ದೀಪದ ಕೆಳಗೆ ಕತ್ತಲು

Update: 2019-09-15 07:19 GMT

ಅದು ಪ್ರತಿಷ್ಠಿತ ಜಿಲ್ಲಾ ಕೇಂದ್ರ. ಕಳೆದ ಹತ್ತು ವರ್ಷಗಳ ರಾಜಕಾರಣದಲ್ಲಿ ಇದೇ ಜಿಲ್ಲೆಯಿಂದ ಮತ್ತು ಒಂದೇ ಪಕ್ಷದಿಂದ ಒಬ್ಬರು ಮುಖ್ಯಮಂತ್ರಿಯಾಗಿ ಇನ್ನೊಬ್ಬರು ಉಪಮುಖ್ಯಮಂತ್ರಿಯಾಗಿ ಅಧಿಕಾರದ ರುಚಿ ಉಂಡಿದ್ದಾರೆ. ಇಷ್ಟೆಲ್ಲ ಕೊಟ್ಟ ನೆಲದ ಋಣ ತೀರಿಸಬೇಕಲ್ಲ, ರಾಜ್ಯದ ತೆರಿಗೆ ಹಣವನ್ನು ರಾಶಿಗಟ್ಟಲೆ ತಂದು ಈ ಜಿಲ್ಲೆಗೆ ಸುರಿದೇ ಸುರಿದರು. ತತ್ಫಲವಾಗಿ ಸಿಹಿಮೊಗ್ಗೆಯ ರಸ್ತೆಗಳು ತಳ ತಳ ಹೊಳೆಯುತ್ತಿವೆ. ಕಾಂಕ್ರಿಟ್ ಕಟ್ಟಡಗಳು ಆಕಾಶಮುಖಿಯಾಗಿವೆ. ತಳಕು ಬಳುಕಿನ ರೆಸಾರ್ಟ್‌ಗಳು ಊಸುರವಳ್ಳಿಯ ಹಾಗೆ ಆಗಾಗ ಬಣ್ಣ ಬದಲಿಸುತ್ತಲೇ ಇವೆ. ಕ್ಷಮಿಸಿ ಓದುಗರೆ ಇದೆಲ್ಲ ಆಗಬೇಕಾದ್ದೇ. ಕತೆಯ ಮುಖ್ಯ ಘಟ್ಟಕ್ಕೆ ಬರದೇ ನಿಮಗೆ ಕಾಯಿಸುವುದು ತರವಲ್ಲ. ಸಿಹಿಮೊಗ್ಗದ ಮಿಲಘಟ್ಟನಗರ, ಮಾರನಬೈಲು, ಭರಮಪ್ಪನಗರಗಳ ಸ್ಲಂಗಳು ಇನ್ನೂ ಹಾಗೇ ಇವೆ. ಬಡವರ ಬಂಧುಗಳಾದ ಮುಖಂಡರ ಕಣ್ಣಿಗೆ ಇದುವರೆಗೆ ಬಿದ್ದಿಲ್ಲ. ಈಗಿನ ಸರಕಾರವೂ ಇದರ ಬಗ್ಗೆ ಕಣ್ಣುತೆರೆದಿಲ್ಲ. ಅದ್ಯಾಕೋ ಗೊತ್ತಿಲ್ಲ, ಈ ಸ್ಲಂ ಮನೆಗಳ ಶೌಚಾಲಯಗಳಿಗೆ ಕಕ್ಕಸು ಗುಂಡಿಗಳೇ ಇಲ್ಲ. ಈ ಮನೆಗಳ ಕಸ, ಮುಸುರೆ, ಬಚ್ಚಲು ನೀರಿನ ಜೊತೆ ಅವರ ಮನೆಯ ಶೌಚಾಲಯದ ಮಲ- ಮೂತ್ರವೂ ಸಹ ನೇರವಾಗಿ ಮನೆಯ ಹಿಂದಿನ ಮೋರಿಗೆ ಹರಿಯುತ್ತದೆ. ಆದರೆ, ಈ ಮೋರಿಯೆಂಬ ಮಹಾಮಾರಿ ಪವಿತ್ರವಾಗಿ ಗಂಗೆ ಯಮುನೆಯರಂತೆ ಮುಂದಕ್ಕೆ ಹರಿಯುವುದಿಲ್ಲ. ತನ್ನ ಒಡಲೊಳಗೆ ಕೋಟ್ಯಂತರ ರೋಗಾಣುಗಳ ಸಂಸಾರ ಸಾಕುವ ಜೀವಧಾತೆ ಇದು. ಕ್ಷಮಿಸಿ ಗೆಳೆಯರೆ, ಈಗ ಕತೆಯ ಮುಖ್ಯ ತಿರುವಿಗೆ ಬಂದೇ ಬಿಟ್ಟೆ. ಎಲ್ಲ ನಗರಗಳಂತೆ ಈ ನಗರದ ಹೊರವಲಯದಲ್ಲೂ ಒಂದಿಷ್ಟು ಪೌರ ಕಾರ್ಮಿಕರ ಕುಟುಂಬಗಳು ನೆಲೆಸಿವೆ. ಈ ಕುಟುಂಬಗಳು ನಗರದ ಕಸ ಕಡ್ಡಿಗಳನ್ನು, ಮಲ ಮೂತ್ರಾದಿಗಳನ್ನು ಯಾವ ಎಗ್ಗಿಲ್ಲದೆ ಶಿಲಾಯುಗದಿಂದಲೂ ಬಾಚಿ ಸ್ವಚ್ಛಗೊಳಿಸುತ್ತ ಬಂದಿವೆ. ನಮ್ಮ ಅಭಿವೃದ್ಧಿಶೀಲ ನಾಡಿನಲ್ಲಿ ಮಲ ಬಳಿಯುವ ಪದ್ಧತಿ ಯಾವತ್ತೋ ನಿಷೇಧಿಸಲ್ಪಟ್ಟಿದ್ದರೂ ಇಲ್ಲಿನ ಮಾನ್ಯ ಜನಪ್ರತಿನಿಧಿಗಳಾದ ಜಡಿಯೂರಪ್ಪನವರು ಮತ್ತು ವಿಷಪ್ಪನವರ ನೆಲದಲ್ಲಿ ಮಾತ್ರ ಮಾಮೂಲಿಯಾಗಿ ಮುಂದುವರಿದಿದೆ. ಈ ಪೌರ ಕಾರ್ಮಿಕರ ಹೊಟ್ಟೆ ಮೇಲೆ ಯಾಕೆ ಹೊಡೆಯುವುದೆಂದು ಈ ನಾಯಕರು ಕೂಡ ಈ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಇಂತಿಪ್ಪ ಮೋರಿಗೆ ಒಂದಿನ ಯಾವನೋ ತಡಕಲಾಸಿ ಲೇಖಕನೊಬ್ಬ ಭೇಟಿ ನೀಡಿದ. ಈ ಮೋರಿಯ ಪಕ್ಕ ಹಾದು ಹೋಗುತ್ತಿದ್ದ ಆತ ಅಚಾನಕ್ ಆಗಿ ಈ ಮೋರಿಯಲ್ಲಿ ಹೇಲು ಉಚ್ಚೆಗಳನ್ನು ಬಾಚುತ್ತಿದ್ದ ಕಾರ್ಮಿಕರನ್ನು ನೋಡಿದ. ಅವನಿಗೆ ಅಯ್ಯೋ ಎನಿಸಿತು. ಆತನ ಮೆದುಳಿನಲ್ಲಿ ಕಾನೂನಿನ ಪರಿಚ್ಛೇದಗಳೆಲ್ಲ ಚಕಚಕಾಂತ ನೆನಪಿಗೆ ಬಂದವು. ಅವ ಆ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ. ‘‘ಅಲ್ರಯ್ಯಿ, ನಮ್ಮ ದೇಶದಲ್ಲಿ ಮಲ ಬಳಿಯುವ ಪದ್ಧತಿ ನಿಷೇಧಗೊಂಡು ಎಷ್ಟು ವರ್ಷ ಆಯ್ತು ಗೊತ್ತಾ?’’

‘‘ಹಂಗಂದ್ರೆನಣ್ಣೊ?’’ ಒಬ್ಬ ಕಾರ್ಮಿಕ ಕೇಳಿದ. ‘‘ಲೋ ಮುರ್ಖರಾ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹೇಲು ಮುಟ್ಟವುದು ಕಾನೂನು ಪ್ರಕಾರ ತಪ್ಪು ಗೊತ್ತಾ?’’ ‘‘ಅಲ್ಲಣ್ಣೋ, ನಾವು ನಗರ ಚೊಚ್ಚ ಮಾಡರಣ್ಣೋ. ನಾವೇನು ಕೆಟ್ಟದ್ದ ಮಾಡ್ತಿವಾ?’’

 ‘‘ಹಂಗಲ್ಲ ಕಣ್ರೋ, ಈ ಕಾನೂನು ನಿಮಗಾಗಿ ಇರೋದು. ಈ ಕಾನೂನು ಪಾಲಿಸಿದ್ರೆ ನೀವು ನಿಮ್ಮ ಮನೆ ಉದ್ಧಾರ ಆದಂಗೆ. ಇದನ್ನು ಮುಂದುವರಿಸಿದ್ರೆ ಈ ಕಾನೂನಿನಡಿ ನಿಮಗೂ ಶಿಕ್ಷೆ ಕೊಡಬಹುದು ಗೊತ್ತಾ?’’ ಲೇಖಕ ಕೊನೆಯದಾಗಿ ಎಚ್ಚರಿಸಿ ತನ್ನ ಪಾಡಿಗೆ ತಾನು ಹೊರಟು ಹೋದ. ಈ ಕಾರ್ಮಿಕ ಹುಡುಗರು ಬಗ್ಗಿ ತಮ್ಮ ಕೆಲಸ ತಾವು ಮಾಡತೊಡಗಿದರು. ಒಬ್ಬ ಹುಡುಗ ಮಾತ್ರ ಆ ಲೇಖಕನ ಮಾತುಗಳ ಬಗ್ಗೆ ತಲೆ ಕೆಡಿಸಿಕೊಂಡ. ‘‘ಅವರು ಹೇಳಿದ್ರಲ್ಲೂ ಸತ್ಯ ಇದೆ ಕಣ್ರೋ. ನಾವು ಈ ದರಿದ್ರ ಕೆಲಸ ಮಾಡೋದು ಬಿಟ್ಟು ಬಿಡೋಣ’’ ಎಂದ. ‘‘ಏ ಮುಚ್ಕೊಂಡು ಕೆಲಸ ಮಾಡಲೇ, ಕೆಲಸ ಬಿಟ್ಟು ಹೊಟ್ಟೆಗೇನ್ ತಿಂತಿಯಾ?’’ ಎನ್ನುತ್ತಾ ಇನ್ನುಳಿದವರು ಕೆಲಸ ಮುಂದುವರಿಸಿದರು. ಇವ ಮರುದಿನ ತನ್ನೂರಿನ ಎಂಎಲ್ಲೆ ಪ್ರಸನ್ನರಾಯರ ಮನೆಗೆ ಹೋದ. ಹೆದರುತ್ತಲೇ ‘‘ಸಾಹೇಬ್ರ, ಮಲ ಬಳಿಯೋದು ಕಾನೂನು ಪ್ರಕಾರ ತಪ್ಪಂತೆ ಹೌದ್ರಾ?’’ ಎಂದ. ರಾಯರು ಮರುಕದಿಂದ ಅವನ ಕಡೆ ನೋಡಿದರು. ‘‘ನನಗೂ ಗೊತ್ತು ಕಣೋ, ನಾನು ನಿಮ್ಮ ಕೇರಿಗೆ ಬಂದು ಎಷ್ಟು ಸಲ ಬಡಕೊಂಡೆ ಗೊತ್ತಾ? ಅದು, ಹೊಲಸು ಕೈಯಿಂದ ಮುಟ್ಟಬಾರದು. ಗಾಂಧಿ ಹೇಳವ್ರೆ, ನಿಮ್ಮವ್ರೆ ಬಾಬಾಸಾಹೇಬ್ ಅಂಬೇಡ್ಕರ್ ಹೇಳವ್ರೆ. ಬಿಟ್ಟು ಬಿಡಿ ಅದನ್ನ ಅಂತ ನಿಮ್ಮ ಮಂದಿಗೆ ತಿಳಿಸಿ ಹೇಳ ಸಾಕಾಯ್ತು. ಆಗ ನೀನು ಇನ್ನೂ ಚಿಕ್ಕವನು. ನಿನಗೆ ಗೊತ್ತಿಲ್ಲ. ಆದರೆ, ಈಗಲಾದರೂ ನೀನು ಬಂದೆಯಲ್ಲ. ನಿನ್ನಂಥವನಿಗಾಗಿ ನಾನು ಇಷ್ಟು ವರ್ಷ ಕಾಯಬೇಕಾಯಿತು. ನಿನ್ನ ಕ್ರಾಂತಿಕಾರಿ ಗುಣ ಬಾಳ ಇಷ್ಟ ಆಯ್ತು ನಂಗೆ. ಶಹಬ್ಬಾಷ್, ನಿನ್ನ ಮೂಲಕ ಬಾಬಾ ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ. ನಿನ್ನಿಂದಲಾದ್ರೂ ನಿನ್ನ ಕೇರಿ ಜನ ಉದ್ಧಾರ ಆಗಲಿ. ನಾಳೆಯಿಂದ ನೀನು ಮಲ ಬಳಿಯುವ ಕೆಲಸ ಮಾಡಬೇಡ. ಈ ನಗರ ಹೊಲಸು ಕೊಚ್ಚೆಯಲ್ಲಿ ತುಂಬಿ ತುಳುಕಾಡಿದರೂ ನೀನು ತಲೆ ಕೆಡಿಸಿಕೊಳ್ಳಬೇಡ. ಹೋಗಿ ಬಾ. ನಿನಗೆ ಒಳ್ಳೆಯದಾಗಲಿ’’ ಎಂದು ರಾಯರು ಅವನನ್ನು ಹೊಳಪುಗಣ್ಣಿನಿಂದ ಕಳಿಸಿಕೊಟ್ಟರು. ಆ ಕ್ರಾಂತಿಕಾರಿ ಯುವಕನಿಗೆ ತನ್ನ ಬಗ್ಗೆ ತನಗೆ ಬಹಳ ಹೆಮ್ಮೆ ಎನಿಸಿತು. ಖುಷಿಯಿಂದ ಮನೆಗೆ ಬಂದ. ಮರುದಿನದಿಂದ ಆತ ಮಲ ಬಾಚುವ ಕೆಲಸಕ್ಕೆ ಹೋಗಲೇ ಇಲ್ಲ. ಆದರೆ, ಅದೇ ಸ್ಲಮ್ಮಿನ ಇನ್ನೊಬ್ಬ ಯುವಕ ಸಂಬಂಧಪಟ್ಟ ಮೇಸ್ತ್ರಿಯನ್ನು ಪುಸಲಾಯಿಸಿ, ಅದೇ ಎಂಎಲ್ಲೆಯವರ ವಸೂಲಿ ಹಿಡಿದು ಆ ಕೆಲಸ ಗಿಟ್ಟಿಸಿಕೊಂಡ. ಈ ಕ್ರಾಂತಿಕಾರಿ ಹುಡುಗ ಬೇರೆ ಕೆಲಸಕ್ಕಾಗಿ ಕಚೇರಿಯಿಂದ ಕಚೇರಿಗೆ ತಿಂಗಳಾನುಗಟ್ಟಲೆ ಹುಡುಕಾಡೇ ಹುಡಕಾಡಿದ. ಹೆಚ್ಚಿಗೆ ಓದಿದವನಲ್ಲ. ಬೇರೆ ಕೆಲಸ ಗೊತ್ತಿಲ್ಲ. ಕೆಲಸಕ್ಕಾಗಿ ಅಲೆದಾಡಿ ಚಪ್ಪಲಿ ಸವೆದವೇ ಹೊರತು ಕೆಲಸ ಸಿಗಲಿಲ್ಲ. ಈಗ ಕೆಲಸ ಹುಡುಕುವುದನ್ನು ಬಿಟ್ಟು ತನ್ನ ದಾರಿ ತಪ್ಪಿಸಿದ ಆ ಲೇಖಕನನ್ನು ಹುಡುಕಾಡುತ್ತಿದ್ದಾನೆ. ಅವ ಕೈಗೆ ಸಿಗಲಿ ಒಂದು ಕೈ ನೋಡೇ ಬೀಡುತ್ತೇನೆ ಎಂದು ಸಿಟ್ಟಿನಿಂದ ಹಲ್ಲು ಮಸೆಯುತ್ತಿದ್ದಾನೆ. ಇದು ಕತೆಯಲ್ಲ, ಜೀವನವಾದ್ದರಿಂದ ಇಲ್ಲಿಗೆ ಕಥೆ ಮುಗಿದಿಲ್ಲ. ಓದುಗರೇ ಲೇಖಕ ಸಿಕ್ಕ ಮೇಲೆ ಕಥೆ ಮುಂದುವರಿಯುತ್ತದೆ. (ಸಿಹಿಮೊಗ್ಗದ ಮಿಲಘಟ್ಟನಗರ, ಮಾರನಬೈಲು, ಭರಮಪ್ಪ ನಗರಗಳಲ್ಲಿ ಕೈಯಿಂದ ಹೇಲು ಬಾಚಿಕೊಂಡು ಬುಟ್ಟಿಗೆ ತುಂಬಿ ವಾಹನದ ಮೂಲಕ ಬೇರೆ ಕಡೆ ಸಾಗಿಸುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಕತೆಗಾರರು ಅಲ್ಲಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಮಲ ಬಾಚುವ ಯುವಕನ ಬಾಯಿಂದ ಈ ಕತೆ ಕೇಳಿ ಅಕ್ಷರಕ್ಕೆ ಇಳಿಸಿದ್ದಾರೆ.)

Writer - ಹನುಮಂತ ಹಾಲಿಗೇರಿ

contributor

Editor - ಹನುಮಂತ ಹಾಲಿಗೇರಿ

contributor

Similar News