ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಿಬಿಐನಿಂದ ಹೈಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಕೆ

Update: 2019-09-16 16:28 GMT

ಬೆಂಗಳೂರು, ಸೆ.16: ಐಎಂಎ ಬಹುಕೋಟಿ ವಂಚನೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಹೈಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿತು.

ಈ ಕುರಿತು ಸಿಬಿಐ ತನಿಖೆ ಕೋರಿ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಐಎಂಎ ಹಗರಣದಲ್ಲಿ ರಾಜಕಾರಣಿಯೊಬ್ಬರು 10 ಕೋಟಿ ಕೇಳಿದ್ದಾರೆಂದು ಆರೋಪಿಸಲಾಗಿದೆ. ರಾಜ್ಯಪಾಲರೆ ಪತ್ರ ಬರೆದು ಆ ರಾಜಕಾರಣಿಯನ್ನು ರಕ್ಷಿಸಲು ಸೂಚಿಸಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಮಾತ್ರ ಬಂಧಿಸಿದ್ದು, ಉಳಿದವರ ವಿರುದ್ಧ ಎಸ್‌ಐಟಿ, ಸಿಬಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸಿಬಿಐ ಪರ ವಾದಿಸಿದ ವಕೀಲ ಪ್ರಸನ್ನಕುಮಾರ್ ಅವರು, ಸರಕಾರಿ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್‌ಗೆ ಪೂರ್ವಾನುಮತಿ ಬೇಕು. ಅನುಮತಿ ಕೋರಿ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸಿಬಿಐ ಸಲ್ಲಿಸಿರುವ ತನಿಖಾ ಪ್ರಗತಿ ವರದಿಯನ್ನು ಗಮನಿಸಿದ್ದೇವೆ. ಮೇಲ್ನೋಟಕ್ಕೆ ಸಮರ್ಪಕ ತನಿಖೆ ನಡೆದಂತೆ ತೋರುತ್ತಿದೆ. ಅಲ್ಲದೆ, ಸಿಬಿಐನವರು ಅ.18ರೊಳಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು. ಅಲ್ಲದೆ, ರಾಜ್ಯ ಸರಕಾರ ನೇಮಿಸುವ ಲೆಕ್ಕ ಪರಿಶೋಧಕರ ಸೇವೆ ಬಳಸಿಕೊಳ್ಳಬಹುದು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News