ಉದ್ಯಮಿ ಪುತ್ರನ ಅಪಹರಿಸಿ 1.80 ಕೋಟಿಗೆ ಬೇಡಿಕೆ: ಆರೋಪಿಗಳಿಗೆ ಗುಂಡೇಟು

Update: 2019-09-17 14:22 GMT

ಬೆಂಗಳೂರು, ಸೆ.17: ಉದ್ಯಮಿ ಸಿದ್ದರಾಜು ಅವರ ಪುತ್ರ ಮತ್ತು ಕಾರು ಚಾಲಕನನ್ನು ಅಪಹರಿಸಿ 1.80 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ನಿವಾಸಿಗಳಾದ ಸಂಗುಬಾಳ ಪ್ರಶಾಂತ್, ಸತೀಶ್ ಎಂಬುವವರ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬೈಕ್ ಮಾರಾಟ ಮಳಿಗೆ ಮಾಲಕ, ಉದ್ಯಮಿ ಸಿದ್ದರಾಜು ಅವರ ಮಗ ಹೇಮಂತ (17) ಮತ್ತು ಚಾಲಕ ಕೇಶವ(24) ಇತ್ತೀಚೆಗೆ ನಾಪತ್ತೆಯಾಗಿದ್ದರು. ರಾಜಾನುಕುಂಟೆ ಬಳಿಯ ಆರ್.ಟಿ. ನಗರ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಪಿಯು ಓದುತ್ತಿದ್ದ ಹೇಮಂತನನ್ನು ಚಾಲಕ ಕೇಶವ ಟ್ಯೂಷನ್‌ಗೆ ಸಂಜೆ ವೇಳೆ ಕಾರಿನಲ್ಲಿ ಮನೆಯಿಂದ ಕರೆದುಕೊಂಡು ತೆರಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಇಬ್ಬರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿದ್ದವು. ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಡಿವೈಎಸ್‌ಪಿ ಮೋಹನ್ ನೇತೃತ್ವದಲ್ಲಿ ಐದು ತಂಡಗಳ ರಚನೆ ಮಾಡಲಾಗಿತ್ತು. ಹತ್ತು ದಿನಗಳಿಂದ ದೇಶದ ವಿವಿಧ ಮೂಲೆಗಳಿಂದ ಕರೆ ಮಾಡಿ ಆರೋಪಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಹಣ ತೆಗೆದುಕೊಳ್ಳಲು ಬರುವಂತೆ ಹೇಳಿ ಆರೋಪಿಗಳನ್ನು ಕರೆಸಿಕೊಳ್ಳಲಾಗಿದೆ. ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಆತ್ಮರಕ್ಷಣೆಗಾಗಿ ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಸತ್ಯನಾರಾಯಣ್ ಗುಂಡುಹಾರಿಸಿದ್ದಾರೆ ಎನ್ನಲಾಗಿದೆ.

ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಸತ್ಯನಾರಾಯಣ್, ರಾಜಾನುಕುಂಟೆ ಪಿಎಸ್ಸೈ ಮುರಳೀಧರ್, ಆನೇಕಲ್ ಪಿಎಸ್ಸೈ ಹೇಮಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಘಟನೆಯಲ್ಲಿ ಹೇಮಂತ್, ಮುರಳೀಧರ್, ದೊಡ್ಡಬಳ್ಳಾಪುರ ಮುಖ್ಯಪೇದೆ ಮಧು ಅವರಿಗೂ ಗಾಯಗಳಾಗಿವೆ. ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News