ಫಾರೂಕ್ ಅಬ್ದುಲ್ಲಾ ಬಿಡುಗಡೆ ಸಂಬಂಧಿಸಿದ ಅರ್ಜಿಗೆ ಉತ್ತರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2019-09-16 06:17 GMT

ಹೊಸದಿಲ್ಲಿ, ಸೆ.16: ಜಮ್ಮು-ಕಾಶ್ಮೀರದ ವಿಶೇಷ ಪ್ರಾತಿನಿಧ್ಯವನ್ನು ರದ್ದುಪಡಿಸಿ, ಎರಡು ಕೇಂದ್ರಡಾಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಬಳಿಕ ಕಳೆದ ತಿಂಗಳು ಬಂಧಿಸಲ್ಪಟ್ಟಿರುವ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ಬಿಡುಗಡೆಗೊಳಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಉತ್ತರಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಅಕ್ರಮವಾಗಿ ಬಂಧಿಸಲ್ಪಟ್ಟಿರುವ ಫಾರೂಕ್ ಅಬ್ದುಲ್ಲಾರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಅಬ್ದುಲ್ಲಾರ ನಾಲ್ಕು ದಶಕಗಳ ಸ್ನೇಹಿತ, ತಮಿಳುನಾಡಿನ ಎಂಡಿಎಂಕೆ ಮುಖಂಡ ವೈಕೊ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
 ವೈಕೋ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರಕಾರ, ‘‘ವೈಕೋ ಅವರು ಅಬ್ದುಲ್ಲಾರ ಸಂಬಂಧಿಕರಲ್ಲ. ಜಮ್ಮು-ಕಾಶ್ಮೀರದ ನಾಯಕ ಅಬ್ದುಲ್ಲಾರನ್ನು ಬಿಡುಗಡೆಗೊಳಿಸಬೇಕೆಂಬ ವೈಕೋ ಅವರ ಕೋರಿಕೆ ಕಾನೂನು ಪ್ರಕ್ರಿಯೆಯ ನಿಂದನೆಯಾಗಿದೆ’’ ಎಂದು ತಿಳಿಸಿದೆ.
ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ನಿಗದಿಪಡಿಸಿದೆ.
ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿ ಬಂಧಿಸಲಾಗಿದೆ. ಈ ಕಾಯ್ದೆ ಅಡಿ ಎರಡು ವರ್ಷಗಳ ಕಾಲ ಬಂಧಿಸಲು ಅವಕಾಶವಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News