ಮಧ್ಯಾಹ್ನದೂಟದ ಬಳಿಕದ ನಿದ್ರೆಯಿಂದ ಹೃದಯಕ್ಕಿರುವ ಅಪಾಯಗಳು ಯಾವುವು?

Update: 2019-09-15 16:57 GMT

ನೀವು ಪ್ರತಿದಿನ ಮಧ್ಯಾಹ್ನದೂಟದ ಬಳಿಕ ನಿದ್ರಿಸುವ ಅಭ್ಯಾಸವನ್ನು ಹೊಂದಿದ್ದರೆ ಈ ಸುದ್ದಿ ನಿಮಗಾಗಿಯೇ ಇದೆ. ಹಗಲಿನಲ್ಲಿ ಒಂದೆರಡು ಬಾರಿ ಪುಟ್ಟ ನಿದ್ರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ವಿಜ್ಞಾನಿಗಳು ಇತ್ತೀಚಿನ ಸಂಶೋಧನೆಗಳಲ್ಲಿ ಕಂಡುಕೊಂಡಿದ್ದಾರೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯನಾಳೀಯ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಆದರೆ ಇದೇ ವೇಳೆ,ಪ್ರತಿದಿನ ಮಧ್ಯಾಹ್ನದೂಟದ ಬಳಿಕ ನಿದ್ರಿಸುವುದು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಲ್ಲದು ಎನ್ನುವುದೂ ನಿಮಗೆ ತಿಳಿದಿರಬೇಕಾದ ಅಗತ್ಯವಿದೆ.

ನಿದ್ರೆಯ ಅಭ್ಯಾಸಗಳು ಮತ್ತು ಅಪಾಯಕಾರಿ ರೋಗಗಳ ನಡುವಿನ ಸಂಬಂಧಗಳನ್ನು ಕಂಡುಕೊಳ್ಳಲು ಸ್ವಿಟ್ಝರ್‌ಲ್ಯಾಂಡ್‌ನ ವಿಜ್ಞಾನಿಗಳ ತಂಡವೊಂದು ಇತ್ತೀಚಿಗೆ ಸಂಶೋಧನೆಯನ್ನು ನಡೆಸಿತ್ತು. 35ರಿಂದ 75 ವರ್ಷ ವಯೋಮಾನದ 3,462 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಐದು ವರ್ಷಗಳ ಕಾಲ ಅವರ ನಿದ್ರೆಯ ಅಭ್ಯಾಸಗಳು ಮತ್ತು ಶರೀರದ ಮೇಲೆ ಅದರ ಪರಿಣಾಮಗಳನ್ನು ದಾಖಲಿಸಿಕೊಳ್ಳಲಾಗಿತ್ತು. ವಾರಕ್ಕೆ ಒಂದೆರಡು ದಿನ ಐದು ನಿಮಿಷಗಳಿಂದ ಒಂದು ಗಂಟೆಯವರೆಗೆ ನಿದ್ರೆಯು ಹೃದಯಾಘಾತ,ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯಗಳನ್ನು ಶೇ.48ರಷ್ಟು ತಗ್ಗಿಸುತ್ತದೆ ಎನ್ನುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಆದರೆ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗಿಂತ ಹೆಚ್ಚಿನ ನಿದ್ರೆಯು ಅಪಾಯಕಾರಿಯಾಗುತ್ತದೆ ಎಂದು ಅಧ್ಯಯನವು ಬೆಟ್ಟು ಮಾಡಿದೆ. ಬ್ರಿಟಿಷ್ ಕಾರ್ಡಿಯೊವಸ್ಕುಲರ್ ಸೊಸೈಟಿಯ ‘ಹಾರ್ಟ್ ’ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿಯು ಪ್ರಕಟವಾಗಿದೆ.

  ಪ್ರತಿದಿನ ಮಧ್ಯಾಹ್ನ ಊಟವಾದ ತಕ್ಷಣ ಒಂದು ಗಂಟೆಗಿಂತ ಹೆಚ್ಚು ನಿದ್ರೆ ಮಾಡುವವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಇಂತಹ ವ್ಯಕ್ತಿಗಳಲ್ಲಿ ಚಯಾಪಚಯ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಕೆಲವರಲ್ಲಿ ಊಟದ ಬಳಿಕ ನಿದ್ರೆಯಿಂದಾಗಿ ದೇಹದ ತೂಕವು ಹೆಚ್ಚುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ವ್ಯತ್ಯಯಗೊಳ್ಳಲು ಕಾರಣವಾಗುತ್ತದೆ ಹಾಗೂ ದುರ್ಬಲ ಚಯಾಪಚಯ ಮತ್ತು ಕಡಿಮೆ ಜೀರ್ಣ ಸಾಮರ್ಥ್ಯವಿರುವವರಲ್ಲಿ ದೇಹದ ತೂಕ ಕಡಿಮೆಯಾಗುವ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳುಂಟಾಗುತ್ತವೆ ಎನ್ನುತ್ತಾರೆ ಗ್ಲಾಸ್ಗೋ ವಿವಿಯಲ್ಲಿ ಮೆಟಾಬಾಲಿಕ್ ಮೆಡಿಸಿನ್‌ನ ಪ್ರೊಫೆಸರ್ ಆಗಿರುವ ನವೀದ್ ಸತ್ತಾರ್.

ಮಧ್ಯಾಹ್ನದ ನಿದ್ರೆಯ ಸರಿಯಾದ ಕ್ರಮ

ಮಧ್ಯಾಹ್ನ ಊಟವಾದ ತಕ್ಷಣ ನಿದ್ರೆಗೆ ಜಾರಬೇಡಿ. ಕನಿಷ್ಠ 10-15 ನಿಮಿಷಗಳ ಕಾಲದ ನಡಿಗೆಯಿರಲಿ. ಊಟ ಮತ್ತ್ತು ಹಾಸಿಗೆಯಲ್ಲಿ ಬಿದ್ದುಕೊಳ್ಳುವುದರ ನಡುವೆ ಕನಿಷ್ಠ 30 ನಿಮಿಷಗಳ ಅಂತರವಿರಲಿ. ಮಸಾಲೆಭರಿತ ಊಟ ಮತ್ತು ಪುಷ್ಕಳ ಭೋಜನದ ಬಳಿಕ ನಿದ್ರೆ ಮಾಡುವುದು ಎದೆಉರಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತಿಯಾಗಿ ಊಟ ಮಾಡಬೇಡಿ,ಅದು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

ತಾಜಾ ಮತ್ತು ಉಲ್ಲಸಿತರಾಗಿರಲು 15 ನಿಮಿಷಗಳಿಂದ ಒಂದು ಗಂಟೆಯ ನಿದ್ರೆ ಸಾಕಾಗುತ್ತದೆ. ಇದಕ್ಕಿಂತ ಹೆಚ್ಚು ಸಮಯ ನಿದ್ರಿಸುವುದರಿಂದ ಆಹಾರವು ಜೀರ್ಣಗೊಳ್ಳುವ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಊಟವಾದ ನಂತರ ಎಂದೂ ಹೊಟ್ಟೆಯ ಮೇಲೆ ಅಥವಾ ಬೋರಲಾಗಿ ಮಲಗಬಾರದು ಎನ್ನುವುದು ನೆನಪಿನಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News