ಬಿಷಪ್ ಅಲ್ಘೋನ್ಸ ಮಥಿಯಾಸರೂ... ಆ ಯುವ ಪ್ರೇಮಿಗಳೂ...!

Update: 2019-09-14 17:56 GMT

ಖ್ಯಾತ ಫ್ರೆಂಚ್ ಕಾದಂಬರಿಕಾರ ವಿಕ್ಟರ್ ಹ್ಯೂಗೋನ ಪ್ರಸಿದ್ಧ ‘ಲ ಮಿಸೆರಬಲ್ಸ್’ ಕೃತಿಯಿಂದ ಪ್ರೇರಿತಗೊಂಡು ಸ್ಕಾಟ್ಲೆಂಡಿನ ನಾಟಕಕಾರ ನಾರ್ಮನ್ ಮ್ಯಾಕಿನೆಲ್ ‘ದಿ ಬಿಷಪ್ಸ್ ಕ್ಯಾಂಡಲ್‌ಸ್ಟಿಕ್ಸ್’ ಎಂಬ ನಾಟಕವನ್ನು ರಚಿಸಿದ್ದಾನೆ. ಈ ನಾಟಕದಲ್ಲಿನ ಬಿಷಪ್ ಕೊಡುಗೈ ದಾನಿ ಮತ್ತು ಜಗದ ಎಲ್ಲಾ ಜೀವಿಗಳಲ್ಲಿಯೂ ಒಳ್ಳೆಯತನವನ್ನು ಕಾಣುವ ಮಾನವತಾವಾದಿ. ಈತನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಅನೇಕರು ಆತನಲ್ಲಿದ್ದ ಎಲ್ಲವನ್ನೂ ವಿವಿಧ ಕಾರಣಗಳನ್ನು ಹೇಳಿ ಪಡೆದುಕೊಳ್ಳುತ್ತಿದ್ದರು. ಇವರಿಂದ ಅದೆಷ್ಟೋ ಬಾರಿ ಬಿಷಪ್ ಮೋಸ ಹೋಗಿರುತ್ತಾರೆ. ಈ ಕುರಿತು ತನ್ನ ತಂಗಿ ಹೇಳಿದಾಗಲೂ ಸಹ ಬಿಷಪ್ ಕೋಪಗೊಳ್ಳುವುದಿಲ್ಲ. ಕೇಳಿಕೊಂಡು ಬಂದ ಯಾರನ್ನೂ ಆತ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಮೋಸ ಮಾಡಿದವರು ದೇವರಿಗೆ ಮತ್ತು ಅವರ ಅಂತರಂಗಕ್ಕೆ ಮೋಸ ಮಾಡುತ್ತಾರೆಯೇ ಹೊರತು ನನಗಲ್ಲ ಎಂಬ ಭಾವನೆಯನ್ನು ತಾಳಿ, ಬಂದವರಿಗೆಲ್ಲಾ ತನ್ನಲಿದ್ದುದ್ದೆಲ್ಲವನ್ನು ಕೊಡುತ್ತಿದ್ದ ಬಿಷಪ್ ಬಳಿ ಈಗ ಉಳಿದಿದ್ದು ಮಾತ್ರ ಮರಣಶಯ್ಯೆಯಲ್ಲಿದ್ದಾಗ ಆತನ ತಾಯಿ ನೀಡಿದ್ದ ಮೇಣದಬತ್ತಿಗಳನ್ನು ಹಚ್ಚುವ ಕಂಬ.

 ಅದೊಂದು ದಿನ ರಾತ್ರಿ ಬಿಷಪ್ ಎಂದಿನಂತೆ ಪ್ರಾರ್ಥನೆ ಮಾಡಿ ಮಲಗುವ ಕೋಣೆಗೆ ಹೋಗುವಾಗ ಜೈಲಿನಿಂದ ತಪ್ಪಿಸಿಕೊಂಡ ಕಳ್ಳನೊಬ್ಬ ಕಿಟಕಿಯಿಂದ ಧುಮುಕಿ ಬಿಷಪ್ ಬಂಗಲೆ ಪ್ರವೇಶಿಸುತ್ತಾನೆ. ಕೈಯಲ್ಲಿ ಹರಿತವಾದ ಕತ್ತಿಯನ್ನು ಹಿಡಿದುಕೊಂಡಿದ್ದ ಅವನನ್ನು ನೋಡಿದಾಗಲೂ ಎದೆಗುಂದದೆ ಬಿಷಪ್ ಅವನನ್ನೇ ದಿಟ್ಟಸಿ ನೋಡುತ್ತಾರೆ. ಆತನ ಕುರಿತು ವಿಚಾರಿಸಲಾಗಿ ಆತ ಕಾಯಿಲೆಯಿಂದ ನರಳುತ್ತಿರುವ ಹೆಂಡತಿಗಾಗಿ ಕಳ್ಳತನ ಮಾಡಿದನೆಂದೂ ಹಾಗೂ ಆ ಅಪರಾಧಕ್ಕೆ ಹತ್ತು ವರ್ಷಗಳ ಶಿಕ್ಷೆ ನೀಡಿದರಿಂದ ಈಗ ತಪ್ಪಿಸಿಕೊಂಡು ಬಂದೆನೆಂದೂ ಹೇಳುತ್ತಾನೆ. ಈತನ ಕಥೆ ಕೇಳಿ ಮರುಕಗೊಂಡ ಬಿಷಪ್ ತನ್ನಲ್ಲಿದ್ದ ಕೊನೆಯ ವಸ್ತು ಮೇಣದ ಕಂಬವನ್ನು ಆತನಿಗೆ ನೀಡುತ್ತಾರೆ. ಇದಾದ ಕೆಲ ಸಮಯದ ನಂತರ ಪೊಲೀಸರು ಆತನನ್ನು ಹಿಡಿದು, ಆ ಮೇಣದಬತ್ತಿಯ ಕಂಬದೊಂದಿಗೆ ಬಿಷಪ್ಪರ ಬಳಿ ಬಂದಾಗ ಬಿಷಪ್ ಅದನ್ನು ತಾನೇ ನೀಡಿದ್ದಾಗಿಯೂ ಹಾಗು ಆತ ತನ್ನ ಸ್ನೇಹಿತನೆಂದು ಹೇಳುತ್ತಾರೆ. ಇದನ್ನು ಕೇಳಿ ಪೊಲೀಸರು ಅಲ್ಲಿಂದ ಹೊರಡುತ್ತಾರೆ. ಆಗ ಆ ಕಳ್ಳ ಬಿಷಪ್ಪರ ಮಾನವೀಯತೆ ಮತ್ತು ಕರುಣೆಯನ್ನು ಕಂಡು ಕಣ್ಣೀರಿಟ್ಟು ಮನತಿರುಗುತ್ತಾನೆ.

 ನಮ್ಮ ನೆಲದಲ್ಲೇ ನಡೆದ ಇಂತಹದ್ದೇ ಒಂದು ನೈಜ ಘಟನೆ ಬಹುಶಃ ಯಾರಿಗೂ ತಿಳಿದಿಲ್ಲವೆನಿಸುತ್ತದೆ. ಇದು ಮೈಸೂರಿನ ಖ್ಯಾತ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್ ಚಾಂಡಿಯವರ ಜೀವನದಲ್ಲಿ ನಡೆದ ನೈಜ ಘಟನೆ. ಆಗಷ್ಟೇ ಕಾಲೇಜಿನಲ್ಲಿ ಓದುತ್ತಿದ್ದ ಜೇಕಬ್‌ಗೆ ತನ್ನ ಸಹಪಾಠಿ ಆಶಾ ಎಂಬ ಹುಡುಗಿಯ ಮೇಲೆ ಪ್ರೀತಿ ಮೂಡುತ್ತದೆ. ಇವರಿಬ್ಬರ ಪ್ರೇಮಕತೆ ಅವರ ತಂದೆ ತಾಯಿಗಳಿಗೆ ತಿಳಿದು ವಿರೋಧ ವ್ಯಕ್ತವಾದಾಗ ಜೇಕಬ್ ಚಾಂಡಿ ತಾನು ಮದುವೆಯಾಗಲಿರುವ ಹುಡುಗಿ ಆಶಾಳನ್ನು ಕೇರಳದ ಒಂದು ಕಾನ್ವೆಂಟಿನಲ್ಲಿ ಕೆಲ ದಿನಗಳ ಮಟ್ಟಿಗೆ, ಅಂದರೆ ತನ್ನ ವಿದ್ಯಾಭ್ಯಾಸ ಮುಗಿದು ಒಂದು ನೌಕರಿ ಸಿಗುವವರೆಗೆ ಉಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ, ಈ ‘‘ಕೆಲವು ದಿನಗಳು’’ ದಿನೇ ದಿನೇ ಹೆಚ್ಚುತ್ತಾ ಹೋಗುವುದನ್ನು ಅರಿತ ಜೇಕಬ್‌ನ ಸ್ನೇಹಿತ ಅಶೋಕ್ ಲಾಜರ್ ಸಂತ ಫಿಲೋಮಿನ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದ ಜೇಕಬ್‌ನ ತಂದೆ ಪ್ರೊಫೆಸರ್ ವರ್ಗೀಸ್ ಚಾಂಡಿಯವರಿಗೆ ಇವರಿಬ್ಬರ ಪ್ರೇಮವನ್ನು ತಿಳಿಸಿ, ಕೇರಳದಲ್ಲಿ ಆ ಹುಡುಗಿ ಒಬ್ಬಳೇ ಯಾತನೆ ಅನುಭವಿಸುತ್ತಿರುವುದನ್ನು ವಿವರವಾಗಿ ತಿಳಿಸುತ್ತಾರೆ. ಈ ಪತ್ರದ ಒಂದು ಪ್ರತಿಯನ್ನು ಜೇಕಬ್ ಚಾಂಡಿಗೂ ಕಳುಹಿಸುತ್ತಾರೆ.

 ತನ್ನ ಸ್ನೇಹಿತ ಕಳುಹಿಸಿದ ಈ ಪತ್ರವನ್ನೇ ಆಧಾರವನ್ನಾಗಿಟ್ಟುಕೊಂಡು ಜೇಕಬ್ ಚಾಂಡಿ ಅಂದಿನ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಬಿಷಪ್ ಅತಿ. ವಂ. ಡಾ. ಮಥಿಯಾಸ್ ಫರ್ನಾಂಡಿಸರ ಬಳಿಗೆ ಸಹಾಯಕ್ಕಾಗಿ ಧಾವಿಸುತ್ತಾರೆ. ಆತನ ಅದೃಷ್ಟವೆಂಬಂತೆ ಬಿಷಪ್ ಮಥಿಯಾಸ್ ಫರ್ನಾಂಡಿಸರು ಅಂದು ರಾತ್ರಿ ತಮ್ಮ ನಿವಾಸದಲ್ಲಿ ಇರುತ್ತಾರೆ. ತನ್ನಲಿದ್ದ ಪತ್ರವನ್ನು ತೋರಿಸಿ, ಈ ಮದುವೆಗೆ ತನ್ನ ತಂದೆಯನ್ನು ಒಪ್ಪಿಸಿಬೇಕೆಂದು ಬಿಷಪ್ ಮಥಿಯಾಸ್ ಫರ್ನಾಂಡಿಸರನ್ನು ಕೇಳಿಕೊಂಡಾಗ ಅವರು ಒಪ್ಪಿ ಆತನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆತನ ಮನೆಗೆ ತೆರಳುತ್ತಾರೆ. ಅಲ್ಲಿ ಹುಡುಗನ ತಂದೆ ವರ್ಗೀಸ್ ಚಾಂಡಿಯವರನ್ನು ಮಾತನಾಡಿಸಿದ ಬಿಷಪ್ ಮಥಿಯಾಸ್ ಫರ್ನಾಂಡಿಸರು ಅವರ ಮದುವೆಗೆ ಒಪ್ಪಿಕೊಳ್ಳಿ ಎಂದು ಮನವಿ ಮಾಡುತ್ತಾರೆ. ಅರ್ಥಾಥ್ ಬಿಷಪ್ಪರೇ ತಮ್ಮ ಮನೆಗೆ ಬಂದದನ್ನು ಕಂಡು ಅವಕ್ಕಾದ ವರ್ಗೀಸ್ ಚಾಂಡಿಯವರು ನೌಕರಿ ಇಲ್ಲದ ತಮ್ಮ ಮಗನಿಗೆ ಮದುವೆ ಮಾಡಿದರೆ ಆಗುವ ಕಷ್ಟಗಳ ಬಗ್ಗೆ ಬಿಷಪ್ಪರಿಗೆ ವಿವರಿಸುತ್ತಾರೆ. ಇದನ್ನು ಕೇಳಿದ ಬಿಷಪ್ ‘‘ನೀವು ಮದುವೆ ಮಾಡಿ. ಉಳಿದೆಲ್ಲವನ್ನು ದಯಾಮಯ ದೇವರು ನೋಡಿಕೊಳ್ಳುತ್ತಾರೆ’’ ಎಂದು ಹೇಳಿ ಅಲ್ಲಿಂದ ಜೇಕಬ್ ಚಾಂಡಿಯ ಜೊತೆ ತಮ್ಮ ಬಂಗಲೆಗೆ ಹಿಂದಿರುಗುತ್ತಾರೆ.

ತಮ್ಮ ಬಂಗಲೆಗೆ ಬಂದ ನಂತರ ಬಿಷಪ್ ಮಥಿಯಾಸರು ತಮ್ಮ ಪರ್ಸ್ ಮತ್ತು ಕಿಸೆಯೆಲ್ಲಾ ಹುಡುಕಾಡಿದರೂ ಆ ಹುಡುಗನ ಸಹಾಯಕ್ಕಾಗುವಷ್ಟೂ ಹಣ ಅವರ ಬಳಿ ಇರುವುದಿಲ್ಲ. ಆಗ ಬಿಷಪ್ ಮಥಿಯಾಸ್ ಫರ್ನಾಂಡಿಸ್ ತಮ್ಮ ಕೊರಳಲ್ಲಿದ್ದ, ಬಿಷಪ್ಪರು ಸಾಂಕೇತಿಕವಾಗಿ ಧರಿಸಿಕೊಳ್ಳುವ ಚಿನ್ನದ ಶಿಲುಬೆ ಯನ್ನು ಆ ಹುಡುಗನಿಗೆ ನೀಡಿ, ‘‘ಇದನ್ನು ಮಾರಿ ಬಂದ ಹಣವನ್ನು ನಿನ್ನ ಮದುವೆಗೆ ಬಳಸಿಕೊ’’ ಎಂದು ಹೇಳುತ್ತಾರೆ. ಬಿಷಪ್ಪರ ಈ ಮಾತುಗಳನ್ನು ಕೇಳಿದ ಹುಡುಗ ಒಂದು ಕ್ಷಣ ಅವಕ್ಕಾಗಿ ಮಾತೇ ಹೊರಡದಂತೆ ನಿಂತು ಬಿಡುತ್ತಾನೆ. ‘‘ನೋ ಮೈ ಲಾರ್ಡ್, ದಯವಿಟ್ಟು ಹೀಗೆ ಮಾಡಬೇಡಿ. ನೀವು ಧರಿಸಿಕೊಳ್ಳುವ ಪವಿತ್ರವಾದ ಈ ಶಿಲುಬೆಯನ್ನು ನಾನು ನನ್ನ ಅವಶ್ಯಕತೆಗಳಿಗೋಸ್ಕರ ಮಾರುವುದಿಲ್ಲ’’ ಎಂದು ಹೇಳಿ ಹೊರಗೆ ನಿಲ್ಲಿಸಿದ್ದ ತನ್ನ ಸೈಕಲ್ಲನ್ನು ಎತ್ತಿಕೊಳ್ಳಲು ಓಡುತ್ತಾನೆ. ಈತನ ಹಿಂದೆಯೇ ಬಿಷಪ್ ಮಥಿಯಾಸ್ ಫರ್ನಾಂಡಿಸ್ ಸಹ ಓಡಿಬರುವಷ್ಟರಲ್ಲಿ ಆ ಹುಡುಗ ಒಂದೇ ಉಸಿರಿನಲ್ಲಿ ಮನೆಗೆ ತೆರಳಿ ನಡೆದುದೆಲ್ಲವನ್ನು ತನ್ನ ತಂದೆ ತಾಯಿಗೆ ಹೇಳುತ್ತಾನೆ.

 ನಡೆದುದೆಲ್ಲವನ್ನು ಕೇಳಿಸಿಕೊಂಡ ನಂತರ ಜೇಕಬ್ ಚಾಂಡಿಯ ಅಮ್ಮ ತನ್ನ ಮಗ ಬಿಷಪ್ಪರ ಶಿಲುಬೆಯನ್ನು ಮುಟ್ಟಲಿಲ್ಲ ಎಂದು ಸಂತೋಷ ಪಡುತ್ತಿರುವಾಗ, ಆತನ ತಂದೆ ವರ್ಗೀಸ್ ಚಾಂಡಿ, ‘‘ನೀನು ಆ ರೀತಿ ಅವರಿಂದ ಅಗೌರವಯುತವಾಗಿ ಓಡಿ ಬಂದದ್ದು ತಪ್ಪು. ಅವರು ಪ್ರೀತಿಯಿಂದ ಕೊಟ್ಟದ್ದನ್ನು ತೆಗೆದುಕೊಳ್ಳಬೇಕಿತ್ತು’’ ಎಂದು ಹೇಳಿ, ‘‘ಬಿಷಪ್ಪರಲ್ಲಿ ಕ್ಷಮೆಯಾಚಿಸಿ ಬಾ’’ ಎಂದು ತನ್ನ ಮಗನಿಗೆ ಹೇಳುತ್ತಾರೆ. ಆ ನಡುರಾತ್ರಿಯಲ್ಲೇ ಜೇಕಬ್ ತನ್ನ ಸೈಕಲ್ಲಿನಲ್ಲಿ ಬಿಷಪ್ಪರ ನಿವಾಸಕ್ಕೆ ಬಂದು ಬಿಷಪ್ ಮಥಿಯಾಸ್ ಫರ್ನಾಂಡಿಸರಲ್ಲಿ ಕ್ಷಮೆ ಯಾಚಿಸಿದಾಗ, ಕೋಪದಿಂದಲೇ ಬಿಷಪ್ ಮಥಿಯಾಸ್ ಫರ್ನಾಂಡಿಸರು ಅವರ ಚಿನ್ನದ ಶಿಲುಬೆ ಮತ್ತು ಆಶೀರ್ವಾದವನ್ನು ನೀಡುತ್ತಾರೆ. ಈ ಮೂಲಕ ಜೇಕಬ್ ಚಾಂಡಿಗೆ ‘‘ಶಿಲುಬೆಯ ಬಾರ’’ ವರ್ಗಾವಣೆಯಾಗುತ್ತದೆ. ಕ್ರಿಸ್ತನನ್ನೂ ಹಾಗೂ ಆತನ ಶಿಲುಬೆಯನ್ನು ಹೊತ್ತುಕೊಳ್ಳುವ ಸಂದಿಗ್ಧಕ್ಕೆ ಆ ಹುಡುಗ ಬೀಳುತ್ತಾನೆ.

 ಮರುದಿನವೇ ಕೊಚ್ಚಿನ್‌ಗೆ ಬಸ್ಸು ಹತ್ತಿ ಗೆಳೆಯ ಅಶೋಕನ ಮನೆಗೆ ಜೇಕಬ್ ಧಾವಿಸುತ್ತಾನೆ. ಅಲ್ಲಿಯೂ ಸಹ ಆತನಿಗೆ ಸಮಸ್ಯೆಗಳು ಎದುರಾಗುತ್ತವೆ. ತನ್ನ ಮದುವೆಗಾಗಿ ಬಿಷಪ್ಪರು ನೀಡಿದ ಆ ಚಿನ್ನದ ಶಿಲುಬೆಯನ್ನು ಮಾರಲು ಹೋದಾಗ, ಯಾರೂ ಅದನ್ನು ಕೊಳ್ಳಲು ತಯಾರಿರಲಿಲ್ಲ. ಅದನ್ನು ತನಗೆ ಖುದ್ದು ಬಿಷಪ್ಪರೇ ನೀಡಿದರು ಎಂದು ಹೇಳಿದರೂ ಯಾರು ನಂಬುತ್ತಿಲ್ಲ. ಅಲ್ಲಿದ್ದವರೆಲ್ಲಾ ಆ ಶಿಲುಬೆಯನ್ನು ಆತ ಕದ್ದಿದ್ದಾನೆ ಎಂದೇ ಭಾವಿಸುತ್ತಿದ್ದರು. ಮುಂದೇನು ಮಾಡುವುದು ಎಂದು ತೋಚದಿದ್ದಾಗ, ಗೆಳೆಯ ಅಶೋಕ್ ಲಾಜರನ ತಾಯಿ ಶ್ರೀಮತಿ ಲಾಜರ್ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದಾಗಿ ಹೇಳಿ, ಜೇಕಬ್ ಚಾಂಡಿಯ ಮದುವೆಗೆ ಒಂದಷ್ಟು ಹಣವನ್ನು ನೀಡುತ್ತಾರೆ. ಇದಾದ ನಂತರ ದಿನಾಂಕ ಜೂನ್ 19, 1967ರಂದು ಚಾಂಡಿಯ ಮದುವೆ ನಡೆದ ನಂತರ ಆ ಚಿನ್ನದ ಶಿಲುಬೆ ಸುರಕ್ಷಿತವಾಗಿ ಮತ್ತೊಮ್ಮೆ ಮೈಸೂರಿಗೆ ಮರಳುತ್ತದೆ. ಆಗ ಚಾಂಡಿ ಕುಟುಂಬ ಆ ಶಿಲುಬೆಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರಿಗೆ ಗೌರವಪೂರ್ವಕವಾಗಿ ಹಿಂದಿರುಗಿಸುತ್ತದೆ. ಮರಳಿ ತಮ್ಮ ಬಳಿಗೆ ಬಂದ ಆ ‘ಶಿಲುಬೆ’ಯನ್ನು ಬಿಷಪ್ ಮಥಿಯಾಸ್ ಫರ್ನಾಂಡಿಸರು ಮುಂದಿನ 18 ವರ್ಷಗಳ ಕಾಲ, ಅಂದರೆ ತಾವು ಸಾಯುವವರೆಗೂ ಕೊರಳಲ್ಲಿ ಧರಿಸಿಕೊಂಡಿದ್ದರು. ತಮ್ಮ ಮರಣಶಯ್ಯೆಯಲ್ಲಿ ಮಲಗಿರುವಾಗ ತಮ್ಮ ಖಾಸಗಿ ವೈದ್ಯರಾದ ಡಾ. ಜಾವೇದ್ ನಯೀಮ್‌ರವರಿಗೆ ಆ ಚಿನ್ನದ ಶಿಲುಬೆಯನ್ನು ಕೊಟ್ಟು ಮುಂದಿನ ಮೈಸೂರು ಬಿಷಪ್ಪರಿಗೆ ಹಸ್ತಾಂತರಿಸುವಂತೆ ಕೇಳಿಕೊಳ್ಳುತ್ತಾರೆ. ಅವರ ಮರಣದ ನಂತರ ಸುದೀರ್ಘ ಎರಡೂವರೆ ವರ್ಷಗಳ ನಂತರ ಮೈಸೂರಿಗೆ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬೆಂಗಳೂರಿನ ನಮ್ಮ ಹಾರೋಬಲೆಯವರೇ ಆದ ಬಿಷಪ್ ಡಾ. ಫ್ರಾನ್ಸಿಸ್ ಮಿಖೇಲಪ್ಪನವರಿಗೆ ಆ ಚಿನ್ನದ ಶಿಲುಬೆಯನ್ನು ಡಾ. ಜಾವೇದ್ ನಯೀಮ್ ಹಸ್ತಾಂತರಿಸುತ್ತಾರೆ.

Writer - ಅಜಯ್ ರಾಜ್ ಅಬ್ರಹಾಂ

contributor

Editor - ಅಜಯ್ ರಾಜ್ ಅಬ್ರಹಾಂ

contributor

Similar News