ಮಾನಸಿಕ ಅಸ್ವಸ್ಥರ ಮುಕ್ತ ಸಮಾಜ ನಿರ್ಮಿಸಬೇಕು: ಕೇಂದ್ರ ಸಚಿವ ಡಾ.ಹರ್ಷವರ್ಧನ್

Update: 2019-09-16 16:24 GMT

ಬೆಂಗಳೂರು, ಸೆ.16: ದೇಶ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿಸುವ ಮೂಲಕ, ಅಸ್ವಸ್ಥರ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದರು.

ಸೋಮವಾರ ಹೊಸೂರು ರಸ್ತೆಯ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯ 24ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

2022ಕ್ಕೆ ಓರ್ವ ವ್ಯಕ್ತಿ ಕೂಡ ಮಾನಸಿಕ ಆರೋಗ್ಯದ ಚಿಕಿತ್ಸೆ ಪಡೆಯಲು ಇರಬಾರದು. ಮಾನಸಿಕ ಅಸ್ವಸ್ಥರ ಸಂಖ್ಯೆ ಶೂನ್ಯಕ್ಕೆ ಇಳಿಸಬೇಕು ಮತ್ತು ಮಾನಸಿಕ ಆರೋಗ್ಯಕ್ಕೆ ನೀಡುವ ಚಿಕಿತ್ಸೆಯ ಅಂತರವನ್ನು ಕಡಿಮೆ ಮಾಡುವ ಸವಾಲನ್ನು ಕರ್ನಾಟಕ ಸ್ವೀಕರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ನವಭಾರತದ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡವ ಸಂದರ್ಭದಲ್ಲಿ ಸಲಹೆ ನೀಡಿದರು. ಈ ಸವಾಲನ್ನು ಸ್ವೀಕರಿಸಲು ಕರ್ನಾಟಕವು ಸಶಕ್ತವಾಗಿದೆ. ಏಕೆಂದರೆ, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಯಶಸ್ವಿ ಅನುಷ್ಠಾನವಾಗಿದೆ. ಜತೆಗೆ ದೇಶಕ್ಕೆ ಮಾದರಿಯಾಗಿರುವ ನಿಮ್ಹಾನ್ಸ್ ಕೂಡ ಇಲ್ಲಿದೆ. ನಂತರ ಕರ್ನಾಟಕದ ಮಾದರಿಯನ್ನು ಇಡೀ ದೇಶವೇ ಅನುಷ್ಠಾನ ಮಾಡಿಕೊಳ್ಳುವಂತೆ ಮಾಡಲು ಅನುಕೂಲ ಆಗಲಿದೆ. ಇದರ ಜತೆಗೆ ಮಲೇರಿಯಾ, ಕಾಲರ ಸೇರಿದಂತೆ ಅನೇಕ ಸಮಸ್ಯೆಗಳನ್ನು ದೇಶದಿಂದ ಮುಕ್ತ ಮಾಡಬೇಕು ಎಂದರು.

ವೃತ್ತಿ ಜೀವನದಲ್ಲಿ ಉತ್ತಮ ವೈದ್ಯನಾಗಬೇಕಾದರೆ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ರೋಗಿಯೊಂದಿಗೆ ಯಾವ ರೀತಿಯಲ್ಲಿ ವರ್ತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನೀವು ನಿತ್ಯವೂ ರೋಗಿಯನ್ನು ನೋಡಬಹುದು. ಆದರೆ, ರೋಗಿಗೆ ಮತ್ತು ಅವರ ಮನೆಯವರಿಗೆ ನೀವು ಹೊಸಬರಾಗಿರುತ್ತಿರಿ. ಹೀಗಾಗಿ ಅತ್ಯಂತ ವಿನಯ ಮತ್ತು ವಿನಮ್ರತೆಯಿಂದ ರೋಗಿಗಳೊಂದಿಗೆ ವ್ಯವಹರಿಸಬೇಕು ಎಂದು ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಿಮ್ಹಾನ್ಸ್‌ಗೆ ಬೇಕಿರುವ 10 ಎಕರೆ ಜಾಗವನ್ನು ಆದಷ್ಟು ಬೇಗ ಮಂಜೂರು ಮಾಡಲಾಗುತ್ತದೆ. ವೈದ್ಯಕೀಯ ಪದವಿ ಪಡೆದ ನೀವು ದೇಶದ ಆಸ್ತಿ. ರೋಗಿಗಳ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ. ಕರ್ನಾಟಕ ಆರೋಗ್ಯ ಮಿಷನ್ ಹಾಗೂ ನಿಮ್ಹಾನ್ಸ್ ಹಲವು ಕಾರ್ಯಕ್ರಮ ಮಾಡುತ್ತಿದೆ. ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.

2022ಕ್ಕೆ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯದ ಚಿಕಿತ್ಸಾ ಅಂತರವನ್ನು ಶೂನ್ಯಕ್ಕೆ ಇಳಿಸಬೇಕು. ಇದಕ್ಕಾಗಿ ನಿಮ್ಹಾನ್ಸ್ ಅಧ್ಯಕ್ಷರಾದ ಡಾ.ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ರಚಿಸಿ, ಸಮಗ್ರ ಕ್ರಿಯಾ ಯೋಜನೆಯನ್ನು ನೀಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ. ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಕ್ರಮದ ಎಲ್ಲ ರೀತಿಯ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ: ನ್ಯೂರೋ ಸೈಕಾಲಜಿ, ಕ್ಲಿನಿಕಲ್ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹ್ಯಾಬಿಲಿಟೇಷನ್, ಸೋಷಿಯಲ್ ಸೇರಿದಂತೆ ವಿವಿಧ ವಿಭಾಗಗಳ 175 ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಪದವಿ ಪ್ರದಾನ ಮಾಡಲಾಯಿತು. ಡಾ.ಕೆ.ನೀರಜ್, ಡಾ.ಸಫ್ವಾನ್ ಅಹ್ಮದ್, ಡಾ.ಕಾರ್ತಿಕ್, ಡಾ.ಸಂಗೀತಾ, ಡಾ.ಸಿದ್ದೇಶ್ವರ ಸೇರಿದಂತೆ 14 ಮಂದಿಗೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡ, ಕುಲಸಚಿವ ಡಾ.ಕೆ.ಶೇಖರ್, ನಿಮ್ಹಾನ್ಸ್ ನಿರ್ದೇಶಕ ಡಾ.ಗಂಗಾಧರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News