ಸೆ.18ಕ್ಕೆ ಬಿಬಿಎಂಪಿಯ ಆಡಳಿತ ವರದಿ ಮಂಡನೆ

Update: 2019-09-14 16:52 GMT

ಬೆಂಗಳೂರು, ಸೆ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಭದ್ರೇಗೌಡ ಸೆ.18ರಂದು ಪಾಲಿಕೆ ಆಡಳಿತ ವರದಿ ಮಂಡನೆ ಮಾಡಲು ನಿರ್ಧರಿಸಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 33 ಇಲಾಖೆಗಳ ವಾರ್ಷಿಕ ಆಡಳಿತ ವರದಿಯನ್ನು ಉಪಮೇಯರ್ ಮಂಡಿಸಲಿದ್ದಾರೆ. ವರದಿಯಲ್ಲಿ ಪಾಲಿಕೆಯ ಸಿಬ್ಬಂದಿ ಕಾರ್ಯವೈಖರಿ, ಇಲಾಖಾವಾರು ಸಿಬ್ಬಂದಿ ವಿವರ, ಸಂಬಳ, ಆಡಳಿತಾತ್ಮಕ ವೆಚ್ಚ, ಹೊಸ ಯೋಜನೆಗಳ ವಿವರ ಮತ್ತು ಹೆಚ್ಚುವರಿ ಖರ್ಚಿನ ಮಾಹಿತಿ ಮಂಡಿಸಲಾಗುತ್ತದೆ. ಬಳಿಕ ಈ ವರದಿ ಆಧರಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಆಡಳಿತ ವರದಿ ಮಂಡನೆ ತಪ್ಪಿಸಲು ಕೆಲವರು ಭಾರೀ ಪ್ರಯತ್ನ ನಡೆಸಿದ್ದರು. ಆದರೆ, ಭದ್ರೇಗೌಡ ಅವರು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ ಪಲ್ಲವಿ ಅವರಿಂದ ಕಾನೂನು ಅಭಿಪ್ರಾಯ ಪಡೆದಿದ್ದಾರೆ. ಮೇಯರ್ ಅವಧಿ ಪೂರ್ಣಗೊಳ್ಳುವ ಕೊನೆ ತಿಂಗಳಿನಲ್ಲಿ ಆಡಳಿತ ವರದಿ ಮಂಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪಾಲಿಕೆ ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಅಭಿಪ್ರಾಯ ನೀಡಿದ್ದಾರೆ.

ಬಿಬಿಎಂಪಿಯ ಇತಿಹಾಸದಲ್ಲಿ ಈವರೆಗೆ ಕೇವಲ ಒಂದು ಬಾರಿ ಮಾತ್ರ ಆಡಳಿತ ವರದಿ ಮಂಡಿಸಲಾಗಿದೆ. 2015-16ನೇ ಸಾಲಿನಲ್ಲಿ ಅಂದಿನ ಉಪಮೇಯರ್ ಹೇಮಲತಾ ಗೋಪಾಲಯ್ಯ ಬಿಬಿಎಂಪಿಯ ಮೊದಲ ಆಡಳಿತ ವರದಿಯನ್ನು ಸಲ್ಲಿಸಿದ್ದಾರೆ. ಇದನ್ನು ಬಿಟ್ಟರೆ ಈವರೆಗೆ ಯಾರೂ ಕೂಡ ಆಡಳಿತ ವರದಿ ಸಲ್ಲಿಸಿಲ್ಲ.

ಪ್ರತಿ ವರ್ಷ ವಿಶೇಷ ಕೌನ್ಸಿಲ್ ಸಭೆ ಮೂಲಕ ವಾರ್ಷಿಕ ಆಡಳಿತ ವರದಿ ಮಂಡಿಸುವುದು ಉಪಮೇಯರ್ ಕರ್ತವ್ಯವಾಗಿದ್ದು, ಈ ಹಿಂದಿನ ಎಂಟು ಉಪ ಮೇಯರ್‌ಗಳು ವರದಿ ಮಂಡಿಸಿಲ್ಲ. ವಿಶೇಷ ಕೌನ್ಸಿಲ್ ಸಭೆಗೆ ದಿನಾಂಕ ನಿಗದಿಪಡಿಸುವಂತೆ ಕೋರಿ ಉಪಮೇಯರ್ ಭದ್ರೇಗೌಡ, ಮೇಯರ್‌ಗೆ ಪತ್ರ ಬರೆದಿದ್ದು, ಸೆ.18ರಂದು ಸಭೆ ನಡೆಸಲು ಮೇಯರ್ ಸೂಚಿಸಿದ್ದಾರೆ.

ಪಾಲಿಕೆಯ ಆಡಳಿತ ವರದಿ ಮಂಡಿಸುವುದು ಉಪಮೇಯರ್ ಜವಾಬ್ದಾರಿ. ನಂತರ ವರದಿ ಆಧರಿಸಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬೇಕು. ಯಾರೇ ವಿರೋಧ ವ್ಯಕ್ತಪಡಿಸಿದರೂ ಸೆ.18ರಂದು ಆಡಳಿತ ವರದಿ ಪ್ರಸ್ತುತಪಡಿಸುತ್ತೇನೆ.

-ಭದ್ರೇಗೌಡ, ಬಿಬಿಎಂಪಿ ಉಪಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News