ಭಾರತೀಯತೆಗೆ ಸ್ಪಷ್ಟ ದಿಕ್ಕು ನೀಡಿದ ರಾಖಿಗರಿ

Update: 2019-09-15 06:55 GMT

ವಂಶವಾಹಿಗಳ ಅಧ್ಯಯನದ ವರದಿಗಳು ಸಿಂಧೂ ನದಿ ನಾಗರಿಕತೆ ಮತ್ತು ಆರ್ಯರ ವಲಸೆಯ ಬಗ್ಗೆ ಶತಮಾನದಿಂದ ನಡೆಯುತ್ತಿದ್ದ ಚರ್ಚೆಗೆ ತಾರ್ಕಿಕ ಅಂತ್ಯ ಹಾಡಿವೆ. ಭಾರತವೆಂದರೆ ವೈದಿಕರಲ್ಲ, ಭಾರತೀಯತೆ ಎಂದರೆ ಕೇವಲ ವೈದಿಕತೆಯಲ್ಲ. ವೈದಿಕ ಆರ್ಯರು ಈ ನೆಲಕ್ಕೆ ಕಾಲಿಡುವುದಕ್ಕೂ ಸುಮಾರು 3000 ವರ್ಷಗಳ ಮುಂಚೆಯೇ ವಿಶ್ವಕ್ಕೇ ಮಾದರಿಯಾಗಿದ್ದ ಬಹುದೊಡ್ಡ ನಾಗರಿಕತೆಯನ್ನು ಇಲ್ಲಿಯ ಜನ ಕಟ್ಟಿ ಬೆಳೆಸಿದ್ದರು ಎಂದು ಅರಿಯುವ ಅಗತ್ಯವಿದೆ. ಇದರೊಂದಿಗೆ ಅಲ್ಲಿದ್ದ ಧರ್ಮ ಭಾಷೆಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ.

ಇಡೀ ಭಾರತವು ಇಸ್ರೋದ ಚಂದ್ರಯಾನ-2ರ ಗುಂಗಿನಲ್ಲಿ ಮುಳುಗಿದ್ದ ಹೊತ್ತಿಗೆ ಭಾರತದ ಪ್ರಾಚೀನ ಚರಿತ್ರೆಗೆ ಹೊಸ ದಿಕ್ಸೂಚಿ ನೀಡಬಲ್ಲಂತಹ ಎರಡು ಪ್ರಮುಖ ವೈಜ್ಞಾನಿಕ ಸಂಶೋಧನೆಗಳು ಪ್ರಕಟವಾದುವು. ಈ ಕುರಿತು ವಿಜ್ಞಾನಿಗಳು ಪತ್ರಿಕಾಗೋಷ್ಠಿ ಕೂಡಾ ನಡೆಸಿದರು. ಎಂದಿನಂತೆ ಹಲವು ಪತ್ರಿಕೆಗಳು ಒಂದು ಸಣ್ಣ ಜಾಗವನ್ನು ಇದಕ್ಕೆ ಮೀಸಲಿರಿಸಿ ಯಥಾವತ್ತು ವಿಷಯ ಹೇಳಿದರೆ ಇನ್ನು ಕೆಲವು ಆ ಸಂಶೋಧನೆಯ ಸಾರವನ್ನು ಸಂಪೂರ್ಣ ತಿರುಚಿ ತಮ್ಮದೇ ಪೂರ್ವಾಗ್ರಹದ ವಿಷಯವನ್ನು ಪ್ರಕಟಿಸಿದವು. ವಿಜ್ಞಾನಿಗಳ ಹಲವು ವರ್ಷಗಳ ಶ್ರಮದ ಪ್ರತಿಫಲವಾದ ವೈಜ್ಞಾನಿಕ ವರದಿಯನ್ನು ತಮಗೆ ಬೇಕಾದಂತೆ ರಾಜಾರೋಷವಾಗಿ ತಿರುಚಿ ಪ್ರಕಟಿಸುವುದು ದೇಶದ್ರೋಹ ಆಗಲಿಕ್ಕಿಲ್ಲವೇನೋ? ಇರಲಿ ಆ ವರದಿಗಳು ಏನೆಂಬುದನ್ನು ಗಮನಿಸೋಣ. ವರದಿ 1: 

2015ರಲ್ಲಿ ಹರ್ಯಾಣದ ಸಿಂಧೂ ನದಿ ನಾಗರಿಕತೆಯ ರಾಖಿಗರಿ ಪಟ್ಟಣದಲ್ಲಿ ಅಧ್ಯಯನ ಯೋಗ್ಯ ಪಳಯುಳಿಕೆಯೊಂದು ದೊರೆತಿತ್ತು. ಪುಣೆಯ ಡೆಕ್ಕನ್ ಸ್ನಾತಕೋತ್ತರ ಕಾಲೇಜಿನ ಪುರಾತತ್ವ ವಿಭಾಗದ ಸಂಶೋಧಕ ಶ್ರೀ ವಸಂತ ಶಿಂಧೆ, ಹಾರ್ವರ್ಡ್ ವೈದ್ಯಕೀಯ ಕಾಲೇಜಿನ ತಳಿವಿಜ್ಞಾನ ವಿಭಾಗದ ಶ್ರೀ ವಾಘೀಶ್ ನರಸಿಂಹನ್, ವಿಶ್ವವಿಖ್ಯಾತ ತಳಿವಿಜ್ಞಾನಿ ಡೇವಿಡ್ ರೀಚ್ ಮುಂತಾದವರ 28 ಜನ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ತಂಡವು ಈ ಪಳಯುಳಿಕೆಯಿಂದ ದೊರೆತ ಪ್ರಾಚೀನ ಡಿಎನ್‌ಎಯನ್ನು ಆಳವಾದ ಸಂಶೋಧನೆಗೆ ಒಳಪಡಿಸಿದ್ದರು. ಅದರ ಸಂಪೂರ್ಣ ವರದಿಯನ್ನು ಸೆಲ್ (Cell) ನಿಯತಕಾಲಿಕೆಯಲ್ಲಿ ‘‘ಪ್ರಾಚೀನ ಹರಪ್ಪನ್ ವಂಶವಾಹಿಯು ಸ್ಟೆಪ್ಪ್ ಪಶುಪಾಲಕ ಜನರ ಅಥವಾ ಇರಾನಿನ ಕೃಷಿಕರ ವಂಶಾವಳಿಯನ್ನು ಹೊಂದಿಲ್ಲ’’(An Ancient Harappan Genome lacks Ancestry from Steppe Pastoralists or Iranian Farmers) ಎಂಬ ಶೀರ್ಷಿಕೆಯಡಿ ಪ್ರಕಟಿಸಲಾಗಿದೆ.

ಸಿಂಧೂ ನದಿ ನಾಗರಿಕತೆಯು ವಿಶಾಲವಾದ ನಗರ ಸಂಸ್ಕೃತಿ ಹೊಂದಿರುವ ವಿಶ್ವದ ಪ್ರಾಚೀನ ನಾಗರಿಕತೆ. ಕ್ರಿ.ಪೂ 2600 ರಿಂದ 1900ರ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಇಲ್ಲಿ ವ್ಯವಸ್ಥಿತವಾದ ನಗರ ಯೋಜನೆ, ವಿಶಾಲವಾದ ಒಳಚರಂಡಿ ವ್ಯವಸ್ಥೆ, ಕಣಜಗಳು, ಪ್ರಮಾಣಿತ ತೂಕ ಮತ್ತು ಅಳತೆಯ ಮಾಪನಗಳನ್ನು ಹೊಂದಿತ್ತು. ಆದರೆ ವಿಶ್ವದ ಅತ್ಯುತ್ತಮ ನಾಗರಿಕತೆಯನ್ನು ಕಟ್ಟಿದ್ದ ಜನರ ಮೂಲದ ಬಗೆಗಿನ ಪ್ರಶ್ನೆ ಹಲವು ಉತ್ತರಗಳಿಗೆ ಎಡೆಮಾಡಿ ಕೊಟ್ಟಿತ್ತು. ಕೆಲವರು ದ್ರಾವಿಡರು ಈ ನಾಗರಿಕತೆಯ ಮೂಲ ಪುರುಷರು ಎಂದರೆ, ಇದು ಆರ್ಯರು ಕಟ್ಟಿದ್ದು ಎಂದು ವಾದಿಸುತ್ತಿದ್ದರು. ಇಲ್ಲಿಂದಲೇ ವೇದಗಳು ವಿಶ್ವದ ಇತರೆಡೆಗೆ ಸಾಗಿವೆ ಎಂಬ ವಾದವೊಂದು ಇತ್ತೀಚೆಗೆ ಬಿರುಸು ಪಡೆದುಕೊಂಡಿತ್ತು. ಇನ್ನು ವಿಶ್ವದ ಮೊದಲ ರೈತರಾದ ಇರಾನಿಯರು ವಲಸೆ ಬಂದು ಸಿಂಧೂ ನದಿಯ ದಡದಲ್ಲಿ ನೆಲೆಸಿ ಈ ನಾಗರಿಕತೆಯನ್ನು ಬೆಳೆಸಿರಬಹುದೆಂದು ಹಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದರು. ಆದರೆ ಇವೆಲ್ಲಕ್ಕೂ ಪೂರ್ಣವಿರಾಮ ಇಡುವಂತಹ ಉತ್ತರವೊಂದು ಹೊಸ ಸಂಶೋಧನೆಯಲ್ಲಿ ದೊರೆತಿದೆ.

ರಾಖಿಗರಿಯಲ್ಲಿ ದೊರೆತ 4600 ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರದ (ಕೋಡ್ ನಂಬರ್ 6113) 61 ಮಾದರಿಗಳನ್ನು ಸಂಗ್ರಹಿಸಿದ ವಿಜ್ಞಾನಿಗಳು ಅದರಲ್ಲಿನ ಡಿಎನ್‌ಎಯನ್ನು ಆಳವಾದ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಇದರೊಟ್ಟಿಗೆ ಸಿಂಧೂ ನದಿ ನಾಗರಿಕತೆಯ ಕಾಲದಲ್ಲಿ ಸಾಂಸ್ಕೃತಿಕ ಒಡನಾಟವಿದ್ದ ಮಧ್ಯ ಏಶ್ಯದ 11 ಪ್ರಾಚೀನ ಅಸ್ಥಿಪಂಜರಗಳ ಆನುವಂಶಿಕ ವಿವರಗಳ ಜೊತೆಗೆ ತಾಳೆ ಹಾಕಲಾಗಿದೆ (ಇಂದಿನ ತುರ್ಕ್ ಮೆನಿಸ್ತಾನದ ಗೋನೂರಿನ 3 ಜನ ಮತ್ತು ಪೂರ್ವ ಇರಾನಿನ ಶೆಹ್ರ್ -ಇ-ಶೋಕ್ತಾದ 8 ಜನ). ಇವರನ್ನು ಸಿಂಧೂ ಪರಿಧಿಯ ಜನವರ್ಗಗಳು I(Indus Periphery Cline) ಎಂದು ಕರೆಯಲಾಗಿದೆ. ರಾಖಿಗರಿಯ ಪಳೆಯುಳಿಕೆ ಯಲ್ಲಿ ಈಗಿನ ದಕ್ಷಿಣ ಏಶ್ಯ ಜನರಲ್ಲಿ ಕಂಡು ಬರುವ ಅಲ್ಪ ಪ್ರಮಾಣದ ಅನಟೋಲಿಯನ್ ರೈತರ ವಂಶಾವಳಿಯಾಗಲಿ ಅಥವಾ ಕ್ರಿ.ಪೂ. 2000ದಿಂದ 1500ರ ನಡುವೆ ವಲಸೆ ಬಂದು ಬೆರೆತು ಇಂದು ದಕ್ಷಿಣ ಏಶ್ಯ ಜನರಲ್ಲಿ ಗಣನೀಯ ಮಟ್ಟದಲ್ಲಿರುವ ಸ್ಟೆಪ್ಪ್ ಜನರ (ಆರ್ಯರ) ವಂಶಾವಳಿಯಾಗಲಿ ಕಂಡು ಬಂದಿರುವುದಿಲ್ಲ. ಸಿಂಧೂ ಜನರ ಸರಿಯಾದ ವಂಶಾವಳಿಯನ್ನು ಪತ್ತೆಹಚ್ಚುವ ಸಲುವಾಗಿ ಐದು ವಂಶವಾಹಿಗಳ ಮಾದರಿಗಳೊಂದಿಗೆ ತಾಳೆ ಹಾಕಲಾಗಿದೆ. 1. ಪೂರ್ವ ಇರಾನಿನ ಪ್ರಾಚೀನ ಬೇಟೆಗಾರ-ಸಂಗ್ರಹಕಾರ ಗುಂಪಿನವರ ವಂಶವಾಹಿ; 2. ಕ್ರಿ.ಪೂ. 10,000ದ ಸುಮಾರಿನ ಅಲ್ಬೋರ್ಜ್ ಬೆಟ್ಟಗಳ ಬೆಲ್ಟ್ ಕೇವ್ ಗುಹೆಗಳಲ್ಲಿ ವಾಸವಿದ್ದ ವ್ಯಕ್ತಿಗಳು 3. ಕ್ರಿ.ಪೂ. 8000ದ ಸುಮಾರಿನ ಜಾರ್ಗೋಸ್ ಪರ್ವತದ ಕುರಿಗಾಹಿಗಳ ವಂಶವಾಹಿ; 4. ಕ್ರಿ.ಪೂ. 6000ದ ಸುಮಾರಿಗೆ ಕಂಡುಬರುವ ಜಾರ್ಗೋಸ್ ಪರ್ವತದ ಹಜ್ಜಿ ಫೈರೂಝ್ ಕೃಷಿಕರು ಮತ್ತು ಕಡೆಯದಾಗಿ 5. ಕ್ರಿ.ಪೂ. 4000ದ ಸುಮಾರಿಗೆ ಕಂಡು ಬರುವ ಸೆಂಟ್ರಲ್ ಇರಾನಿನ ಟೆಪೆ ಹಿಸ್ಸಾರ್ ಪ್ರಾಂತದ ಇರಾನಿ ಕೃಷಿಕರ ವಂಶವಾಹಿ. ಎಲ್ಲಾ ಮಾಹಿತಿಯನ್ನು ವಿಶ್ಲೇಷಿಸಿದಾಗ ಸಿಂಧೂ ಕಣಿವೆಯ ನಾಗರಿಕತೆಯ ಉತ್ತುಂಗದಲ್ಲಿ, ಭಾರತದ ಆಗ್ನೇಯ ದಿಕ್ಕಿನಲ್ಲಿ ಹರಡಿದ್ದ ಸಿಂಧೂ ನಾಗರಿಕತೆಯ ಕೃಷಿಕರ ವಂಶವಾಹಿಗಳಲ್ಲಿ ಸ್ಟೆಪ್ಪ್ ದನಗಾಹಿ ಆರ್ಯನ್ನರ ಆನುವಂಶಿಕತೆಯಾಗಲೀ ಅಥವಾ ಪಶ್ಚಿಮದ ಇರಾನಿನ ರೈತರ ಆನುವಂಶಿಕತೆಯಾಗಲೀ ಲವಲೇಶವೂ ಕಾಣಸಿಗುವುದಿಲ್ಲ. ಬದಲಾಗಿ ಇವೆಲ್ಲಕ್ಕಿಂತಲೂ ಮೊದಲೇ, ಅಂದರೆ ಕ್ರಿ.ಪೂ. 10,000ರ ಪೂರ್ವದಲ್ಲಿ ಇರಾನಿನಲ್ಲಿ ಮೊದಲ ಬೇಸಾಯ ಶುರುವಾಗುವ ಮುಂಚೆಯೇ ಕವಲೊಡೆದ ವಂಶಾವಳಿಯೊಂದು ಸಿಂಧೂ ನಾಗರಿಕತೆಯ ಜನರ ಪೂರ್ವಜರಾಗಿರುವುದು ಕಂಡುಬರುತ್ತದೆ. ಅಂದರೆ ಸಿಂಧೂ ಕಣಿವೆಯಲ್ಲಿ ತನ್ನದೇ ವಿಶಿಷ್ಟವಾದ ವಂಶಾವಳಿ ಹೊಂದಿದ ಜನಾಂಗವೊಂದು ಸ್ವಂತ ಪರಿಶ್ರಮದಿಂದ ಬೇಸಾಯ ಶುರುಮಾಡಿ ನಾಗರಿಕತೆಯನ್ನು ಕಟ್ಟಿಕೊಂಡಿದೆ.

ವರದಿ 2: ಸೆಪ್ಟಂಬರ್ 6, 2019ರ ನಿಯತಕಾಲಿಕೆಯಲ್ಲಿ ಪ್ರಕಟವಾದ ಮತ್ತೊಂದು ಪ್ರಬಂಧದ ಶೀರ್ಷಿಕೆ ‘‘ದಕ್ಷಿಣ ಏಶ್ಯ ಮತ್ತು ಮಧ್ಯ ಏಶ್ಯದಲ್ಲಿ ಮಾನವ ಜನಾಂಗದ ನಿರ್ಮಾಣ’’ Science (The formation of human populations in South and Central Asia). ವಾಗೀಶ್ ನರಸಿಂಹನ್, ನಿಕ್ ಪ್ಯಾಟರ್ಸನ್, ಡೇವಿಡ್ ರೀಚ್ ಸೇರಿದಂತೆ 117 ಜನ ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ಸಮೂಹ ರಚಿಸಿದ ಸಂಶೋಧನಾ ಪ್ರಬಂಧವಿದು.

ಕಳೆದ 10,000 ವರ್ಷಗಳು ಮನುಷ್ಯನ ಆಹಾರದ ಹುಡುಕಾಟದಿಂದ ಶುರುವಾಗಿ ಆಹಾರ ಉತ್ಪಾದನೆಯವರೆಗೆ ಹಲವು ಆರ್ಥಿಕ- ಸಾಮಾಜಿಕ- ಸಾಂಸ್ಕೃತಿಕ ಆಚರಣೆಗಳ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಈ ಎಲ್ಲಾ ಬದಲಾವಣೆಗಳಿಗೆ ಜನರ ವಲಸೆ ಒಂದು ಮುಖ್ಯ ಕಾರಣ. ಮಧ್ಯ ಏಶ್ಯ ಮತ್ತು ದಕ್ಷಿಣ ಏಶ್ಯದ ಪ್ರಾಚೀನ ಡಿಎನ್‌ಎಯ ಅಲಭ್ಯತೆಯಿಂದ ಇಲ್ಲಿಯವರೆಗೂ ಇಲ್ಲಿನ ಜನರ ಚಲನವಲನದ ಮಾಹಿತಿ ರಹಸ್ಯಮಯವಾಗಿಯೇ ಇತ್ತು. ಆದರೆ ಈಗ ಮಧ್ಯಶಿಲಾಯುಗದ 523 ಜನರ ವಂಶವಾಹಿಯ ಮಾಹಿತಿಯ ಜೊತೆಗೆ ಈಗಾಗಲೇ ಪ್ರಕಟವಾಗಿರುವ ಯುರೇಶಿಯಾದ ವಂಶವಾಹಿ ಹಾಗೂ ಇಂದಿನ ಜನರ ವಂಶವಾಹಿಗಳ ಮಾಹಿತಿಗಳನ್ನು ವಿವರವಾಗಿ ಅಭ್ಯಾಸ ಮಾಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದಷ್ಟೇ ಅಲ್ಲದೆ ಈ ಹಿಂದೆ ಪ್ರಕಟಿಸಿದ ಈಗಿನ 683 ಜನರ ಸಮಗ್ರ ವಂಶವಾಹಿ ಮಾಹಿತಿಯನ್ನು ವಿಲೀನಗೊಳಿಸಿ, ದಕ್ಷಿಣ ಏಶ್ಯದಲ್ಲಿ ಕಂಡುಬರುವ 246 ಭೌಗೋಳಿಕ ಜನಾಂಗದ 1789 ಜನರ ವಂಶವಾಹಿಯನ್ನು ಕೂಡಾ ಜೊತೆಯಾಗಿ ವಿಶ್ಲೇಷಿಸಲಾಗಿದೆ. ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಿದ ಪ್ರಾಚೀನ ಮಾನವನ ಅಸ್ಥಿಪಂಜರದ 269 ರೇಡಿಯೊ ಕಾರ್ಬನ್ ದಿನಾಂಕಗಳನ್ನು ಪುರಾತತ್ವ ಕಾಲಾನುಕ್ರಮದಲ್ಲಿ ಜೋಡಿಸಲಾಗಿದೆ.

ಸಿಂಧೂ ನಾಗರಿಕತೆಯ ಸಮಯದಲ್ಲಿ ವ್ಯಾಪಕವಾಗಿ ಹರಡಿದ್ದ ವಂಶಾವಳಿ:

ಸಿಂಧೂ ನದಿ ನಾಗರಿಕತೆಯೊಂದಿಗೆ ಸಾಂಸ್ಕೃತಿಕ ಒಡನಾಟವಿದ್ದ ಸಿಂಧೂ ಪರಿಧಿಯ ಜನವರ್ಗಗಳ (Indus Periphery Cline) 11 ಪ್ರಾಚೀನ ಅಸ್ಥಿಪಂಜರಗಳ ಕಾರ್ಬನ್ ಡೇಟಿಂಗ್ ಮಾಡಲಾಗಿ ಅವರಲ್ಲಿ ಈ ಕೆಳಕಂಡ ಅಂಶಗಳನ್ನು ಪತ್ತೆ ಮಾಡಲಾಗಿದೆ.

1.ಇವರ ಅನಟೋಲಿಯ ರೈತರ ಸಂಬಂಧಿ ವಂಶವಾಹಿಯುಕಾಣಸಿಗುವುದಿಲ್ಲ. ಬಹುಶಃ ಇವರು ಇರಾನಿನಲ್ಲಿ ಮೂಲದಲ್ಲಿದ್ದ ಆದಿಮ ಜನಾಂಗದಿಂದ ಕವಲೊಡೆದಿರಬಹುದು

2.ಎಲ್ಲರಲ್ಲಿಯೂ ಅಂಡಮಾನಿ ಬೇಟೆಗಾರ ಸಂಗ್ರಹಕಾರರ (AHG-Andamanese Hunter Gatherers) ಅಂಶಗಳು ಪತ್ತೆಯಾಗಿದ್ದು Y H1a1d2 ವರ್ಣತಂತುವಿನಲ್ಲಿ ಹ್ಯಾಪ್ಲೋಗ್ರೂಪ್ (ಆನುವಂಶಿಕ ಗುಂಪು) ಕಂಡುಬರುತ್ತದೆ. ಇದು ದಕ್ಷಿಣ ಭಾರತೀಯರೆಲ್ಲರ ವರ್ಣತಂತುವಿನಲ್ಲಿ ಪ್ರಮುಖವಾಗಿ ಕಂಡು ಬರುವ ಅಂಶ

3.ಸಿಂಧೂ ನಾಗರಿಕತೆಯ (IVC Indus Valley Civilization) ಕಾಲಘಟ್ಟದಲ್ಲಿದ್ದ ಗೋನೂರ್ ಮತ್ತು ಶಹರ್-ಇ-ಶೋಕ್ತದಲ್ಲಿ  IVCಯೊಂದಿಗಿನ ಕೊಡುಕೊಳ್ಳುವಿಕೆಗೆ ಸಂಬಂಧಿಸಿದ ಸಾಕಷ್ಟು ಪುರಾತತ್ವ ಸಾಕ್ಷಿಗಳು ಕಂಡುಬರುತ್ತವೆ.

4.ಇಲ್ಲಿ ಮಾಡೆಲಿಂಗ್ ಮಾಡಿದ 11 ಜನರು, ಸಿಂಧೂ ನಾಗರಿಕತೆಯ ನಂತರದ ಸಿಂಧೂ ನದಿಯ ಆಸುಪಾಸಿನಲ್ಲಿ ವಾಸವಿದ್ದ 84 ಪ್ರಾಚೀನ ವ್ಯಕ್ತಿಗಳ ವಂಶಾವಳಿಯ ಪೂರ್ವಜರಾಗಿದ್ದು ಕಂಡುಬರುತ್ತದೆ.

5. AHG ವಂಶಾವಳಿಯೊಂದಿಗಿನ ಈ ಮಿಶ್ರಣದ ಕಾಲಘಟ್ಟ ವನ್ನು ಸುಮಾರು ಕ್ರಿ.ಪೂ. 5400 ರಿಂದ 3700 ಎಂದು ಅಂದಾಜಿಸಲಾಗಿದೆ.

ಹರಪ್ಪ ನಾಗರಿಕತೆ ನಂತರದ ಕಾಲಘಟ್ಟದಲ್ಲಿದ್ದವರ (ಕ್ರಿ.ಪೂ 1400. ಮತ್ತು ಕ್ರಿ.ಪೂ. 1700ರ ನಡುವೆ ಸ್ವಾತ್ ಮತ್ತು ಚಿತ್ರಾಲ್ ಜಿಲ್ಲೆಯಲ್ಲಿ ಕಂಡುಬಂದ) 117 ವ್ಯಕ್ತಿಗಳ ಡಿಎನ್‌ಎ ವಿಶ್ಲೇಷಣೆಯಲ್ಲಿ ಶೇ.59 ಸಿಂಧೂ ಜನರ ವಂಶಾವಳಿಯ ಜೊತೆಗೆ ಶೇ.41ರಷ್ಟು ಯಾಮ್ನಾಯ ಸ್ಟೆಪ್ಪ್ ಜನರ ವಂಶಾವಳಿ ಇರುವುದು ಕಂಡುಬರುತ್ತದೆ. ಯಾಮ್ನಾಯ ಸ್ಟೆಪ್ಪ್ ಪಶುಪಾಲಕರು ಪೂರ್ವ ಯೂರೋಪಿನ ಬೇಟೆಗಾರ ಸಂಗ್ರಹಕಾರ (EEHG-East European Hunter Gatherers) ಮೂಲದವರಾಗಿದ್ದು ಡಿಎನ್‌ಎಯಲ್ಲಿ U5a ಹ್ಯಾಪ್ಲೋ Y ಗುಂಪಿನ ಜೊತೆಗೆ, ವರ್ಣತಂತುವಿನಲ್ಲಿ R1a ಮತ್ತು R1b ಹ್ಯಾಪ್ಲೋ ಗುಂಪನ್ನು ಹೊಂದಿರುತ್ತಾರೆ. ಕ್ರಿ.ಪೂ. 3300ರ ಸಮಯದಲ್ಲಿ ಮಧ್ಯ ಏಶ್ಯದ ಕಾಕಸಸ್ ಪರ್ವತ ಶ್ರೇಣಿಗಳಲ್ಲಿ ಕಂಡುಬರುವ ಈ ಗುಂಪು ಕ್ರಿ.ಪೂ.2700ರ ಸುಮಾರಿಗೆ ಯುರೋಪಿನತ್ತಲೂ, ಕ್ರಿ.ಪೂ.1700ರ ಸಮಯಕ್ಕೆ ದಕ್ಷಿಣ ಏಶ್ಯದತ್ತಲೂ ವಲಸೆ ಹೊರಟಿದ್ದು ಕಂಡು ಬರುತ್ತದೆ. ಈ ಹೊತ್ತಿಗೆ ಅವನತಿಯ ಅಂಚನ್ನು ತಲುಪಿದ್ದ ಹರಪ್ಪ ನಾಗರಿಕತೆಯ ಜನರೊಂದಿಗೆ ಬೆರೆತ ಯಾಮ್ನಾಯ ಸ್ಟೆಪ್ಪ್ (Yamnaya Steppe Pastoralists) ಜನರು ಪೂರ್ವಿಕ ಉತ್ತರ ಭಾರತೀಯರ (Ancestral North Indian ANI) ವಂಶಾವಳಿಯ ಸೃಷ್ಟಿಗೆ ಕಾರಣವಾಗುತ್ತಾರೆ. ತಾಮ್ರ ಯುಗದ ಕೊನೆಯಲ್ಲಿ ಮತ್ತು ಕಬ್ಬಿಣ ಯುಗದ ಜನರ ವಂಶವಾಹಿಯಲ್ಲಿ ಯಾಮ್ನಾಯ ಸ್ಟೆಪ್ಪ್  ಜನರ Y ವರ್ಣತಂತುವಿನ R1a ಹ್ಯಾಪ್ಲೋಗುಂಪು ಕಾಣಸಿಗುತ್ತದೆ. ದಕ್ಷಿಣ ಏಶ್ಯದ ಜನರ ಸಾಲಿನಲ್ಲಿ ಸ್ಟೆಪ್ಪ್ ನ ಈ ವಂಶಾವಾಹಿಗಳು ಮುಖ್ಯವಾಗಿ ಪುರುಷರಿಂದ ಹರಡಿರುವ ಸಾಧ್ಯತೆ ಇದೆ. ತಮ್ಮನ್ನು ಪರಂಪರಾಗತವಾಗಿ ಪುರೋಹಿತರೆಂದೂ, ಸಂಸ್ಕೃತದ ಸಾಂಪ್ರದಾಯಿಕ ರಕ್ಷಕರೆಂದು ಕರೆದುಕೊಳ್ಳುವ ಈಗಿನ ಬ್ರಾಹ್ಮಣರು, ಭೂಮಿಹಾರರನ್ನು ಸೇರಿ ಆರು ಪ್ರಮುಖ ಗುಂಪುಗಳಲ್ಲಿ ಸ್ಟೆಪ್ಪ್ ಜನರ ಬಲವಾದ ಆನುವಂಶಿಕ ಅಂಶಗಳು ಹೇರಳವಾಗಿ ದೊರೆತಿವೆ. ಆದರೆ ಇದು ಪೂರ್ವಿಕ ದಕ್ಷಿಣ ಭಾರತೀಯರಲ್ಲಿ (Ancestral South Indians) ಕಂಡುಬರುವುದಿಲ್ಲ. 

ತಳಿವಿಜ್ಞಾನದ ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಇಂದು ನಾಲ್ಕು ಪ್ರಮುಖ ವಂಶವಾಹಿಗಳ ಮಿಶ್ರಣವನ್ನು ಕಾಣಬಹುದು. ಕ್ರಿ.ಪೂ. 2000 ಕ್ಕೂ ಮುಂಚೆ ಕಂಡುಬರುವ ಸಿಂಧೂ ನಾಗರಿಕತೆಯ ಪರಿಧಿಯಲ್ಲಿನ ಜನರ ಪ್ರಾಚೀನ ಪೂರ್ವಿಕ ದಕ್ಷಿಣ ಭಾರತೀಯರ (Ancient Ancestral South Indian) ವಂಶಾವಳಿ; ಕ್ರಿ.ಪೂ. 2000ದ ಆಸುಪಾಸಿನಲ್ಲಿ ಅದಾಗಲೇ ಇದ್ದ ದಕ್ಷಿಣ ಭಾರತೀಯರೊಂದಿಗೆ ಸಿಂಧೂ ನಾಗರಿಕತೆಯ ಜನರು ಬೆರೆತು ಹುಟ್ಟಿದ ಪೂರ್ವಿಕ ದಕ್ಷಿಣ ಭಾರತೀಯರೆಂಬ (Ancestral South Indian) ವಂಶಾವಳಿ ಹಾಗೂ ಈಶಾನ್ಯ ಭಾರತಗಳಲ್ಲಿ ಕಂಡು ಬರುವ ಜನರಲ್ಲಿ ಬೆರೆತಿರುವ ಆಸ್ಟ್ರೋ-ಏಶ್ಯಾಟಿಕ್ (ಮುಂಡಾ-ಸಂತಾಲ್ ನಂತಹ ಬುಡಕಟ್ಟುಗಳಲ್ಲಿ ಇದು ದಟ್ಟವಾಗಿದೆ) ವಂಶಾವಳಿ; ನಂತರ ಕ್ರಿ.ಪೂ. 2000 ರಿಂದ ಕ್ರಿ.ಪೂ 1500ರ ಕಾಲಾವಧಿಯಲ್ಲಿ ಸ್ವಾತ್ ಕಣಿವೆಯಲ್ಲಿ ಸೇರಿಕೊಂಡ ಮಧ್ಯ ಏಶ್ಯದ ಸ್ಟೆಪ್ಪ್ ಜನರು ಅಥವಾ ಆರ್ಯರು ಸಿಂಧೂ ನಾಗರಿಕತೆಯ ಜನರೊಂದಿಗೆ ಬೆರೆತ ಪೂರ್ವಿಕ ಉತ್ತರ ಭಾರತೀಯ (Ancestral North Indian ANI) ವಂಶಾವಳಿ. ಕೊನೆಗೆ ಈ ವಿವಿಧ ವಂಶಾವಳಿಗಳು (ASI ಮತ್ತು ANI) ಪರಸ್ಪರ ಬೆರೆತು ಉಂಟಾದ ಮಿಶ್ರ ಆಧುನಿಕ ಭಾರತೀಯ ವಂಶಾವಳಿ(Modern Indian Cline).

ಈ ಸಂಶೋಧನೆಯ ಫಲಿತಾಂಶದಿಂದ ಸಾಬೀತಾಗುವ ಮತ್ತೊಂದು ಅಂಶವೆಂದರೆ ಇಂದು ದಕ್ಷಿಣ ಏಶ್ಯದಲ್ಲಿ ಕಾಣಸಿಗುವ ಇಂಡೋ ಯೂರೋಪಿಯನ್ (ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಕೆಲ ಭಾಷೆಗಳು) ಭಾಷೆಗಳ ಮೂಲ ಇರಾನಿಯನ್ ಪ್ರಸ್ಥಭೂಮಿಯಾಗಿದ್ದು ಅವು ಸ್ಟೆಪ್ಪ್ ಆರ್ಯರಿಂದ ಹರಡಿವೆ ಎಂಬುದು. ಆರ್ಯರಿಗೂ ಇಂಡೋ ಯುರೋಪಿಯನ್ ಭಾಷೆಗಳಿಗೂ ನೇರ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಕ್ರಿ.ಪೂ 1500ರ ವೇಳೆಗೆ ಸ್ಟೆಪ್ಪ್ ಜನರ ಒಳಹರಿವಿನಿಂದ ಸೃಷ್ಟಿಯಾದ ಪುರುಷ ಪ್ರಧಾನ ANI ಜನರು ಇಂಡೋ ಯುರೋಪಿಯನ್ ಸಂಸ್ಕೃತಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಸ್ವಗೋತ್ರ ವಿವಾಹಗಳನ್ನು ಅನುಸರಿಸಿದ ಇವರು ಸಾವಿರಾರು ವರ್ಷಗಳವರೆಗೆ ನೆರೆಯವರೊಂದಿಗೆ ಬೆರೆಯಲೇ ಇಲ್ಲ. ಅವರಲ್ಲಿ ಬಹುತೇಕರು ಇಂದಿನ ಇಂಡೋ ಯೂರೋಪಿಯನ್ ಭಾಷೆಯ (ಸಂಸ್ಕೃತ) ಸಂರಕ್ಷಕರೆಂದು ಕರೆಯಲ್ಪಡುವ ಪುರೋಹಿತ ಬ್ರಾಹ್ಮಣರು.

ದಕ್ಷಿಣ ಏಶ್ಯದ ಮತ್ತೊಂದು ಪ್ರಮುಖ ಭಾಷಾ ಗುಂಪಾದ ದ್ರಾವಿಡರ ಬಗ್ಗೆಯೂ ಈ ಸಂಶೋಧನೆ ಬೆಳಕು ಹರಿಸುತ್ತದೆ. ಇಂದಿನ ದ್ರಾವಿಡ ಭಾಷೆಗೂ ಪೂರ್ವಿಕ ದಕ್ಷಿಣ ಭಾರತೀಯ (ASI) ವಂಶಾವಳಿಗೂ ಗಟ್ಟಿಯಾದ ಸಂಬಂಧವಿದೆ. ಹರಪ್ಪ ನಾಗರಿಕತೆಯ ಅವಸಾನದ ನಂತರ ಅಲ್ಲಿನ ಜನ ಪೂರ್ವ ಮತ್ತು ದಕ್ಷಿಣ ದಿಕ್ಕುಗಳತ್ತ ವಲಸೆ ಹೊರಟು, ಇಲ್ಲಿ ವಾಸವಾಗಿದ್ದ ಪ್ರಾಚೀನ ದ್ರಾವಿಡ ಭಾಷಿಕರಾದ ಪ್ರಾಚೀನ ಪೂರ್ವಿಕ ದಕ್ಷಿಣ ಭಾರತೀಯರೊಂದಿಗೆ (AASI) ಬೆರೆತಿದ್ದಾರೆ. ಜೊತೆಗೆ ದ್ರಾವಿಡ ಭಾಷೆಗಳ ವಿಸ್ತರಣೆಗೆ ಕಾರಣರಾಗಿದ್ದಾರೆ. ಇವರ ವಂಶವಾಹಿಯ ಮಾಹಿತಿಯನ್ನು ಪುರಾತತ್ವ ಮಾಹಿತಿ ಮತ್ತು ಭಾಷಾ ಅಧ್ಯಯನದೊಂದಿಗೆ ಸಂಯೋಜಿಸಿ ತಾಳೆ ಮಾಡಿದಾಗ ಈ ಅಂಶ ಸ್ಪಷ್ಟವಾಗುತ್ತದೆ. ಸಿಂಧೂ ನಾಗರಿಕತೆಯ ಹಲವು ಮುದ್ರೆಗಳಲ್ಲಿ ದ್ರಾವಿಡ ಭಾಷೆಯ ಪದಗಳ ಹಾಗೂ ಹೆಸರುಗಳ ಲಕ್ಷಣವಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಮೇಲೆ ತಿಳಿಸಿದ ವಂಶವಾಹಿಗಳ ಅಧ್ಯಯನದ ಎರಡೂ ವರದಿಗಳು ಸಿಂಧೂ ನದಿ ನಾಗರಿಕತೆ ಮತ್ತು ಆರ್ಯರ ವಲಸೆಯ ಬಗ್ಗೆ ಶತಮಾನದಿಂದ ನಡೆಯುತ್ತಿದ್ದ ಚರ್ಚೆಗೆ ತಾರ್ಕಿಕ ಅಂತ್ಯ ಹಾಡಿವೆ. ಭಾರತವೆಂದರೆ ವೈದಿಕರಲ್ಲ, ಭಾರತೀಯತೆ ಎಂದರೆ ಕೇವಲ ವೈದಿಕತೆಯಲ್ಲ. ವೈದಿಕ ಆರ್ಯರು ಈ ನೆಲಕ್ಕೆ ಕಾಲಿಡುವುದಕ್ಕೂ ಸುಮಾರು 3000 ವರ್ಷಗಳ ಮುಂಚೆಯೇ ವಿಶ್ವಕ್ಕೇ ಮಾದರಿಯಾಗಿದ್ದ ಬಹುದೊಡ್ಡ ನಾಗರಿಕತೆಯನ್ನು ಇಲ್ಲಿಯ ಜನ ಕಟ್ಟಿ ಬೆಳೆಸಿದ್ದರು ಎಂದು ಅರಿಯುವ ಅಗತ್ಯವಿದೆ. ಇದರೊಂದಿಗೆ ಅಲ್ಲಿದ್ದ ಧರ್ಮ ಭಾಷೆಗಳ ಬಗ್ಗೆ ಅಧ್ಯಯನ ನಡೆಯಬೇಕಿದೆ. ಸಿಂಧೂ ನಾಗರಿಕತೆಯೊಂದಿಗೆ ನೇರ ಸಂಬಂಧ ಹೊಂದಿರುವ ಮೂಲ ದ್ರಾವಿಡ ಸಂಸ್ಕೃತಿಯ ಮರುಶೋಧನೆ ಆಗಬೇಕಿದೆ. ಆಗ ಮಾತ್ರವೇ ನೈಜ ಭಾರತೀಯ ಧರ್ಮ ಮತ್ತು ಸಂಸ್ಕೃತಿ ಯಾವುದು ಎಂಬ ಸ್ಪಷ್ಟತೆ ಸಿಗಲು ಸಾಧ್ಯ. ಇಲ್ಲವಾದಲ್ಲಿ ಈಗಿನ ಸಂಶೋಧನೆಗಳು ಸ್ಫಟಿಕಸ್ಪಷ್ಟವಾಗಿ ಒದಗಿಸಿರುವ ಮಾಹಿತಿಯನ್ನೇ ತಿರುಚಿ, ಸಿಂಧೂ ನದಿ ನಾಗರಿಕತೆ ಕಟ್ಟಿದ್ದೇ ಆರ್ಯರು. ಆರ್ಯರೇ ಭಾರತದ ಮೂಲನಿವಾಸಿಗಳು. ವೈದಿಕತೆಯೇ ಭಾರತೀಯ ಧರ್ಮ ಎಂದೆಲ್ಲ ವರದಿ ಮಾಡುವ ಪತ್ರಿಕೆಗಳ ಆಧಾರ ರಹಿತ ಸುಳ್ಳನ್ನೇ ಸತ್ಯವೆಂದು ನಂಬಿ ಕೂರಬೇಕಾದ ಅನಿವಾರ್ಯಕ್ಕೆ ಸಿಲುಕಬೇಕಾಗುತ್ತದೆ.

Writer - ಹೇಮಂತ್ ಲಿಂಗಪ್ಪ

contributor

Editor - ಹೇಮಂತ್ ಲಿಂಗಪ್ಪ

contributor

Similar News