"ಪ್ರತಿಯೊಬ್ಬರ ಆಹಾರ ಪದ್ಧತಿ, ಸಂಸ್ಕೃತಿಯನ್ನು ಗೌರವಿಸಿ ಉಳಿಸಬೇಕು"

Update: 2019-09-16 16:21 GMT

ಬೆಂಗಳೂರು, ಸೆ.16: ಯಾವುದೇ ದೇಶ ಇರಲಿ. ಪ್ರತಿಯೊಬ್ಬರ ಆಹಾರ ಪದ್ಧತಿ, ಸಂಸ್ಕೃತಿಯನ್ನು ಗೌರವಿಸಿ ಉಳಿಸಬೇಕು ಎಂದು ದಕ್ಷಿಣ ಕೊರಿಯಾ ದೇಶದ ವಾಣಿಜ್ಯ ಕಚೇರಿಯ ಮಹಾನಿರ್ದೇಶಕ(ಡಿಜಿ) ಕೆಯುನ್ಯುಂಗ್ ಪಾರ್ಕ್ ಹೇಳಿದರು.

ನಗರದ ಯಲಹಂಕದ ಆರ್‌ಎಂಝೆಡ್ ಕಟ್ಟಡದಲ್ಲಿ ಆಯೋಜಿಸಿರುವ ದಕ್ಷಿಣ ಕೊರಿಯಾ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಪ್ರದೇಶದಲ್ಲೂ ವಿಭಿನ್ನ ಆಹಾರ ಕಾಣಬಹುದು. ಆದರೆ, ಇದನ್ನು ಗೌರವಿಸಬೇಕೇ ಹೊರತು, ವಿರೋಧಿಸುವ ಅಗತ್ಯವಿಲ್ಲ ಎಂದು ನುಡಿದರು.

ಕೊರಿಯಾ ದೇಶದ ಆಹಾರದಲ್ಲೂ ಹಲವು ವಿಧಗಳಿದ್ದು, ಇವುಗಳನ್ನು ಎಲ್ಲರೂ ರುಚಿ ನೋಡಬೇಕು. ಅಲ್ಲದೆ, ಕೊರಿಯಾ ದೇಶದಲ್ಲೂ ಭಾರತೀಯ ಪರಂಪರೆಯ ಸಿಹಿ ತಿಂಡಿಗಳು ದೊರೆಯುತ್ತವೆ ಮತ್ತು ರುಚಿಯಾಗಿರುತ್ತದೆ ಎಂದು ಹೇಳಿದರು.

ಎರಡೂ ದೇಶಗಳ ನಡುವೆ ಕೇವಲ ವ್ಯಾಪಾರ ಸಂಪರ್ಕ ಇರಬಾರದು. ಬದಲಾಗಿ, ಸಂಸ್ಕೃತಿ, ಪ್ರವಾಸದ ಸಂಪರ್ಕ ಇರಬೇಕು. ಆಗ ಮಾತ್ರ, ಹೆಚ್ಚು ಸ್ನೇಹಿಗಳಾಗಿ ಇರಲು ಸಾಧ್ಯವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕ ವಿವಿಧ ಸ್ಥಳಗಳಲ್ಲೂ ಕೊರಿಯಾ ದೇಶದ ಆಹಾರವನ್ನು ಪ್ರದರ್ಶನಕ್ಕಿಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಎಚ್ ಮಾರುಕಟ್ಟೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕೃಷ್ಣನ್, ಅಭಯ್‌ಸಿಂಗ್, ವಿ.ವಿ.ರಾಜೇಶ್ ಪುರೋಹಿತ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News