ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ ಸ್ಥಾಪನೆ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2019-09-17 16:36 GMT

ಬೆಂಗಳೂರು, ಸೆ.17: ಕೋಲಾರದ ಬಳಿ ಅಮರಶಿಲ್ಪಿಜಕಣಾಚಾರಿ ಹೆಸರಿನಲ್ಲಿ ಶಿಲ್ಪಕಲಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಮರಶಿಲ್ಪಿ ಜಕಣಾಚಾರಿ ಗೌರವಾರ್ಥವಾಗಿ ರಾಜ್ಯ ಸರಕಾರ 10 ಕೋಟಿ ರೂ.ಗಳ ವೆಚ್ಚದಲ್ಲಿ ಶಿಲ್ಪಕಲಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಶಿಲ್ಪ ಕಲೆಗಳ ಕೌಶಲ್ಯಾಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ವಿಶ್ವಕರ್ಮ ಸಮುದಾಯವು ಅಪಾರವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಆದರೆ, ಸೂಕ್ತವಾದ ರೀತಿಯಲ್ಲಿ ಮನ್ನಣೆ ಸಿಗದೇ ಬೆಳಕಿಗೆ ಬರುವುದಿಲ್ಲ. ಹೀಗಾಗಿ, ಅವರಲ್ಲಿನ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಸರಕಾರ ಮುಂದಿನ ದಿನಗಳಲ್ಲಿ ಮಾಡಲಿದೆ. ಈ ಮೂಲಕ ನಾಡಿನಲ್ಲಿ ಆದಾಯ ಉತ್ಪಾದನೆ, ಅವಕಾಶಗಳನ್ನು ಹೆಚ್ಚಿಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ನುಡಿದರು.

ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಎಲ್ಲ ಜಾತಿ, ಧರ್ಮ, ಜನಾಂಗದ ಪರವಾಗಿ, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಕರ್ತವ್ಯ. ಎಲ್ಲರಿಗೂ ಸಮಾನ ನ್ಯಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವೆಎಂದು ಅವರು ನುಡಿದರು.

ಜಕಣಾಚಾರಿಯು ನಮ್ಮ ನಾಡಿನವರಾಗಿದ್ದು, ಕಲೆಯ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಅವರನ್ನು ಗೌರವಿಸುವ ನಿಟ್ಟಿನಲ್ಲಿ ಜ.1 ಸ್ಮರಣಾರ್ಥ ದಿನವನ್ನು ಸರಕಾರದ ದಿನಾಚರಣೆಯಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೇಲೂರು ಚನ್ನಕೇಶವ ದೇವಸ್ಥಾನದಲ್ಲಿ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಸರಕಾರದ ಮಟ್ಟದಲ್ಲಿ ಮಾತುಕತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಿಶ್ವಕರ್ಮ ಏಕದಂಗಡಿ ಮೃದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಹೀಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗೆ ರಾಜಕೀಯ ಅಧಿಕಾರ ಬೇಕಿದೆ. ಸೂಕ್ತ ಸ್ಥಾನ ಮಾನ ಬೇಕಾಗಿದೆ ಎಂದು ಹೇಳಿದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಸಮುದಾಯದ ಒಬ್ಬರನ್ನು ಮಂತ್ರಿ ಮಾಡಿದ್ದರು. ಅಂದಿನಿಂದ ಯಾವುದೇ ಸ್ಥಾನಮಾನ ಸಿಗಲಿಲ್ಲ. ಹೀಗಾಗಿ, ಯಡಿಯೂರಪ್ಪಸಂಪುಟದಲ್ಲಿ ನಂಜುಂಡಿಗೆ ಒಂದು ಸ್ಥಾನಮಾನ ನೀಡಬೇಕಿದೆ. ಆ ಮೂಲಕ ಸಮುದಾಯದವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ವಿಧಾನಪರಿಷತ್ತು ಸದಸ್ಯ ಕೆ.ಪಿ.ನಂಜುಂಡಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದೇ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಲಿಲ್ಲ ಎಂದರೆ ಮೂಲೆಗುಂಪಾಗಿ ಬಿಡುತ್ತವೆ. ಹೀಗಾಗಿ, ನಮ್ಮ ಸಮುದಾಯಕ್ಕೆ ಸರಕಾರ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ನಮ್ಮ ಸಮುದಾಯ 40 ಲಕ್ಷ ಜನಸಂಖ್ಯೆಯಿದ್ದರೂ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಹೀಗಾಗಿ, ನಮ್ಮ ಸಮುದಾಯವು ನ್ಯಾಯಕ್ಕಾಗಿ ಸಂಘಟಿತ ಹೋರಾಟದ ಅಗತ್ಯವಿದೆ. ಹದಿನಾರು ವರ್ಷಗಳ ಹೋರಾಟದಿಂದ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಆದುದರಿಂದಾಗಿ, ನಮ್ಮ ಹಕ್ಕು ಕೇಳದೇ ಇದ್ದರೆ ಏನೂ ಸಿಗಲ್ಲ. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ, ಇಲಾಖೆಯ ಕಾರ್ಯದರ್ಶಿ ಆರ್.ಆರ್.ಜನ್ನು ಸೇರಿದಂತೆ ಮತ್ತಿತರಿದ್ದರು.

ಬೇಡಿಕೆಗಳು

ಜ.1 ರಂದು ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಸರಕಾರದ ಕಾರ್ಯಕ್ರಮವಾಗಿ ಮಾಡಬೇಕು. ಬೇಲೂರು ಚನ್ನಕೇಶವ ದೇವಸ್ಥಾನದಲ್ಲಿ ಜಕಣಾಚಾರಿ ಪ್ರತಿಮೆ ಸ್ಥಾಪನೆ ಮಾಡಬೇಕು. ಒಂದು ವಿಶ್ವವಿದ್ಯಾಲಯಕ್ಕೆ ಜಕಣಾಚಾರಿ ಹೆಸರು ಇಡಬೇಕು. ವಿಶ್ವಕರ್ಮ ಅಭಿವೃದ್ಧಿ ನಿಮಗ ಮಂಡಳಿಗೆ 200 ಕೋಟಿ ಅನುದಾನ ನೀಡಬೇಕು. ಮಠಗಳಿಗೆ ವಿಶೇಷ ಅನುದಾನ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News