ಖಾಸಗೀಕರಣದ ನೀತಿಯಿಂದ ಸಾರ್ವಜನಿಕ ಉದ್ಯಮ ಬೀದಿಗೆ: ಜೆಡಿಎಸ್ ಮುಖಂಡ ರಮೇಶ್ ಬಾಬು

Update: 2019-09-17 17:00 GMT

ಬೆಂಗಳೂರು, ಸೆ.17: ಕೇಂದ್ರ ಸರಕಾರ ಸಾಮ್ಯದ ಬಿಎಸ್ಸೆನ್ನೆಲ್(ಭಾರತ ಸಂಚಾರ ನಿಗಮ) ನಷ್ಟದಲ್ಲಿರುವ ಕಾರಣ ರಾಜ್ಯದ ವಿದ್ಯುತ್ ಕಂಪೆನಿಗಳಿಗೆ ಪಾವತಿ ಮಾಡಬೇಕಿರುವ ವಿದ್ಯುತ್ ಶುಲ್ಕ ಪಾವತಿಸಲು ಸಮಯಾವಕಾಶ ಕೋರಿ ಬಿಎಸ್ಸೆನ್ನೆಲ್ ಪ್ರಧಾನ ಪ್ರಬಂಧಕರು ಪತ್ರ ಬರೆದಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ತಿಳಿಸಿದ್ದಾರೆ.

ರಾಜ್ಯ ಸರಕಾರದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್ಯದ ವಿದ್ಯುತ್ ಕಂಪನಿಗಳಿಗೆ ಪತ್ರ ಬರೆದು ಬಾಕಿ ಶುಲ್ಕ ಪಾವತಿ ಮಾಡಲು 2 ತಿಂಗಳ ಕಾಲಾವಕಾಶ ನೀಡಲು ಸೂಚಿಸಿದ್ದಾರೆ. ಕೇಂದ್ರ ಸರಕಾರದ ಖಾಸಗೀಕರಣದ ನೀತಿಯಿಂದ ಜನಪರವಾದ ಒಂದು ಸಾರ್ವಜನಿಕ ಉದ್ಯಮ ಬೀದಿಗೆ ಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ 5 ವರ್ಷಗಳಿಂದ ಆದಾಯದಲ್ಲಿ ಇಳಿಕೆಯಾಗಿದ್ದು ನಷ್ಟದಲ್ಲಿ ನಿರಂತರವಾಗಿ ಏರಿಕೆಯಾಗಿದೆ. 2016-17ರಲ್ಲಿ 31,533 ಕೋಟಿ ರೂ., 2017-18ರಲ್ಲಿ 25,071 ಕೋಟಿ ರೂ., 2018- 19ರಲ್ಲಿ 19,308 ಕೋಟಿ ರೂ.ಗಳಷ್ಟು ಆದಾಯ ಗಳಿಸಿತ್ತು. 2015-16ರಲ್ಲಿ 4,859 ಕೋಟಿ ರೂ., 2016-17ರಲ್ಲಿ 4,793 ಕೋಟಿ ರೂ., 2017-18ರಲ್ಲಿ 7,993 ಕೋಟಿ ರೂ. ಹಾಗೂ 2018-19ರಲ್ಲಿ 14,202 ಕೋಟಿ ರೂ.ನಷ್ಟವನ್ನು ಬಿಎಸ್ಸೆನ್ನೆಲ್ ಅನುಭವಿಸಿದೆ ಎಂದು ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಇಡೀ ದೇಶದ ಮೊಬೈಲ್ ಸಂಪರ್ಕ ಕ್ರಾಂತಿಯಲ್ಲಿ ಬಿಎಸ್ಸೆನ್ನೆಲ್ ಕೊಡುಗೆ ಮತ್ತು ಸೇವೆ ಅಪರಿಮಿತವಾದದ್ದು. ಸೇವಾವಲಯದ ಈ ಸಾರ್ವಜನಿಕ ಉದ್ಯಮ ಲಾಭದಾಯಕ ಮತ್ತು ಅತ್ಯಂತ ಪ್ರಯೋಜನಕಾರಿ ಆಗಿತ್ತು. ಆದರೆ ಖಾಸಗಿ ಮೊಬೈಲ್ ಕಂಪನಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಬಿಎಸ್ಸೆನ್ನೆಲ್ ಕಂಪನಿಯನ್ನು ಹಂತ ಹಂತವಾಗಿ ಕೊಲ್ಲಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

4ಜಿ ತರಂಗಾಂತರಗಳ ಸೇವೆಯನ್ನು ಗ್ರಾಹಕರಿಗೆ ನೀಡಲು ಮಾರಾಟ ಮಾಡಲು ದುರುದ್ದೇಶದಿಂದ ಬಿಎಸ್ಸೆನ್ನೆಲ್‌ಗೆ ಅವಕಾಶ ನೀಡಲಿಲ್ಲ. ರಾಜ್ಯದ ಇಡೀ ಇ ಆಡಳಿತ ಬಿಎಸ್ಸೆನ್ನೆಲ್ ಅಂತರ್ಜಾಲ ಸಂಪರ್ಕದ ಮೇಲೆ ನಿಂತಿದೆ. ಬಿಎಸ್ಸೆನ್ನೆಲ್ ಮುಚ್ಚಿದರೆ ಸರಕಾರವನ್ನು ಖಾಸಗಿಯವರ ಕಾಲಿಗೆ ಅರ್ಪಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದರ ಗಂಭೀರತೆ ಸರಕಾರಕ್ಕೆ ಮತ್ತು ಜನ ಪ್ರತಿನಿಧಿಗಳಿಗೆ ಅರ್ಥವಾಗಬೇಕು. ಸಾರ್ವಜನಿಕ ಉದ್ದಿಮೆಗಳು ನಮ್ಮ ಆಸ್ತಿ ಮತ್ತು ನಮ್ಮ ಹಿರಿಮೆ. ಸೇವಾ ವಲಯದಲ್ಲಿ ಈ ಉದ್ದಿಮೆಗಳು ನೀಡುತ್ತಿರುವ ಕೊಡುಗೆ ಅಪಾರ. ರಾಜ್ಯ ಸರಕಾರ ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಮೇಲೆ ಪರಿಣಾಮಕಾರಿ ಒತ್ತಡ ಹೇರಿ ಬಿಎಸ್ಸೆನ್ನೆಲ್ ಉಳಿಸುವ ಕ್ರಮಕ್ಕೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಮತ್ತು ಸರಕಾರದ ಹಿತ ಕಾಯುವ ದೃಷ್ಟಿಯಿಂದ ಬಿಎಸ್ಸೆನ್ನೆಲ್ ಪಾವತಿ ಮಾಡಬೇಕಿರುವ ಎಲ್ಲ ವಿದ್ಯುತ್ ಶುಲ್ಕವನ್ನು ರದ್ದು ಮಾಡಿ ವಿನಾಯಿತಿ ನೀಡಲಿ. ಸಾಧ್ಯವಾದರೆ ಕಾನೂನು ತಿದ್ದುಪಡಿ ಮಸೂದೆ ಮೂಲಕ ನಮ್ಮ ರಾಜ್ಯಕ್ಕೆ ಸೀಮಿತವಾಗಿ ಬಿಎಸ್ಸೆನ್ನೆಲ್ ಸಂಸ್ಥೆಯನ್ನು ರಾಜ್ಯ ಸರಕಾರವೇ ಪಡೆಯಲಿ ಎಂದು ರಮೇಶ್ ಬಾಬು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News