ಎಲ್ಲರ ಚಿತ್ತ ಬಜರಂಗ್, ವಿನೇಶ್‌ರತ್ತ

Update: 2019-09-13 18:31 GMT

ಕಝಖ್‌ಸ್ತಾನ, ಸೆ.13: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಗ್ರ ಕುಸ್ತಿಪಟುಗಳಿಗೆ ಸತ್ವ ಪರೀಕ್ಷೆ ಎದುರಾಗಿದ್ದು, ವಿಜಯದ ಜೊತೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇದೊಂದು ಸದಾವಕಾಶವಾಗಿದೆ.

ಶನಿವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಜರಂಗ್ ಪೂನಿಯಾ ಹಾಗೂ ವಿನೇಶ್ ಪೋಗಾಟ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಬಜರಂಗ್ ಈ ಋತುವಿನಲ್ಲಿ ಸ್ಪರ್ಧಿಸಿರುವ ಎಲ್ಲ ಟೂರ್ನಿಗಳಲ್ಲಿ ಜಯಶಾಲಿಯಾಗಿದ್ದಾರೆ. ವಿಶ್ವದ ನಂ.1 ಕುಸ್ತಿಪಟು ಬಜರಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಶ್ರೇಯಾಂಕದೊಂದಿಗೆ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ವಿನೇಶ್ ತನ್ನ ಹೊಸ ತೂಕ ವಿಭಾಗದೊಂದಿಗೆ ಈ ಋತುವನ್ನು ಆರಂಭಿಸಿದ್ದು, 50 ಕೆಜಿಯಿಂದ 53 ಕೆಜಿಗೆ ವರ್ಗಾವಣೆಯಾಗಿದ್ದಾರೆ. ಹೊಸ ತೂಕ ವಿಭಾಗದಲ್ಲಿ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದ ವಿನೇಶ್ ಐದು ಬಾರಿ ಫೈನಲ್‌ಗೆ ತಲುಪಿದ್ದು, ಈ ಪೈಕಿ ಮೂರು ಬಾರಿ ಚಿನ್ನ ಜಯಿಸಿದ್ದರು. ಇದೀಗ ಮೊದಲ ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಕೊನೆಯ ಕ್ಷಣದಲ್ಲಿ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ಬುಡಾಪೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯಾವುದೇ ಮಹಿಳಾ ಕುಸ್ತಿಪಟು ಈ ತನಕ ಪದಕ ಜಯಿಸಿಲ್ಲ. ಇದೀಗ ವಿನೇಶ್ ಪದಕದ ಬರ ನೀಗಿಸುವ ವಿಶ್ವಾಸ ಮೂಡಿಸಿದ್ದಾರೆ.

ಭಾರತದ ಕುಸ್ತಿ ಇತಿಹಾಸದಲ್ಲಿ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಕೇವಲ ಸುಶೀಲ್ ಕುಮಾರ್ ಮಾತ್ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಬಜರಂಗ ಭಾರತಕ್ಕೆ ಎರಡನೇ ಪದಕ ಗೆದ್ದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ. 25ರ ಹರೆಯದ ಬಜರಂಗ್ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದರು. ಆದರೆ, ಈ ತನಕ ಚಿನ್ನ ಜಯಿಸಲು ಸಾಧ್ಯವಾಗಿಲ್ಲ. ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಸುಶೀಲ್ ಕುಮಾರ್ 8 ವರ್ಷಗಳ ವಿರಾಮದ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ಗೆ ವಾಪಸಾಗುತ್ತಿದ್ದಾರೆ. ಅವರು ಈ ಬಾರಿ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸುಶೀಲ್‌ರಂತೆಯೇ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. 2017ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಜಯಿಸಿದ ಬಳಿಕ ಯಾವುದೇ ಪ್ರಶಸ್ತಿ ಗೆದ್ದುಕೊಂಡಿಲ್ಲ.

ದಿವ್ಯಾ ಕಕ್ರಾನ್ ಪದಕದ ಭರವಸೆ ಮೂಡಿಸಿದ್ದಾರೆ. ಈ ಋತುವಿನಲ್ಲಿ ಅವರು ಎರಡು ಚಿನ್ನ ಹಾಗೂ ಎರಡು ಕಂಚಿನ ಪದಕ ಜಯಿಸಿದ್ದಾರೆ. ಮತ್ತಷ್ಟು ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಪೂಜಾ ಧಾಂಡ ಕಳೇದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ನಾಲ್ಕನೇ ಕುಸ್ತಿಪಟು ಆಗಿದ್ದರು. ಇದೀಗ 59 ಕೆಜಿ ವಿಭಾಗದಲ್ಲಿ ಎರಡನೇ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಭಾರತದ ಕುಸ್ತಿ ತಂಡ

ಪುರುಷರ ಫ್ರೀಸ್ಟೈಲ್: ರವಿ ಕುಮಾರ್(57ಕೆಜಿ), ರಾಹುಲ್ ಅವಾರೆ(61ಕೆಜಿ), ಬಜರಂಗ್ ಪೂನಿಯಾ(65ಕೆಜಿ), ಕರಣ್(70ಕೆಜಿ), ಸುಶೀಲ್ ಕುಮಾರ್(74ಕೆಜಿ), ಜಿತೇಂದರ್(79ಕೆಜಿ), ದೀಪಕ್ ಪೂನಿಯಾ(86ಕೆಜಿ), ಪರ್ವೀಣ್(92ಕೆಜಿ), ವೌಸಮ್ ಖತ್ರಿ(97ಕೆಜಿ), ಸುಮಿತ್ ಮಲಿಕ್(125ಕೆಜಿ)

ಪುರುಷರ ಗ್ರೀಕೊ-ರೋಮನ್: ಮಂಜೀತ್(55ಕೆಜಿ), ಮನೀಶ್(60ಕೆಜಿ), ಸಾಗರ್(63ಕೆಜಿ), ಮನೀಶ್(67ಕೆಜಿ), ಯೋಗೇಶ್(72ಕೆಜಿ), ಗುರುಪ್ರೀತ್ ಸಿಂಗ್(77ಕೆಜಿ),ಹರ್‌ಪ್ರೀತ್ ಸಿಂಗ್(82ಕೆಜಿ), ಸುನೀಲ್ ಕುಮಾರ್(87ಕೆಜಿ), ರವಿ(97ಕೆಜಿ) ಹಾಗೂ ನವೀನ್(130ಕೆಜಿ)

ಮಹಿಳೆಯರ ಫ್ರೀಸ್ಟೈಲ್: ಸೀಮಾ(50ಕೆಜಿ), ವಿನೇಶ್ ಪೋಗಾಟ್(53ಕೆಜಿ), ಲಲಿತಾ(55ಕೆಜಿ), ಸರಿತಾ(57ಕೆಜಿ), ಪೂಜಾ ಧಾಂಡ(59ಕೆಜಿ), ಸಾಕ್ಷಿ ಮಲಿಕ್(62ಕೆಜಿ), ನವಜೋತ್ ಕೌರ್(65ಕೆಜಿ), ದಿವ್ಯಾ ಕಕ್ರಾನ್(68ಕೆಜಿ), ಕೋಮಲ್ ಭಾಗ್ವಾನ್(72ಕೆಜಿ) ಹಾಗೂ ಕಿರಣ್(76ಕೆಜಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News