ವಿವಿಗಳ ಉನ್ನತೀಕರಣಕ್ಕೆ ಮಾರ್ಗದರ್ಶಕ ಸೂತ್ರಗಳು ಅಗತ್ಯ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2019-09-17 16:00 GMT

ಬೆಂಗಳೂರು, ಸೆ.17: ರಾಜ್ಯದ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟದಲ್ಲಿ ರ‍್ಯಾಂಕಿಂಗ್ ಗಳಿಸುವ ನಿಟ್ಟಿನಲ್ಲಿ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದರು.

ಮಂಗಳವಾರ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಮ್ ವರ್ಕ್‌ನ 2019ರ ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯ ಮತ್ತು ರಾಷ್ಟ್ರದ ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಉನ್ನತ ದರ್ಜೆಗೇರಿಸುವ ಅಗತ್ಯತೆ ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಹೀಗಾಗಿ ವಿವಿಗಳಿಗೆ ಅಗತ್ಯ ಪ್ರೋತ್ಸಾಹಗಳನ್ನು ನೀಡಿ ಮುಂದಿನ 5 ವರ್ಷಗಳಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಾದರೂ ಜಾಗತಿಕ ಮಟ್ಟದಲ್ಲಿ ರ‍್ಯಾಂಕಿಂಗ್ ಗಳಿಸುವಂತೆ ಉತ್ತಮ ಪಡಿಸಲು ಉಪಕುಲಪತಿಗಳು ವಿಶೇಷ ಆಸಕ್ತಿ ವಹಿಸಬೇಕೆಂದು ಅವರು ಆಶಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳು ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ನಮ್ಮ ವಿವಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ, ಮೂಲಭೂತ ಸೌಕರ್ಯಗಳು ಇದ್ದರೂ ಜಾಗತಿಕ ಮಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ವಿಷಾದಿಸಿದರು.

ವಿಶ್ವವಿದ್ಯಾಲಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಲಾಗುವುದು. ವಿವಿಗಳ ಸಂಸ್ಥಾಪನಾ ವರ್ಷ, ಯುವ ವಿವಿಗಳು, ವಿಶಿಷ್ಟ ವಿವಿಗಳು, ಸಂಸ್ಥಾಪಿತ ವಿವಿಗಳು. ಇವು ಹೊಂದಿರುವ ವೈಶಿಷ್ಟತೆಯ ಆಧಾರದ ಮೇಲೆ ರೇಟಿಂಗ್ ನಿಗದಿಯಾಗಲಿದೆ ಎಂದು ಅವರು ಹೇಳಿದರು.

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಎಸ್.ವಿ.ರಂಗನಾಥ್ ಮಾತನಾಡಿ, ಗುಜರಾತ್‌ನಲ್ಲಿ ಕಾಲೇಜುಗಳಿಗೂ ರೇಟಿಂಗ್ ನೀಡುವ ವ್ಯವಸ್ಥೆ ಇದೆ. ಈ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಐಸಿಎಆರ್ ಅಧ್ಯಕ್ಷ ಡಾ.ಕೆ.ಶ್ರೀಧರ್, ಮಣಿಪಾಲ್, ಕೆಎಲ್‌ಇ, ಕುವೆಂಪು, ಕರ್ನಾಟಕ, ವಿಶ್ವೇಶ್ವರಯ್ಯ ತಾಂತ್ರಿಕ, ಮಂಗಳೂರು, ಬೆಂಗಳೂರು, ಕಲಬುರ್ಗಿ, ಮೈಸೂರು ಹಾಗೂ ತುಮಕೂರು ವಿವಿಗಳಿಗೆ ರೇಟಿಂಗ್ ಆಧಾರದ ಮೇಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಕ್ಸ್

ವಿವಿಗಳಿಗೂ ರ‍್ಯಾಂಕಿಂಗ್

ರಾಜ್ಯಗಳ ವಿಶ್ವವಿದ್ಯಾಲಯಗಳಿಗೆ ರೇಟಿಂಗ್ ನೀಡಲು ಮಾನದಂಡಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ‍್ಯಾಂಕಿಂಗ್ ಅಂಡ್ ಎಕ್ಸಲೆನ್ಸಿ ಸಂಸ್ಥೆ ನೀಡುವ ವರದಿಯ ಮೇಲೆ ರೇಟಿಂಗ್ ವ್ಯವಸ್ಥೆ ನಿಗದಿಯಾಗಲಿದೆ.

-ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News