ಕೃಷಿ ಬೆಳೆ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜಕಾರಣಿ ಬೇಡ: ಕೋಡಿಹಳ್ಳಿ ಚಂದ್ರಶೇಖರ್

Update: 2019-09-14 16:48 GMT

ಬೆಂಗಳೂರು, ಸೆ.14: ಕರ್ನಾಟಕ ಕೃಷಿ ಬೆಳೆ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೃಷಿ ತಜ್ಞರ ಬದಲಾಗಿ ರಾಜಕಾರಣಿ ಒಬ್ಬರನ್ನು ನಾಮನಿರ್ದೇಶನ ಮಾಡಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧಕ್ಷ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರೋಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಥಮ ಪ್ರಯೋಗವಾಗಿ ಕರ್ನಾಟಕ ಸರಕಾರ ಕೃಷಿ ಬೆಳೆ ಆಯೋಗವನ್ನು ರಚಿಸಿ, ಅಧ್ಯಕ್ಷರನ್ನಾಗಿ ಕೃಷಿ ತಜ್ಞ ಹಾಗೂ ಅರ್ಥಶಾಸ್ತ್ರ ಪರಿಣಿತ ಡಾ.ಪ್ರಕಾಶ್ ಕಮ್ಮರೆಡ್ಡಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನಾಮನಿರ್ದೇಶನ ಮಾಡಿತ್ತು ಎಂದು ತಿಳಿಸಿದರು.

ಆದರೆ, ಕಳೆದ 5 ವರ್ಷಗಳಲ್ಲಿ ರೈತ ಪರವಾದ ಹಲವಾರು ಉಪಯುಕ್ತ ವರದಿಗಳನ್ನು ಸಲ್ಲಿಸಿ, ಪ್ರಮುಖ ಸಲಹೆ, ಶಿಫಾರಸ್ಸುಗಳನ್ನು ಸರಕಾರಕ್ಕೆ ಮಾಡಿದ್ದರು. ಅವರ ಸೇವಾವಧಿ 2020ರ ಜೂನ್ ವರೆಗೆ ಇದ್ದರೂ ಕೂಡ ಬಿಜೆಪಿ ಸರಕಾರ ದಿಢೀರನೆ ಅವರನ್ನು ವಜಾಗೊಳಿಸಿ ಆ ಸ್ಥಾನದಲ್ಲಿ ರಾಜಕಾರಣಿ ಹನುಮೇಗೌಡರನ್ನು ನೇಮಿಸಿದೆ ಎಂದು ಆರೋಪಿಸಿದರು.

ಇದರಿಂದಾಗಿ ಸ್ವತಂತ್ರವಾಗಿ ಸಂಶೋಧನೆ ನಡೆಸಿ ತಾಂತ್ರಿಕ ವಿಚಾರಗಳ ಆಧಾರದ ಮೇಲೆ ಸಲಹೆ, ಸೂಚನೆ, ಶಿಫಾರಸ್ಸು ಮಾಡುವ ಆಯೋಗದ ಸ್ವತಂತ್ರ ಅಧಿಕಾರವನ್ನು ಮೊಟಕುಗೊಳಿಸಿದಂತೆ ಆಗಿದೆ. ಇದೊಂದು ರಾಜಕೀಯ ಪ್ರೇರಿತವಾದ ತೀರ್ಮಾನವಾಗಿದ್ದು, ಪಕ್ಷಗಳು ಬದಲಾದೊಡನೆ ತಮ್ಮ ವಿಚಾರಧಾರೆ, ತಮ್ಮ ಸಿದ್ಧಾಂತಗಳಿಗೆ ಹೊಂದಿಕೆಯಾಗುವ ವ್ಯಕ್ತಿಗಳನ್ನೇ ಆಯ್ಕೆ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಈ ರೀತಿಯ ರಾಜಕೀಯ ತಟಸ್ಥ ಸಂಸ್ಥೆಗಳಿಗೆ ರಾಜಕೀಯ ಮುಖಂಡರನ್ನು ಮುಖ್ಯಸ್ಥರನ್ನಾಗಿ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣವಲ್ಲ. ಆದ್ದರಿಂದ ಈ ಆಯೋಗಕ್ಕೆ ಕೃಷಿ ತಜ್ಞರನ್ನೇ ನೇಮಕ ಮಾಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪ್ರಗತಿಪರ ಚಿಂತಕಿ ಲಲಿತಾ ನಾಯಕ್, ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಹಾಗೂ ಕೆಪಿಆರ್‌ಎಸ್ ಬಯ್ಯಿರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News