×
Ad

ಅಮಿತ್ ಶಾ ಹೇಳಿಕೆಯಲ್ಲಿ ಹಿಂದಿ ಹೇರಿಕೆ ಉದ್ದೇಶವಿಲ್ಲ: ಸದಾನಂದಗೌಡ

Update: 2019-09-15 22:28 IST

ಬೆಂಗಳೂರು, ಸೆ.15: ನಾನು ಕನ್ನಡದ ಪರವಾಗಿದ್ದು, ಕನ್ನಡ ಭಾಷೆ ಉಳಿಸಿ, ಬೆಳೆಸಲು ಬದ್ಧನಾಗಿದ್ದೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಹಿಂದಿ ದಿವಸ್ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶಕ್ಕೆ ಒಂದು ಭಾಷೆ ಇರಬೇಕೆಂದು ಅಷ್ಟೇ ಹೇಳಿದ್ದಾರೆ. ಅದು ಕನ್ನಡದ ವಿರೋಧಿಯೂ ಅಲ್ಲ ಹಾಗೂ ಹಿಂದಿ ಹೇರಿಕೆಯ ಉದ್ದೇಶವೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ನಮ್ಮ ಭಾಷೆಯಾಗಿದೆ. ಅದನ್ನು ಉಳಿಸಲು ಎಲ್ಲರೂ ಒಟ್ಟಾಗಿರೋಣ ಎಂದ ಅವರು, ನಾನು ಕನ್ನಡದವನು, ಕನ್ನಡದಲ್ಲಿಯೇ ಸಹಿ ಮಾಡುತ್ತೇನೆ ಎಂದ ಅವರು, ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಆಗ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತ್ರಿಭಾಷಾ ಸೂತ್ರಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಕನ್ನಡ ಬಳಕೆ ಅನುಷ್ಠಾನ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸ್ಪಷ್ಟಪಡಿಸಿದ್ದಾರೆ ಎಂದು ಸದಾನಂದಗೌಡ ಇಂದಿಲ್ಲಿ ಪ್ರತಿಪಾದಿಸಿದರು.

ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ತಿರುಗೇಟು ನೀಡಿದ ಸಚಿವ ಸದಾನಂದಗೌಡ, ಹಿಂದಿ ಹೇರಿಕೆಯ ಪ್ರಶ್ನೆ ಇಲ್ಲ ಎಂದು ಹಲವು ಬಾರಿ ಹೇಳಲಾಗಿತ್ತು. ಆದರೂ, ಸಿದ್ದರಾಮಯ್ಯ ಈ ವಿಷಯವನ್ನು ಎತ್ತಿಕೊಂಡಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವ ಕ್ಷೇತ್ರ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿರುವ ಸಿದ್ಧರಾಮಯ್ಯ, ಪ್ರತಿಪಕ್ಷ ನಾಯಕ ಸ್ಥಾನ ಪಡೆಯಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಗೆ ಬಂದಿದ್ದಾರೆ. ಅವರ ಗಮನ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಟೀಕಿಸಿದರು.

ಅಪಾರ್ಥ ಸಲ್ಲ: ಒಕ್ಕಲಿಗರ ಓಲೈಕೆಗಾಗಿ ಸರ್ದಾರ್ ವಲ್ಲಭಭಾಯ್ ಪಟೇಲ್ ಮಾದರಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ಎಲ್ಲದಕ್ಕೂ ಅಪಾರ್ಥ ಕಲ್ಪಿಸುವುದು ಸಲ್ಲ. ಕೆಂಪೇಗೌಡರು ಒಕ್ಕಲಿಗರ ನಾಯಕರಲ್ಲ. ಎಲ್ಲ ಸಮುದಾಯಕ್ಕೂ ಸೇರಿದ ನಾಯಕ. ಎಲ್ಲವನ್ನೂ ಅಪಾರ್ಥವಾಗಿ ಕಾಣುವ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಯಾವಾಗ ಬರುತ್ತದೆಯೋ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News