ಬಿಜೆಪಿ ಸರಕಾರದಲ್ಲಿ ಬೀದಿ ಪಾಲಾದ ಕನ್ನಡ ಜನ: ಮೋಹನ್ ದಾಸರಿ

Update: 2019-09-17 16:04 GMT

ಬೆಂಗಳೂರು, ಸೆ.17: ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತಮ್ಮ ಜೀವನ ಕಳೆದುಕೊಂಡು ಬೀದಿಪಾಲಾಗಿ ಒಂದು ತಿಂಗಳು ಕಳೆದು ಹೋಗಿದೆ. ಕಳೆದ ವಾರ ಪ್ರವಾಹಕ್ಕೆ ಸಿಲುಕಿ ನೆಲೆ ಕಳೆದುಕೊಂಡಿದ್ದ ಕುಟುಂಬದ ಪುಟ್ಟಮಗುವೊಂದು ತಿನ್ನಲು ಆಹಾರವಿಲ್ಲದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ರವಿವಾರ ಬೆಳಗಾವಿಯ ನೇಕಾರರೊಬ್ಬರು ಪ್ರವಾಹದಲ್ಲಿ ಮನೆಯನ್ನೂ ಕಳೆದುಕೊಂಡು, ಮಗ್ಗವೂ ಹಾಳಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನರು ಇಂದಿಗೂ ಬಯಲಿನಲ್ಲೇ ಸ್ನಾನ ಮಾಡಿ, ಬೀದಿಗಳಲ್ಲೇ ಬದುಕು ನಡೆಸುವಂತಹ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ ಜನರಿಗೆ ಸಿಕ್ಕಿದ್ದೇನು? ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಪದೇ ಪದೇ ಪ್ರವಾಹ ಸಂಭವಿಸುತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮವಿರಲಿ, ಪ್ರವಾಹದಿಂದ ಬದುಕು ಕಳೆದುಕೊಂಡ ಜನರ ಜೀವನವನ್ನು ಮರಳಿ ಕಟ್ಟಿಕೊಡುವುದರಲ್ಲಿ ಕೂಡ ಸರಕಾರ ವಿಫಲವಾಗಿದೆ. ಈ ಬಾರಿಯ ಪ್ರವಾಹದಿಂದ 12 ಜಿಲ್ಲೆಗಳ 88 ತಾಲೂಕುಗಳಲ್ಲಿ 40 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರಕಾರದಿಂದ ಕೇವಲ 3,800 ಕೋಟಿ ರೂ.ಗಳನ್ನಷ್ಟೇ ಪರಿಹಾರ ಕೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದರೂ, ಕೇಂದ್ರ ಸರಕಾರ ಕನಿಷ್ಠ ಪ್ರಮಾಣದ ಪರಿಹಾರವನ್ನೂ ನೀಡಿಲ್ಲ. ವಾರದಲ್ಲಿ ಮೂರು ಬಾರಿ ದೆಹಲಿಗೆ ಹಾರುವ ಯಡಿಯೂರಪ್ಪಬಿಜೆಪಿಯ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತಿದ್ದು ರಾಜ್ಯದ ಹಕ್ಕುನ್ನು, ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ಪಾಲನ್ನು ತರುವುದರಲ್ಲಿ ವಿಫಲವಾಗಿದ್ದಾರೆ. ಕೇಂದ್ರದಿಂದ ಅನುದಾನ ತರಬೇಕಿರುವ ಸಂಸದರು ಜನರ ಸಾವು-ನೋವಿನಲ್ಲೂ ಸಮರ್ಥನೆಯನ್ನು ಹುಡುಕುತ್ತಿದ್ದಾರೆ ಎಂದು ಮೋಹನ್ ದಾಸರಿ ಟೀಕಿಸಿದ್ದಾರೆ.

ಇದುವರೆಗೂ ಯಾವುದೇ ಪರಿಹಾರ ಕಾರ್ಯವನ್ನು ಮಾಡದೇ ಇರುವ ಸರಕಾರವನ್ನು ಸಮರ್ಥಿಸಿಕೊಂಡು ಕಳೆದ ವಾರ ಕೇಂದ್ರ ಸಚಿವ ಸದಾನಂದಗೌಡ, ನಾವು ಪರಿಹಾರ ಕಾರ್ಯವನ್ನು ಸಂಪೂರ್ಣ ಪ್ರವಾಹ ನಿಂತ ಮೇಲೆ ಮಾಡುತ್ತೇವೆ. ಅಲ್ಲಿಯವರೆಗೆ ಜನರ ಜೀವವನ್ನು ಉಳಿಸುವ ಕೆಲಸವನ್ನಷ್ಟೇ ಮಾಡುತ್ತೇವೆ ಎಂದು ಅಮಾನವೀಯ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರು ಕಿಡಿಗಾರಿದ್ದಾರೆ.

ಚಂದ್ರಯಾನದ ವೀಕ್ಷಣೆಗೆ ಬಂದ ಪ್ರಧಾನಿ ನರೇಂದ್ರ ಮೋದಿ, ಬದುಕು ಕಳೆದುಕೊಂಡ ಜನರ ನೋವಿಗೆ ಸ್ಪಂದಿಸುವ ಮಾನವೀಯತೆಯನ್ನೂ ತೋರದೆ ಇದ್ದದ್ದು, ಬಿಜೆಪಿಗೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದನ್ನು ತೋರಿಸಿದೆ ಎಂದು ಮೋಹನ್ ದಾಸರಿ ಹೇಳಿದ್ದಾರೆ. ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರ ಯಮನಾ ನದಿಯಲ್ಲಿ ಪ್ರವಾಹ ಭೀತಿ ಉಂಟಾದ ತಕ್ಷಣವೇ ಜನರನ್ನು ಸ್ಥಳಾಂತರಿಸಿ ಮುನ್ನಚ್ಚರಿಕೆ ಕ್ರಮವನ್ನು ಕೈಗೊಂಡಿತ್ತು. ಅಲ್ಲದೆ ಪ್ರವಾಹ ನೀರನ್ನು ಸಂಗ್ರಹಿಸಲು ದಿಲ್ಲಿಯ ಪಲ್ಲಾ ಮತ್ತು ವಾಜಿರಾಬಾದ್ ನಡುವೆ ಜಲಾಶಯ ನಿರ್ಮಿಸಲು ಮುಂದಾಗಿದೆ. ದಿಲ್ಲಿ ಮಾದರಿಯನ್ನು ಕರ್ನಾಟಕ ಸರಕಾರ ಅನುಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯಡಿಯೂರಪ್ಪ ಕೇಂದ್ರಕ್ಕೆ ಸಲಾಮು ಹೊಡೆಯುವುದನ್ನು ಬಿಟ್ಟು ರಾಜ್ಯಕ್ಕೆ ಸಿಗಬೇಕಾದ ಪರಿಹಾರದ ಹಣವನ್ನು ಪಡೆದು ತರಬೇಕು. ಮನೆಗಳನ್ನು ಕಳೆದುಕೊಂಡ ಜನರು ತಮ್ಮ ಜೀವನವನ್ನು ಮರಳಿ ಕಟ್ಟಿಕೊಳ್ಳಲು ಪುನರ್ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಸರಕಾರ ಕಲ್ಪಿಸಬೇಕು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಕೆಲಸವನ್ನು ಬಿಟ್ಟು, ಪ್ರವಾಹಕ್ಕೆ ಮುನ್ನೆಚ್ಚರಿಕೆ ಯೋಜನೆಗಳನ್ನು ರೂಪಿಸಬೇಕು ಎಂದು ಮೋಹನ್ ದಾಸರಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News