿದ್ದರು. ಎನ್‌ಜಿಟಿ ಆದೇಶದ ಮೇರೆಗೆ ರಚನೆಯಾದ ಘನತ್ಯಾಜ್ಯ ನಿರ್ವಹಣೆ ಸಮಿತಿ ಕೂಡ ನಿಷೇಧವನ್ನು ಸಮರ್ಪಕವಾಗಿ ಜಾರಿ ಮಾಡುವ ಕುರಿತು ಬಿಬಿಎಂಪಿಗೆ ಸೂಚನೆ ನೀಡಿತ್ತು.

ನಗರದ ನಾನಾ ಭಾಗಗಳ ಹೊಟೇಲ್, ತರಕಾರಿ, ಹಣ್ಣು ಅಂಗಡಿಗಳಲ್ಲಿ ಕಾಗದದ ಪೊಟ್ಟಣ, ಬಟ್ಟೆಯ ಚೀಲ ಬಳಸಲಾಗುತ್ತಿದೆ. ಸಣ್ಣ ಕ್ಯಾಂಟೀನ್, ಬೀದಿ ಬದಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿ ಕಂಡು ಬರುತ್ತಿದೆ. ಆದರೂ, ಸಂಪೂರ್ಣವಾಗಿ ಇನ್ನೂ ಪ್ಲಾಸ್ಟಿಕ್ ಬಳಕೆಯಿಂದ ನಗರದ ಜನರು ಮುಕ್ತವಾಗಿಲ್ಲ.

ಬಣ್ಣ-ಬಣ್ಣದ ಚೀಲಗಳು: ಕೆ.ಆರ್.ಮಾರುಕಟ್ಟೆ ಸೇರಿದಂತೆ ನಗರದ ಹಲವಾರು ಮಾರುಕಟ್ಟೆಗಳಲ್ಲಿ, ಬೀದಿ ಬದಿ ವ್ಯಾಪಾರಿಗಳ ಬಳಿಯಲ್ಲಿ ಇನ್ನೂ ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಕಂಡು ಬರುತ್ತಿದೆ. ತರಕಾರಿ, ಹಣ್ಣು, ಬಟ್ಟೆ, ಮಳಿಗೆಗಳಲ್ಲಿ ಏನೇ ಕೊಂಡರೂ ಪ್ಲಾಸ್ಟಿಕ್ ಚೀಲ ಉಚಿತವಾಗಿ ದೊರೆಯುತ್ತದೆ. ಪ್ರತಿ ಬೀದಿ ವ್ಯಾಪಾರಿಯ ಬಳಿ ಈ ಬಗೆಯ ಚೀಲವಿದೆ. ನಗರದ ಹಲವೆಡೆ ಪ್ಲಾಸ್ಟಿಕ್ ಬಳಕೆ ಮಾಡುವವರ ಬಳಿ ‘ನಿಮಗೆ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿರುವ ವಿಷಯ ತಿಳಿದಿಲ್ಲವಾ’ ಎಂದು ಪ್ರಶ್ನಿಸಿದರೆ, ಬಹಳ ಕಡಿಮೆ ಜನರು ಬಟ್ಟೆಯ ಚೀಲ ತರುತ್ತಾರೆ. ನಾವೇ ಪ್ಲಾಸ್ಟಿಕ್ ಚೀಲ ಕೊಡದಿದ್ದರೆ ತರಕಾರಿ ಬೇಡವೆಂದು ಹೊರಟು ಹೋಗುತ್ತಾರೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಚೀಲ ನೀಡುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಾಳೆ ಎಲೆಗೆ ಬೇಡಿಕೆ: ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಈಗ ಬಾಳೆ ಎಲೆಗೆ ಭಾರೀ ಬೇಡಿಕೆ ಬಂದಿದೆ. ಅಲ್ಯೂಮಿನಿಯಂ ಹಾಳೆ, ಚೀಲಗಳಲ್ಲಿ ಪಾರ್ಸೆಲ್ ಕಟ್ಟಿಕೊಡುವುದು ಸುಲಭ. ಆದರೆ, ಈ ಹಾಳೆ ಸುಲಭವಾಗಿ ಸಿಗುವುದಿಲ್ಲ. ಬಾಳೆಎಲೆ ಕಡಿಮೆ ದರಕ್ಕೆ ದೊರೆಯುವುದು ಮಾತ್ರವಲ್ಲದೆ, ಗ್ರಾಹಕರಿಗೆ ಆಕರ್ಷಕವೂ ಆಗಿದೆ. ಕೆಲವೆಡೆ ಸಣ್ಣ ಕ್ಯಾಂಟೀನ್, ಹೊಟೇಲ್‌ಗಳಲ್ಲಿ ಪ್ಲಾಸ್ಟಿಕ್ ಚೀಲದಲ್ಲೆ ಸಾಂಬಾರು, ತಿಂಡಿ ಪಾರ್ಸೆಲ್ ಮಾಡಿಕೊಡುತ್ತಿರುವುದು ಕಂಡುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News