​ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಹಲ್ಲೆ, ಸಜೀವ ದಹನ

Update: 2019-09-17 04:32 GMT

ಲಕ್ನೋ: ಇಪ್ಪತ್ತು ವರ್ಷ ವಯಸ್ಸಿನ ದಲಿತ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಆತನಿಗೆ ಬೆಂಕಿ ಹಚ್ಚಿ ಸುಟ್ಟ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಮೇಲ್ಜಾತಿಯ 19 ವರ್ಷದ ಯುವತಿಯೊಬ್ಬಳ ಜತೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಯುವಕನನ್ನು ಜೀವಂತವಾಗಿ ದಹಿಸಲಾಗಿದೆ. ಬಂಧಿತರಲ್ಲಿ ಆ ಯುವತಿ ಹಾಗೂ ಅತ್ತೆ, ಮಾವ ಸೇರಿದ್ದಾರೆ.

ಅಭಿಷೇಕ್ ಆರು ವರ್ಷಗಳಿಂದ ಯುವತಿ ಜತೆ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಯುವಕನ ಚಿಕ್ಕಪ್ಪ ರಾಜು ಹೇಳುವಂತೆ ಹಳೆಯ ದ್ವೇಷದಿಂದ ಈ ಕೊಲೆ ಮಾಡಲಾಗಿದೆ. ಯುವಕನ ಸಾವಿನ ಸುದ್ದಿ ಕೇಳಿದ 60 ವರ್ಷದ ತಾಯಿ ರಾಮ್‌ಬೇಟಿ, ಆಘಾತದಿಂದ ಮೃತಪಟ್ಟಿದ್ದಾರೆ. ಅಸ್ವಸ್ಥತೆ ಕಾರಣದಿಂದ ಕೆಲ ದಿನಗಳಿಂದ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.

ಮೃತ ಯುವಕನ ಚಿಕ್ಕಪ್ಪ ನೀಡಿದ ದೂರಿನಂತೆ, ಯುವಕ ತನ್ನ ತಾಯಿಯ ಚಿಕಿತ್ಸೆಗಾಗಿ 25 ಸಾವಿರ ರೂಪಾಯಿ ಹೊಂದಿಸಿ ಮನೆಗೆ ಮರಳುತ್ತಿದ್ದಾಗ ಯುವತಿ ತನ್ನನ್ನು ಭೇಟಿ ಮಾಡುವಂತೆ ಕರೆದಿದ್ದಾಳೆ. ಇದು ಆಕೆಯ ಸಂಬಂಧಿಕರಿಗೆ ತಿಳಿದು ಯುವಕನ್ನು ಕೂಡಿ ಹಾಕಿ ಹಲ್ಲೆ ನಡೆಸಿದರು ಎಂದು ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ. ಅಭಿಷೇಕ್ ಬಳಿ ಇದ್ದ 25 ಸಾವಿರ ರೂಪಾಯಿಯನ್ನೂ ಲೂಟಿ ಮಾಡಿದ್ದಾರೆ ಎನ್ನಲಾಗಿದೆ.

ಯುವಕನ ಚೀರಾಟ ಕೇಳಿ ಸ್ಥಳೀಯರು ಧಾವಿಸಿ, ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಸುಟ್ಟಗಾಯಗಳಾಗಿದ್ದ ಯುವಕ ರವಿವಾರ ಮೃತಪಟ್ಟಿದ್ದಾನೆ. ಸೋಮವಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಕ್ಕದ ಮನೆಯ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ.

ಆರೋಪಿಗಳ ಮೇಲೆ ಹತ್ಯೆ ಪ್ರಕರಣ ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹತ್ಯೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News