ಮಾತೃ ಭಾಷೆಯಿಂದ ಮಾತ್ರ ಸೃಜನಶೀಲತೆ ಸಾಧ್ಯ: ಡಾ.ಚಂದ್ರಶೇಖರ ಕಂಬಾರ

Update: 2019-09-14 16:49 GMT

ಬೆಂಗಳೂರು, ಸೆ.14: ಮಾತೃ ಭಾಷೆಯಿಂದ ಮಾತ್ರ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು ಸಾಧ್ಯ. ಹೀಗಾಗಿ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಆಗಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

ಶನಿವಾರ ಶೇಷಾದ್ರಿಪುರಂ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಯೋಜಿಸಿದ್ದ ಕನ್ನಡ ನಾಟಕಗಳ ಮರುಚಿಂತನೆ, ಸಾಹಿತ್ಯ ಮತ್ತು ರಂಗಚಟುವಟಿಕೆ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಕ್ಕಳ ಸೃಜನ ಶಕ್ತಿಯ ಕೊಲೆಯಾಗಬಾರದು. ಇದನ್ನು ಜೋಪಾನ ಮಾಡುವುದಕ್ಕಾಗಿಯೇ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಆಗಬೇಕೆಂದು ತಿಳಿಸಿದರು.

ಶಿಕ್ಷಣದಲ್ಲಾಗಲಿ, ಸಾಹಿತ್ಯದಲ್ಲಾಗಲಿ, ನಾಟಕದಲ್ಲಾಗಲಿ, ಮಾತೃ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ಆಂಗ್ಲ ಭಾಷೆಯ ದಬ್ಬಾಳಿಕೆಯಿಂದಾಗಿ ನಮ್ಮಲ್ಲಿರುವ ಜ್ಞಾನ, ಪ್ರತಿಭೆಗಳನ್ನು ಕೀಳು ಎಂಬ ಭಾವನೆ ಹುಟ್ಟಿಸಿತ್ತು. ಇಂತಹ ಭಾವನೆಯಿಂದ ನಾವು ಹೊರಬರಬೇಕಾಗಿದೆ ಎಂದು ಅವರು ಹೇಳಿದರು.

ಭಾರತದ ಶೇಷ್ಠ ಸಾಹಿತ್ಯವನ್ನು ಜಗತ್ತಿಗೆ ಕೊಡುಗೆ ನೀಡಿದ್ದೇವೆ. ಇದು ಸದಾ ಮುಂದುವರೆಯಬೇಕಾದರೆ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇಂದಿನ ಯುವ ತಲೆಮಾರಿಗೆ ಮಾತೃ ಭಾಷೆಯ ಮಹತ್ವವನ್ನು ತಿಳಿಸಬೇಕಾಗಿದೆ. ಇದಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಗಾಂಧಿಭವನದ ಅಧ್ಯಕ್ಷ ವೂಡೆ ಪಿ. ಕೃಷ್ಣ ಮಾತನಾಡಿ, ನಾಟಕ ಪ್ರಕಾರವು ಅತ್ಯುತ್ತಮ ಕಲಿಕಾ ಮಾಧ್ಯಮವಾಗಿದೆ. ಇದು ಸದಾ ಚಲನಶೀಲವಾಗಿರಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ.ಅನುರಾಧಾ ರಾಯ್, ಎಂ.ಎಸ್.ನಟರಾಜ್, ಪ್ರೊ.ಕೃಷ್ಣಸ್ವಾಮಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News