ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ವಿಳಂಬ: ಸಿಎಫ್‌ಐ ಖಂಡನೆ

Update: 2019-09-17 15:57 GMT

ಬೆಂಗಳೂರು, ಸೆ.17: ಪೋಸ್ಟ್ ಮೆಟ್ರಿಕ್, ಪ್ರೀ ಮೆಟ್ರಿಕ್ ಅರಿವು ಹಾಗೂ ವಿದ್ಯಾಸಿರಿಯಂತಹ ವಿದ್ಯಾರ್ಥಿ ವೇತನ ರಾಜ್ಯದ ಹಲವು ವಿದ್ಯಾರ್ಥಿಗಳಿಗೆ ಮಂಜೂರಾಗದೇ ಇರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್‌ನ ರಾಜ್ಯ ಕಾರ್ಯದರ್ಶಿ ಅತಾಉಲ್ಲಾ, ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರವು ಎಲ್ಲ ವಿದ್ಯಾರ್ಥಿ ವೇತನವನ್ನು ಆನ್‌ಲೈನ್ ಸೇವೆ ಮಾಡಿ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, 2017-18 ಮತ್ತು 19 ಸಾಲಿನಲ್ಲಿ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಾಕಿಯಿಟ್ಟು ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲೂ ಹಲವು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದು, ಅರ್ಜಿಯ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸಿಗಬೇಕಾದ ವೇತನದಲ್ಲೂ ವಿಳಂಬ ಮಾಡುತ್ತಿರುವುದು ಪ್ರತಿವರ್ಷ ಕಾಣಬಹುದು. ಶೈಕ್ಷಣಿಕ ವರ್ಷದ ಕೊನೆ ಅಂದರೆ ಡಿಸೆಂಬರ್ ಜನವರಿ ಒಳಗಡೆ ಬರಬೇಕಾದ ವಿದ್ಯಾರ್ಥಿ ವೇತನ ಹೊಸ ವರ್ಷ ಆರಂಭವಾದರೂ ಕೈಗೆ ಸಿಗದೇ ಇರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ದೂರಿದರು.

ವಿಳಂಬದ ಕುರಿತು ಇದುವರೆಗೂ ಇಲಾಖೆಯಿಂದಾಗಲೀ, ಅಧಿಕಾರಿಗಳಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ನೇರವಾಗಿ ಸರಕಾರವನ್ನು ಹೊಣೆ ಮಾಡುತ್ತಾ ರಾಜ್ಯದ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ ಬೃಹತ್ ಮಟ್ಟದ ಹೋರಾಟವನ್ನು ಸಂಘಟಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ಸಹಕರಿಸುತ್ತಿಲ್ಲ. ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮತ್ತು ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News